ಬಳ್ಳಾರಿ: ನಗರದ ತೇರು ಬೀದಿಯಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ದಟ್ಟಣೆ ತಗ್ಗಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿನ ವಿಶಾಲ ಜಾಗೆಗೆ ಸ್ಥಳಾಂತರಿಸಲಾಗಿದೆ. ಆದರೆ, ಮೂಲ ಸೌಲಭ್ಯದ ಕೊರತೆ, ಜಾನುವಾರುಗಳ ಕಾಟದಿಂದ ವ್ಯಾಪಾರಿಗಳಿಗೆ ಮುಕ್ತಿ ದೊರಕಿಸಿಲ್ಲ.
ನಿತ್ಯವೂ ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳ ಮಾರಾಟಕ್ಕೆಂದು ಬೆಳಗಾಗುವುದರೊಳಗೆ ವಿವಿಧ ಗ್ರಾಮಗಳಿಂದ ಆಗಮಿಸುವ ರೈತರು, ವ್ಯಾಪಾರಿಗಳು, ದಲ್ಲಾಳಿಗಳಿಂದ ಮಾರುಕಟ್ಟೆ ಸಮಿತಿಯವರು ಶುಲ್ಕ ಸ್ವೀಕರಿಸುತ್ತಿದ್ದಾರೆ. ಆದರೆ, ದನ- ಕರುಗಳು, ಕುರಿ, ಮೇಕೆ, ಹಂದಿಗಳ ಕಾಟವನ್ನು ತಪ್ಪಿಸುತ್ತಿಲ್ಲ ಎಂಬುದು ಅನೇಕರ ಆರೋಪವಾಗಿದೆ.
ಗ್ರಾಹಕರತ್ತ ಗಮನ ಹರಿಸಿ, ವ್ಯಾಪಾರ ಮಾಡುವಾಗ ದಿಢೀರ್ ನುಗ್ಗುವ ಎಮ್ಮೆಗಳು, ಹಂದಿಗಳು, ಕುರಿ, ಮೇಕೆಗಳು ಕೃಷಿ ಉತ್ಪನ್ನಗಳನ್ನು ತಿಂದು ತೇಗುತ್ತಿವೆ. ಹೊಡೆಯಲು ಹೋದರೆ, ಬಲಿಷ್ಟವಾಗಿರುವ ಅವೇ ಜನರನ್ನು ಇರಿಯಲೂ ಬರುತ್ತವೆ. ಇದರಿಂದ ವ್ಯಾಪಾರದ ಕಡೆ ಗಮನ ಹರಿಸಬೇಕೋ, ದನಕರುಗಳನ್ನೇ ಕಾಯುತ್ತ ನಿಲ್ಲಬೇಕೋ ಎಂಬುದು ಗೊತ್ತಾಗುತ್ತಿಲ್ಲ ಎಂದು ತರಕಾರಿ ಮಾರುವ ಚಂದ್ರ ಎಂಬುವವರು ಗೋಳು ತೋಡಿಕೊಳ್ಳುತ್ತಾರೆ.
ಆವರಣದಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿಲ್ಲ. ಈ ಕುರಿತು ಅಧಿಕಾರದಲ್ಲಿರುವವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ ನೀಡಿ ಆಯ್ಕೆ ಮಾಡಿರುವ ರೈತರ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಿದೆ ಎಂದು ಎಪಿಎಂಸಿ ಸದಸ್ಯ ಬಿ.ರಂಗಾರೆಡ್ಡಿ ಹೇಳುತ್ತಾರೆ. ಮಾರುಕಟ್ಟೆ ಪ್ರಾಂಗಣದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನಿತ್ಯವೂ ಬರುವ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಇಡುತ್ತಿದ್ದು, ಅವುಗಳ ರಕ್ಷಣೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಧ್ಯಕ್ಷರು ಈ ಕುರಿತು ಗಮನ ಹರಿಸಿಲ್ಲ.
ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸಮಿತಿಯ ಇತರ ಸದಸ್ಯರೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ ಎಂಬುದು ಅವರ ಆರೋಪ.
ನಿತ್ಯವೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ತರಕಾರಿ ವ್ಯಾಪಾರ- ವಹಿವಾಟು ನಡೆಯುತ್ತದೆ. ನಂತರ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕಿದೆ. ಈ ಕುರಿತು ಸಮಿತಿಯು ಕೆಲವರಿಗೆ ಗುತ್ತಿಗೆಯನ್ನು ನೀಡಿದ್ದರೂ. ಸ್ವಚ್ಛತೆ ಮರೀಚಿಕೆಯಾಗಿದೆ. ರೋಗ- ರುಜಿನ ಹರಡುವ ತಾಣವಾಗಿ, ಗಬ್ಬು ವಾಸನೆ ಬೀರುತ್ತ ಇಡೀ ಮಾರುಕಟ್ಟೆಯ ಪರಿಸರಕ್ಕೇ ಮಾರಕವಾಗಿದೆ ಎಂದು ವ್ಯಾಪಾರಿಗಳು, ರೈತರು ದೂರುತ್ತಾರೆ.
