ADVERTISEMENT

ಅನೈರ್ಮಲ್ಯದ ತಾಣ ಚಿಟಿಗಿನಹಾಳು ಗ್ರಾಮ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 6:17 IST
Last Updated 3 ಜುಲೈ 2017, 6:17 IST
ಗ್ರಾಮದಲ್ಲಿನ ಅವ್ಯವಸ್ಥೆಯಿಂದ ನರಳುತ್ತಿರುವ ಜನರು
ಗ್ರಾಮದಲ್ಲಿನ ಅವ್ಯವಸ್ಥೆಯಿಂದ ನರಳುತ್ತಿರುವ ಜನರು   

ಕುರುಗೋಡು: ಇಲ್ಲಿಗೆ ಸಮೀಪದ ಚಿಟಗಿನಹಾಳು ಗ್ರಾಮವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮದಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲವಾಗಿದೆ. ಚರಂಡಿ ನೀರು ರಸ್ತೆಯಲ್ಲಿ ನಿಂತು, ರೋಗಗಳ ತಾಣವಾಗಿ ಪರಿಣಮಿಸಿದೆ. ಸೊಳ್ಳೆ ಕಡಿತದಿಂದ ಡೆಂಗಿ, ಚುಕುನ್‌ ಗುನ್ಯಾ, ಮಲೇರಿಯಾ ಕಾಯಿಲೆಗಳಿಗೆ ಬಹುತೇಕ ಗ್ರಾಮಸ್ಥರು ತುತ್ತಾಗಿದ್ದಾರೆ.

ಪ್ರತಿ ಚುನಾವಣೆ ಸಂದರ್ಭದಲ್ಲಿ ಶೇ 100 ಮತದಾನ ಆಗುವ ಹೆಗ್ಗಳಿಕೆ ಗ್ರಾಮಕ್ಕಿದೆ. ಆದರೆ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತೆ ಕಾಣಿಸಿಕೊಳ್ಳುವುದು ಮತ್ತೊಂದು ಚುನಾವಣೆ ಸಂದರ್ಭದಲ್ಲಿಯೇ. ಇದು ಗ್ರಾಮದ ದುರದೃಷ್ಟಕರ ಸಂಗತಿ ಗ್ರಾಮಸ್ಥರ ಅಳಲು. ಚರಂಡಿ, ವಿದ್ಯುತ್, ಆರೋಗ್ಯ, ರಸ್ತೆ, ಗ್ರಾಮ ನೈರ್ಮಲ್ಯ, ಶಿಕ್ಷಣದಿಂದ ವಂಚಿತವಾಗಿರುವ ಈ ಗ್ರಾಮ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ.

ಸೂರ್ಯನಾರಾಯಣ ರೆಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ಚಿಟಗಿನಹಾಳು ಗ್ರಾಮ ಸ್ವಚ್ಛಗ್ರಾಮ ಯೋಜನೆಗೆ ಆಯ್ಕೆಯಾಗಿತ್ತು. ₹24 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆ ಜಾರಿಗೂ ಮುನ್ನ ಸ್ವಚ್ಛವಾಗಿದ್ದ ಗ್ರಾಮವು ಯೋಜನೆಯಡಿ ಕೈಗೊಂಡ ಕಾಮಗಾರಿಯಿಂದಾಗಿ ಇನ್ನಷ್ಟು ಹದಗೆಟ್ಟಿತು.

ADVERTISEMENT

ಸಿ.ಸಿ.ರಸ್ತೆ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಗ್ರಾಮದ ಮುಖ್ಯ ರಸ್ತೆಗೆ ಮಾತ್ರ ಚರಂಡಿ ಸೀಮಿತವಾಗಿದೆ. ಉಳಿದ ಭಾಗದಲ್ಲಿ ಚರಂಡಿ ನಿರ್ಮಿಸಿಲ್ಲ. ಪ್ರತಿ ಓಣಿ, ರಸ್ತೆಯಲ್ಲಿ ತಗ್ಗು, ಗುಂಡಿಗಳು ನಿರ್ಮಾಣಗೊಂಡಿವೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಜನ ಜಾನುವಾರು ಸಂಚರಿಸುವುದು ಒಂದು ದೊಡ್ಡ ಸಮಸ್ಯೆಯಾಗಿದೆ.ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರ್ಷ ಆದ್ರು ಬಂದಿಲ್ಲ
‘₹75 ಲಕ್ಷ ಅನುದಾನ ಬಂದೈತೆ. ಊರಾಗ ಕುಡ್ಯಾಕ ನೀರಿಲ್ಲ. ಚರಂಡಿ, ರೋಡ್ ಮಾಡ್ತೀವಿ ಅಂತ ಹೇಳಿ ಎಂಎಲ್‌ಎ ಬಂದು ರೋಡ್‌ ಪೂಜಿ ಮಾಡಿ ಹೋಗಿ ಒಂದು ವರ್ಷ ಆದ್ರು ಏನು ಆಗಿಲ್ಲ’ ಎಂದು ಸ್ಥಳೀಯ ನಿವಾಸಿ ಸಣ್ಣ ಈರಣ್ಣ ಗ್ರಾಮಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಬಳಿ ಸಮಸ್ಯೆ ವಿವರಿಸಿದರು.

ಬಹುತೇಕರಿಗೆ ಡೆಂಗಿ ಜ್ವರ
ಕಲುಷಿತ ನೀರಿನಿಂದ ಗ್ರಾಮವು ಸಂಪೂರ್ಣ ಕೊಳಚೆ ಪ್ರದೇಶವಾಗಿ ರೂಪುಗೊಂಡಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಬಹುತೇಕರು ಡೆಂಗಿ, ಚಿಕುನ್‌ ಗುನ್ಯಾ ಕಾಯಿಲೆಗೆ ತುತ್ತಾಗಿದ್ದಾರೆ.

ಚಿಕಿತ್ಸೆಗೆ ಲಕ್ಷಾಂತರ ಖರ್ಚು
ಸೊಳ್ಳೆ ಕಡಿತದಿಂದ ಡೆಂಗಿ ಜ್ವರಕ್ಕೆ ತುತ್ತಾಗಿ ₹5 ಲಕ್ಷ ವೆಚ್ಚ ಮಾಡಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಗ್ರಾಮದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲದೇ ಕುಗ್ರಾಮವಾಗಿದೆ. ಸೌಕರ್ಯ ಕಲ್ಪಿಸುವಂತೆ ಮನವಿಗಳನ್ನು ಸಲ್ಲಿಸಿ ಸಾಕಾ ಗಿದೆ ಎಂದು ಗ್ರಾಮದ ಎಂಜಿನಿಯರಿಂಗ್ ಪದವೀ ಧರ ಎಸ್.ದೊಡ್ಡಬಸವ ಅವ್ಯವಸ್ಥೆ ಬಿಚ್ಚಿಟ್ಟರು.

ಚಿಟಿಗಿನಹಾಳು  ಗ್ರಾಮದ ಅಂಕಿ ಅಂಶ
1250ಗ್ರಾಮದಲ್ಲಿರುವ ಒಟ್ಟು ಜನಸಂಖ್ಯೆ

ಅಧಿಕಾರಿಗಳ ನಿರ್ಲಕ್ಷ್ಯಜನರು ರೋಗ ಭೀತಿಯಲ್ಲಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

500ಗ್ರಾಮದಲ್ಲಿರುವ ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.