ಜಮಖಂಡಿ: ಒಣದ್ರಾಕ್ಷಿ ಸಂಗ್ರಹಣೆಗೆ ಶೀತಲ ಘಟಕಗಳ(ಕೋಲ್ಡ್ ಸ್ಟೋರೇಜ್) ಕೊರತೆ ಇರುವುದರಿಂದ ಬಹುತೇಕ ರೈತರು ಮಹಾರಾಷ್ಟ್ರದತ್ತ ಮುಖ ಮಾಡುತ್ತಿದ್ದಾರೆ. ಈ ಭಾಗದಲ್ಲಿ ವ್ಯಾಪಕ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದು, ವಿಜಯಪುರ ಹೊರತುಪಡಿಸಿದರೆ ಸುತ್ತಮುತ್ತ ಯಾವುದೇ ಬೃಹತ್ ಶೀತಲ ಘಟಕ ಇಲ್ಲದಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ.
ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಮಧ್ಯೆ ಒಣ ದ್ರಾಕ್ಷಿ ಸಿದ್ಧಪಡಿಸುವುದು ರೈತರಿಗೆ ಸವಾಲಿನ ಕೆಲಸ. ಒಣ ದ್ರಾಕ್ಷಿ ಶೇಖರಿಸಿಡಲು ಶೀತಲ ಘಟಕಗಳ ಕೊರತೆ ಇರುವುದರಿಂದ ಸರ್ಕಾರ ಜಮಖಂಡಿ ತಾಲ್ಲೂಕಿನ ಸಾವಳಗಿ ಭಾಗದಲ್ಲಿ ಒಂದು ಶೀತಲ ಘಟಕ ಆರಂಭಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಜಮಖಂಡಿ ತಾಲ್ಲೂಕಿನಲ್ಲಿ ಒಟ್ಟು 6,300 ಹೆಕ್ಟೇರ್ ದ್ರಾಕ್ಷಿ ಬೆಳೆಯುವ ರೈತರಿದ್ದಾರೆ, ಅದರಲ್ಲಿ ಶೇ 90ರಷ್ಟು ರೈತರು ಒಣ ದ್ರಾಕ್ಷಿ ತಯಾರಿಸುತ್ತಾರೆ, ಅಂದಾಜು 40 ಸಾವಿರ ಟನ್ ಜಮಖಂಡಿಯಲ್ಲಿ ತಯಾರಾಗುತ್ತದೆ. ಸುತ್ತಮುತ್ತಲಿನಲ್ಲಿ ಖಾಸಗಿಯವರು ಮಾಡಿರುವ ಸಣ್ಣಪುಟ್ಟ ಶೀತಲ ಘಟಕಗಳಲ್ಲಿ ಎರಡು ಸಾವಿರ ಟನ್ ಮಾತ್ರ ಅವಕಾಶವಿದೆ, ಉಳಿದ ಒಣ ದ್ರಾಕ್ಷಿ ಶೇಖರಣೆ ಮಾಡಲು ರೈತರು ವಿಜಯಪುರ, ಮಹಾರಾಷ್ಟ್ರದ ತಾಸಗಾಂಗ, ಸಾಂಗಲಿಯತ್ತ ಮುಖ ಮಾಡುತ್ತಿದ್ದಾರೆ.
ಖಾಸಗಿ ಶೀತಲ ಘಟಕ ಇರುವುದರಿಂದ ಸರಿಯಾಗಿ ತಂಪಾಗುವ ವ್ಯವಸ್ಥೆ ಇಲ್ಲ, ಇದರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ಪ್ರತಿ ತಿಂಗಳಿಗೆ ಒಂದು ಟನ್ ಒಣದ್ರಾಕ್ಷಿಗೆ ₹800 ರಿಂದ ₹1200 ರವರೆಗೆ ಬಾಡಿಗೆ ತೆಗೆದುಕೊಳ್ಳುತ್ತಾರೆ ಎಂದು ರೈತ ಚನ್ನಪ್ಪ ಚನವೀರ ತಿಳಿಸಿದರು.
ತೊದಲಬಾಗಿಯ ತೋಟಗಾರಿಕಾ ಉತ್ಪಾದಕರ ಸಂಘ ಜಮಖಂಡಿ ಅವರ ಮೂಲಕ ಸರ್ಕಾರಕ್ಕೆ ಶೀತಲ ಘಟಕ ತಯಾರಿಕಾ ಘಟಕ ನೀಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಪ್ರವೀಣ ಗಾಣಗೇರ ತಿಳಿಸಿದರು.
‘ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆ‘
‘ಸಾವಳಗಿ ಭಾಗದಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುವುದರಿಂದ 10ಸಾವಿರ ಟನ್ ಸಂಗ್ರಹಿಸುವ ಶೀತಲ ಘಟಕವನ್ನು ಸರ್ಕಾರ ಮುಂಜೂರು ಮಾಡಬೇಕು ಅಂದಾಜು ₹10ಕೋಟಿ ವೆಚ್ಚದಲ್ಲಿ ಶೀತಲ ಘಟಕ ತಯಾರಾಗುತ್ತದೆ. ಹಲವು ವರ್ಷಗಳಿಂದ ಹೆಚ್ಚುವರಿ ಶೀತಲ ಘಟಕಗಳ ನಿರ್ಮಾಣಕ್ಕೆ ಒತ್ತಡ ಹೇರುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯಿಂದ ಬೇಡಿಕೆ ಈಡೇರಿಲ್ಲ’ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಅಸೋಸಿಯೇಷನ್ ಅಧ್ಯಕ್ಷ ಅಭಯಕುಮಾರ್ ಎಸ್.ನಾಂದ್ರೇಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.