ADVERTISEMENT

ರಾಣಿ ಚನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ

ವಿದ್ಯಾರ್ಥಿಗಳ ಗೊಂದಲ ಪರಿಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 12:25 IST
Last Updated 14 ಡಿಸೆಂಬರ್ 2022, 12:25 IST
ಬಾಗಲಕೋಟೆಯಲ್ಲಿ ಬುಧವಾರ ಎಬಿಪಿವಿ ಕಾರ್ಯಕರ್ತರು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು
ಬಾಗಲಕೋಟೆಯಲ್ಲಿ ಬುಧವಾರ ಎಬಿಪಿವಿ ಕಾರ್ಯಕರ್ತರು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಪದವಿ ಪರೀಕ್ಷೆ ಫಲಿತಾಂಶವನ್ನು ನಿಗದಿತ ಸಮಯದಲ್ಲಿ ಪ್ರಕಟಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಬುಧವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಿದರು.

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಕ್ಷಣದ ಆಲಯಗಳಾಗಬೇಕು. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಆದರೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.

ಪದೇ ಪದೇ ಪಠ್ಯ ಬದಲಾಯಿಸುತ್ತಿದ್ದು, ಪಠ್ಯ ಬದಲಾವಣೆ ಕೈಬಿಡಬೇಕು.ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾದ ನಂತರ ಪರೀಕ್ಷಾ ಅರ್ಜಿ ತುಂಬಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಪಡೆಯಲು ₹5 ಸಾವಿರ ಶುಲ್ಕ ಪಾವತಿಸಿಕೊಳ್ಳಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದ್ದು, ಹೆಚ್ಚಳ ಮಾಡಿರುವುದನ್ನು ಕೈಬಿಟ್ಟು, ಈ ಹಿಂದಿನ ₹1,500 ಪಾವತಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಯು.ಜಿ ಹಾಗೂ ಪಿ.ಜಿ. ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಹಿಂಪಡೆಯಬೇಕು.ಆರ್ಟಿಫಿಷಿಯಲ್ ಇಂಟಲ್‌ಜೆನ್ಸಿ ವಿಷಯದ ಕಂಟೆಂಟ್ ಬಳಕೆ ಮಾಡಲು ಪ್ರತಿ ವಿದ್ಯಾರ್ಥಿಗಳಿಂದ ₹150 ಪಡೆಯುತ್ತಿರುವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಪದವಿ ತರಗತಿಗಳು ಆರಂಭವಾಗಿದ್ದು, ಎರಡು ತಿಂಗಳ ನಂತರ ಧಿಡೀರ್ ವಿವಿಧ ಕೋರ್ಸ್ ಗಳ ಪಠ್ಯ ಬದಲಾವಣೆ ಮಾಡಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದೆ.ಪ್ರಶ್ನೆಪತ್ರಿಕೆಯನ್ನು ಕನ್ನಡ ಬಿಟ್ಟು, ಇಂಗ್ಲಿಷ್‌ನಲ್ಲಿ ಮಾತ್ರ ನೀಡುತ್ತಿರುವುದು ಸರಿಯಲ್ಲ ಎಂದು ದೂರಿದರು.

ಸೆಮಿಸ್ಟರ್ ಪದ್ಧತಿ ರದ್ದುಪಡಿಸಬೇಕು.ಬಿ.ಸಿ.ಎ. ತರಗತಿಗೆ ಪಠ್ಯ ನಿಗದಿ ಮಾಡಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳ ಗೊಂದಲ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ್ ಪೂಜಾರ, ವಿಭಾಗ ಸಹ ಸಂಚಾಲಕ ಉನ್ನತ್ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ್, ಕಾರ್ಯಕರ್ತರಾದ ಶ್ರೇಯಸ್ ಶೆಟ್ಟಿ, ಸುಹಾಸ್ ಬಡಿಗೇರ, ಸಚಿನ್ ಹಾದಿಮನಿ, ಸ್ವಸ್ತಿಕ್ ಶೆಟ್ಟಿ, ಹಯವದನ ದೇಸಾಯಿ, ಧೀರಜ್ ವರ್ಣೇಕರ, ಓಂಕಾರ್ ಪೀಪಲ್ಲ್ವಾ, ಹರ್ಷ ಚಂಡಕ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.