ADVERTISEMENT

ಇಳಕಲ್‌ | ಬಾರದ ಮಳೆ, ಹರಿಯದ ಕೃಷ್ಣೆ, ತಪ್ಪದ ಕಷ್ಟ

ಬಸವರಾಜ ಅ.ನಾಡಗೌಡ
Published 23 ಅಕ್ಟೋಬರ್ 2023, 3:22 IST
Last Updated 23 ಅಕ್ಟೋಬರ್ 2023, 3:22 IST
ಇಳಕಲ್‌ ತಾಲ್ಲೂಕಿನ ವಜ್ಜಲ ಗ್ರಾಮ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಹಾಳಾಗಿರುವ ಮೆಕ್ಕೆಜೋಳದ ಬೆಳೆ.
ಇಳಕಲ್‌ ತಾಲ್ಲೂಕಿನ ವಜ್ಜಲ ಗ್ರಾಮ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಹಾಳಾಗಿರುವ ಮೆಕ್ಕೆಜೋಳದ ಬೆಳೆ.   

ಇಳಕಲ್‌: ʼಈ ವರ್ಷ ದಶಕದಲ್ಲಿಯೇ ಅತ್ಯಂತ ಕಡಿಮೆ ಮಳೆಯಾಗಿದ್ದು, ವಾಡಿಕೆಯಂತೆ ಮಳೆಯಾಗಬಹುದು ಎಂದುಕೊಂಡು ಬಿತ್ತನೆ ಮಾಡಿರುವ ರೈತರು ಬರದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 22608 ಹೆಕ್ಟರ್‌ ಬೆಳೆ ಒಣಗಿ 102 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನಲ್ಲಿ ಶೇ.80ರಷ್ಟು ಖುಷ್ಕಿ ಭೂಮಿ ಇದ್ದು, ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಒಣಗಿವೆ. ತೇವಾಂಶದ ಕೊರತೆಯಿಂದಾಗಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಜೋಳ ಹಾಗೂ ಕಡಲೆ ಈವರೆಗೂ ಬಿತ್ತನೆಯಾಗಿಲ್ಲ. ಇರುವ ಅತ್ಯಲ್ಪ ನೀರಾವರಿ ಪ್ರದೇಶದಲ್ಲಿ ಬೆಳೆಯಲಾದ ಮೆಕ್ಕೆಜೋಳಕ್ಕೆ ರೋಗಭಾದೆ ಕಾಡುತ್ತಿದೆ. ತೇವಾಂಶದ ಕೊರತೆಯಿಂದ ಮಳೆಯಾಶ್ರಿತ 2840 ಹೆಕ್ಟರ್‌ನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, 1562 ಹೆಕ್ಟರ್‌ ಸಜ್ಜೆ, 8430 ಹೆಕ್ಟರ್‌ ತೊಗರಿ, 195 ಹೆಕ್ಟರ್‌ ಹತ್ತಿ, 1797 ಹೆಕ್ಟರ್‌ ಸೂರ್ಯಕಾಂತಿ ಬೆಳೆ ನಷ್ಟವಾಗಿದೆʼ ಎಂದು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಟಕ್ಕಳಕಿ ತಿಳಿಸಿದ್ದಾರೆ.

474 ಹೆಕ್ಟರ್‌ ಕಬ್ಬು, 5066 ಹೆಕ್ಟರ್‌ ಮೆಣಸಿನಕಾಯಿ, 2214 ಹೆಕ್ಟರ್‌ ಉಳ್ಳಾಗಡ್ಡಿ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ಸುಲ್ಪಿ ತಿಳಿಸಿದ್ದಾರೆ. ಹಿಂಗಾರು ಹಂಗಾಮು ಬಿತ್ತನೆಗೆ ಸಂಗ್ರಹಿಸಲಾದ ಬಿಳಿಜೋಳ, ಕಡಲೆ ಬಿತ್ತನೆ ಬೀಜ ರೈತರಲ್ಲಿ ಹಾಗೂ ಕೃಷಿ ಇಲಾಖೆಯಲ್ಲಿ ಉಳಿದಿವೆ. ಕಂದಗಲ್, ನಂದವಾಡಗಿ, ಕರಡಿ, ಗುಡೂರ ಭಾಗದಲ್ಲಿ ಹಿಂದೆ ಅಲ್ಪ ಮಳೆಯಾಗಿತ್ತು. ಧೈರ್ಯ ಮಾಡಿ ಕೇಲವು ರೈತರು ಬಿತ್ತನೆ ಮಾಡಿದ್ದರು. ಆದರೆ ನಂತರ ಮಳೆಯಾಗಲೇ ಇಲ್ಲ. ಈಗ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.

ADVERTISEMENT

ಖರ್ಚಾದ ಹಣ, ಹರಿಯದ ನೀರು

ತಾಲ್ಲೂಕಿನ ಉತ್ತರಕ್ಕೆ ನಾರಾಯಣಪುರ ಬಸವಸಾಗರದ ಹಿನ್ನೀರು ಸಾಗರೊಪಾದಿಯಲ್ಲಿ ನಿಂತಿದೆ. ಮರೋಳ ಏತ ನೀರಾವರಿ ಯೋಜನೆಯ ೧ನೇ ಹಂತದ ಹರಿ ನೀರಾವರಿ ಹಾಗೂ ೨ನೇ ಹಂತದ ಹನಿ ನೀರಾವರಿ ಯೋಜನೆಗೆ ೧೫೦೦ ಕೋಟಿ ಹಣ ಖರ್ಚಾಗಿದೆ. ಈ ಯೋಜನೆ ಹುನಗುಂದ-ಇಳಕಲ್‌ ಅವಳಿ ತಾಲ್ಲೂಕುಗಳ ೧ಲಕ್ಷ ಏಕರೆ ಜಮೀನಿಗೆ ನೀರುಣಿಸಬೇಕಿತ್ತು. ಕಳಪೆ ಕಾಮಗಾರಿ, ಕೆಬಿಜೆಎನ್‌ಎಲ್‌ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ.

