ADVERTISEMENT

ಸಮಸ್ಯೆಗೆ ಧ್ವನಿಯಾಗುವ ಸಂಯುಕ್ತಾ ಗೆಲ್ಲಿಸಿ

ರಾಜ್ಯ, ಜಿಲ್ಲೆಗಾದ ಅನ್ಯಾಯ ಪ್ರಶ್ನಿಸದ ಗದ್ದಿಗೌಡರು; ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 16:08 IST
Last Updated 27 ಏಪ್ರಿಲ್ 2024, 16:08 IST
ರಬಕವಿ ಬನಹಟ್ಟಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ರಬಕವಿ ಬನಹಟ್ಟಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು   

ಬಾಗಲಕೋಟೆ: ‘ರಾಜ್ಯಕ್ಕೆ ತೆರಿಗೆಯಲ್ಲಿ ಅನ್ಯಾಯವಾದಾಗ, ಬರ ಪರಿಹಾರ ನೀಡದಿದ್ದಾಗ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದಿದ್ದಾಗ 20 ವರ್ಷಗಳಿಂದ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಒಮ್ಮೆಯಾದರೂ ಮಾತನಾಡಿದ್ದಾರೆಯೇ? ಯಾಕೆ ಮಾತನಾಡಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ರಬಕವಿ ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ –2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಲಾಗಿತ್ತು. ಒಮ್ಮೆಯೂ ಅವರು ಮಾತನಾಡಲಿಲ್ಲ. ಮೋದಿಯ ಮುಂದೆ ಗಡ, ಗಡನೇ ನಡುಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘15ನೇ ಹಣಕಾಸು ಯೋಜನೆಯ ಶಿಫಾರಸ್ಸಿನ ₹1.87 ಲಕ್ಷ ಕೋಟಿ ತೆರಿಗೆ ಹಣ ಬಂದಿಲ್ಲ. ಗದ್ದಿಗೌಡರಿಗೆ ಈ ವಿಷಯ ಗೊತ್ತಿದೆಯಾ? ಡಿ.ಕೆ. ಸುರೇಶ ಅವರನ್ನು ಹೊರತುಪಡಿಸಿ ಉಳಿದ ಯಾವ ಸಂಸದರೂ ಬಾಯಿ ಬಿಡಲಿಲ್ಲ. ರಾಜ್ಯ, ಜಿಲ್ಲೆಯ ಸಮಸ್ಯೆಗಳಿಗೆ ಗದ್ದಿಗೌಡರ ಧ್ವನಿಯಾಗಿಲ್ಲ. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗುವ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿರಿ’ ಎಂದು ಮನವಿ ಮಾಡಿದರು. 

ADVERTISEMENT

‘ಮೋದಿ ಪ್ರಧಾನಿಯಾಗಿ ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಕಳೆದರು. ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ ₹15 ಲಕ್ಷವಲ್ಲ, ₹15 ಕೂಡಾ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಬೆಲೆ ಏರಿಕೆ, ರೈತರ ಸಮಸ್ಯೆ, ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಕೆಲಸ ಕೇಳಿದರೆ ಬೋಂಡಾ, ಪಕೋಡಾ ಮಾರಾಟ ಮಾಡಿ’ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

‘ಬಡವರು, ಸಾಮಾನ್ಯರು, ಮಧ್ಯಮ ವರ್ಗದವರು ಜೀವನ ಮಾಡುವುದು ಕಷ್ಟವಾಗಿದೆ. ಈಗಾಗಲೇ ರಾಜ್ಯ ಸರ್ಕಾರವೂ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ನಿಮ್ಮ ನೆರವಿಗೆ ನಿಂತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ನೀಡಲಾಗುವುದು’ ಎಂದರು.

ಸಭೆಯಲ್ಲಿ ಸೇರಿದ್ದ ಜನಸ್ತೋಮ
ರಬಕವಿ ಬನಹಟ್ಟಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಬರೆದುಕೊಳ್ಳುತ್ತಾ ಕುಳಿತಿದ್ದ ಸಂಯುಕ್ತಾ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.