ಪ್ರವೇಶ ದ್ವಾರದ್ದೇ ಸಮಸ್ಯೆ: ಅನೇಕ ಎಪಿಎಂಸಿ ಪ್ರಾಂಗಣಗಳಿಗೆ ಒಂದು ಅಥವಾ ಎರಡು ಪ್ರವೇಶ ದ್ವಾರಗಳಿರುತ್ತವೆ. ಆದರೆ, ಇಲ್ಲಿ ಐದಾರು ಪ್ರವೇಶ ದ್ವಾರಗಳಿವೆ. ದನಕರುಗಳು ಎಲ್ಲಿಂದ ಪ್ರವೇಶಿಸುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಅಲ್ಲದೆ, ಕುರಿ, ಮೇಕೆ, ಎಮ್ಮೆ, ಆಕಳುಗಳನ್ನು ರೈತರು, ಹಮಾಲರೇ ತಮ್ಮ ಜತೆ ತರುತ್ತಾರೆ. ಅವರಿಗೆ ಈ ಕುರಿತು ಹೇಳಿದರೂ ಗಮನಿಸುತ್ತಿಲ್ಲ ಎಂದು ಎಪಿಎಂಸಿ ಅಧ್ಯಕ್ಷ ಕೆ.ರವೀಂದ್ರ `ಪ್ರಜಾವಾಣಿ~ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆದರೂ ಸಮಿತಿಯಿಂದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಒಂದು ಕಡೆ ಕಂಪೌಂಡ್ ಗೋಡೆಯೇ ಇರಲಿಲ್ಲ. ಇತ್ತೀಚೆಗಷ್ಟೇ ಅಲ್ಲಿ ಕಂಪೌಂಡ್ ಕಟ್ಟಿದರೂ ಪಕ್ಕದ ಬಡಾವಣೆಯಲ್ಲಿ ವಾಸಿಸುವ ಕೂಲಿಕಾರರು ಅದನ್ನು ಕೆಡವಿದ್ದಾರೆ. ಇವೆಲ್ಲವನ್ನೂ ತಡೆಯುವುದೇ ದುಸ್ತರವಾಗಿದೆ ಎಂದು ಅವರು ಹೇಳುತ್ತಾರೆ.
ಸಮಿತಿಯ ಕಾರ್ಯದರ್ಶಿಯವರಿಗೆ ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಗಿದೆ. ಸೂಕ್ತ ಭದ್ರತೆ ನೀಡುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಸೂಚಿಸಲಾಗಿದೆ. ಅಕ್ರಮವಾಗಿ ದನ-ಕರು ಪ್ರವೇಶಿಸಿದರೆ ಸಂಬಳವನ್ನೇ ನೀಡುವುದಿಲ್ಲ ಎಂದೂ ಎಚ್ಚರಿಸಲಾಗಿದೆ. ಆದರೆ, ಅವರ ಜತೆಗೇ ಜನ ಜಗಳವಾಡುತ್ತಾರೆ. ಹೀಗಾದರೆ, ಸಮಸ್ಯೆಗೆ ಪರಿಹಾರ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಮಾದರಿ ಪ್ರಾಂಗಣ ಮಾಡಲು ಶ್ರಮಿಸಲಾಗುತ್ತಿದೆ.
ಮುಖ್ಯ ದ್ವಾರಗಳನ್ನು ಹೊರತುಪಡಿಸಿ, ಮಿಕ್ಕ ಕಡೆ ಮನುಷ್ಯರು ಮಾತ್ರ ಒಳ ಪ್ರವೇಶಿಸುವುದಕ್ಕೆ ಸಾಧ್ಯವಾಗುವಂತೆ ವಿಶಿಷ್ಟ ಗೇಟ್‌ಗಳನ್ನು ಅಳವಡಿಸಲು ಆಲೋಚಿಸಲಾಗಿದೆ. ಕೆಲವೇ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸುತ್ತಾರೆ.
ಎಪಿಎಂಸಿ ಆವರಣದಲ್ಲಿ ಹಲವು ಸಮಸ್ಯೆಗಳಿದ್ದು, ಮಾರುಕಟ್ಟೆಗೆ ಬರುವ ರೈತರಿಗೆ ಯಾವುದೇ ಸೌಲಭ್ಯ ನೀಡಲಾಗಿಲ್ಲ. ಅಧಿಕಾರಿಗಳೂ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಸಿಸಿ ರಸ್ತೆ ಕಾಮಗಾರಿಯೂ ಆರಂಭವಾಗಿಲ್ಲ. ಕೂಡಲೇ ಎಲ್ಲ ಅಗತ್ಯ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಬೇಕಿದೆ ಎಂಬುದು ಅನೇಕರ ಕೋರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.