ನದಿಯ ದಡದಲ್ಲಿ ರೈತರು ಸ್ವಂತ ಖರ್ಚಿನಲ್ಲಿ ಪೈಪ್‌ಲೈನ್‌, ಪಂಪ್‌ಸೆಟ್‌ ಹಾಕಿಕೊಂಡು ಹಾಗೂ ಕಾಲುವೆಯಿಂದ ಡಿಸೆಲ್‌ ಪಂಪ್‌ಗಳ ಮೂಲಕ ನೀರೆತ್ತಿಕೊಂಡು ತಮ್ಮ ಜಮೀನುಗಳಿಗೆ ನೀರುಣಿಸಿ ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಂಡಿದ್ದಾರೆ. ಕೇವಲ ೫ ಗಂಟೆ ಅನಿಯಮಿತ ವಿದ್ಯುತ್‌ ನೀಡುವ ಹೆಸ್ಕಾಂ ವಿರುದ್ಧ ರೈತು ಆಕ್ರೋಶಗೊಂಡು ಈಚೆಗೆ ಪ್ರತಿಭಟನೆ ಮಾಡಿದ್ದರು. ಉಳಿದಂತೆ ಒಣಗುತ್ತಿರುವ ತೊಗರಿ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆ ಹಾಗೂ ಬಿತ್ತನೆಯಾಗದ ಕಪ್ಪುಭೂಮಿ ಎಲ್ಲೇಡೆ ಕಾಣ ಸಿಗುತ್ತದೆ.

ಮೇವಿನ ಕೊರತೆ ಸದ್ಯಕ್ಕಿಲ್ಲ

ಸದ್ಯಕ್ಕೆ ತಾಲ್ಲೂಕಿನಲ್ಲಿ ಮೇವಿನ ಕೊರತೆ ಇಲ್ಲ. ಮುಂದಿನ ನಾಲ್ಕೈದು ತಿಂಗಳು ದನಕರುಗಳಿಗೆ ಬೇಕಾದಷ್ಟು ಮೇವು ರೈತರಲ್ಲಿದೆ ಎಂದು ಪಶು ಸಂಗೋಪನೆ ಇಲಾಖೆಯ ಡಾ.ಎಸ್.ಜಿ.ಹಿರೇಮಠ ಹೇಳಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ಅನೇಕ ಗ್ರಾಮಗಳಲ್ಲಿ ಸಪ್ತ ಭಜನೆ, ಕತ್ತೆ, ಕಪ್ಪೆಗಳ ಮದುವೆ, ಗುರ್ಜಿ ಆಚರಣೆ ಹೀಗೆ ಅನೇಕ ಜಾನಪದ ಆಚರಣೆಗಳನ್ನು ಮಾಡಿದರು.

ಯಾರು ಏನಂದರು?

ʼಈಗ ಮಳೆಯಾದರೂ ಬಾಡಿದ ಬೆಳೆಗಳು ಸುಧಾರಿಸಲಾರವು ಹಾಗೂ ಬಿತ್ತನೆಯಾಗದ ಹೊಲಗಳನ್ನು ಈಗ ಬಿತ್ತಲು ತಥಿ ಇಲ್ಲ. ಒಟ್ಟಾರೆ ಈ ವರ್ಷ ತೀವ್ರ ಬರ. ಜೀವನ ನಡೆಸೋದು ತೀವ್ರ ಕಷ್ಟವಾಗಲಿದೆ' - ಯಮನಪ್ಪ ಮರಟಗೇರಿ, ಕೃಷ್ಣಾಪೂರ ಗ್ರಾಮ.

ʼನಾಲ್ಕು ಏಕರೆಯಲ್ಲಿ ಬಿತ್ತಿದ ತೊಗರಿ ಹೂ ಬಿಡುವ ಹಂತದಲ್ಲಿ ಮಳೆಯಾಗದ ಕಾರಣ ಒಣಗಿದೆ. ಹೊಲ ಹದಗೊಳಿಸಲು, ಬಿತ್ತನೆ ಮಾಡಲು, ಬೀಜ, ಗೊಬ್ಬರ, ಕೀಟ ನಾಶಕ ಹೀಗೆ ೩೦ ಸಾವಿರ ಖರ್ಚು ಮಾಡಿದ್ದೆ. ಒಂದು ರೂಪಾಯಿ ಕೂಡಾ ಮರಳಿ ಬರುವ ಲಕ್ಷಣವಿಲ್ಲʼ - ಶಿವಕುಮಾರ ಬರಿಗಾಲ, ಗುಡೂರ (ಎಸ್‌.ಬಿ) ಗ್ರಾಮ.

ಇಳಕಲ್‌ ತಾಲ್ಲೂಕಿನ ಹಿರೇಓತಗೇರಿ ಗ್ರಾಮ ವ್ಯಾಪ್ತಿಯಲ್ಲಿ ತೇವಾಂಶ ಕೊರತೆಯಿಂದ ಬಾಡಿರುವ ತೊಗರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.