ADVERTISEMENT

ಆರೋಗ್ಯ ಕರ್ನಾಟಕ: ಸಮರ್ಪಕ ಜಾರಿ ಅಗತ್ಯ

ಯೋಜನೆ ಕುರಿತು ವೈದ್ಯಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ: ಡಾ.ರಜನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:32 IST
Last Updated 9 ಜೂನ್ 2018, 9:32 IST

ಬಳ್ಳಾರಿ: ‘ರಾಜ್ಯದಲ್ಲಿ ಪ್ರಸ್ತುತ ಜಾರಿಯಲಿದ್ದ ವಿವಿಧ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪೌಷ್ಠಿಕ ಆಹಾರ ನಿರ್ದೇಶನಾಲಯದ ಉಪನಿರ್ದೇಶಕಿ ಮತ್ತು ಜಿಲ್ಲಾ ನೋಡಲ್ ಅಧಿಕಾರಿ ಡಾ.ಬಿ.ಎನ್.ರಜನಿ ಹೇಳಿದರು.

ಇಲಾಖೆಯು ಜಿಲ್ಲಾಡಳಿತ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ವಿಮ್ಸ್‌ನಲ್ಲಿ ಶುಕ್ರವಾರ ವೈದ್ಯಾಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ‘ರಾಜ್ಯದ ಎಲ್ಲಾ ನಾಗರಿಕರಿಗೆ ಪ್ರಾಥಮಿಕ ಹಂತದ ಆರೋಗ್ಯ ರಕ್ಷಣೆ, ನಿಗದಿತ ದ್ವಿತೀಯ ಹಂತದ ಆರೋಗ್ಯ ರಕ್ಷಣೆ ಹಾಗೂ ತೃತಿಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು’ ಎಂದರು.

‘ಅರ್ಹತಾ ರೋಗಿಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಶಿಫಾರಸಿನ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಒದಗಿಸಲಾಗುತ್ತದೆ. ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುತ್ತದೆ’ ಎಂದರು.

ADVERTISEMENT

‘ಪ್ರಾಥಮಿಕ ಹಂತದ ಅನಾರೋಗ್ಯಕ್ಕೆ, ಡೆಂಗಿ, ಮಲೇರಿಯಾ ಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಸಂಕೀರ್ಣವಾದ ದ್ವಿತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಚಿಕಿತ್ಸೆ ಸಾಧ್ಯ
ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು’ ಎಂದರು.

‘ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಖಾಯಿಲೆಗೆ ಸರ್ಕಾರಿ ಸಂಸ್ಥೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳಿಸಲಾಗುವುದು’ ಎಂದರು.

ಎಷ್ಟು ಮೊತ್ತದ ಚಿಕಿತ್ಸೆ?: ‘ದ್ವಿತೀಯ ಹಂತದ ಚಿಕಿತ್ಸೆಗಳಿಗೆ ಐದು ಸದಸ್ಯರ ಕುಟುಂಬಕ್ಕೆ ಒಂದು ವರ್ಷಕ್ಕೆ ₹ 30 ಸಾವಿರ ಚಿಕಿತ್ಸೆ ಸೌಲಭ್ಯವಿದೆ. ತೃತೀಯ ಹಂತದ ಚಿಕಿತ್ಸೆಗಳಿಗೆ ಪಾಕೇಜ್‌ಗಳ ಆಧಾರದಲ್ಲಿ ಒಂದು ವರ್ಷಕ್ಕೆ ₹ 1.50 ಲಕ್ಷದ ಚಿಕಿತ್ಸೆ ನೀಡಲಾಗುವುದು. ಈ ಹಣ ಮುಗಿದ ನಂತರ ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ಹಾಗೂ ಹೆಚ್ಚುವರಿಯಾಗಿ ₹ 50 ಸಾವಿರದ ಚಿಕಿತ್ಸೆ ಲಭ್ಯವಿದೆ’ ಎಂದರು.

ವಿಮ್ಸ್‌ ನಿವಾಸಿ ವೈದ್ಯಾಧಿಕಾರಿ ಡಾ.ರವಿ ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು, ವೈದ್ಯಕೀಯ ಅಧೀಕ್ಷಕ ಡಾ.ಮರಿರಾಜ್, ಹಿರಿಯ ಶಸ್ತ್ರಚಿಕಿತ್ಸಕ ಡಾ. ಪ್ರಭು ಹುಬ್ಬಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಅನಿಲಕುಮಾರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಅರುಣಾ, ಡಾ.ನಿಜಾಮುದ್ದೀನ್. ಡಾ.ರಾಜಶೇಖರ ರೆಡ್ಡಿ, ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್‌ ಜಿಲ್ಲಾ ಸಂಯೋಜಕ ಹೊನ್ನೂರಸಾಬ್ ಈ ಸಂದರ್ಭದಲ್ಲಿ ಇದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ನಿರೂಪಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯೊಂದಿಗೆ ಹೆಸರು ನೋಂದಾಯಿಸಿದ ಬಳಿಕ ಹೆಲ್ತ್ ಕಾರ್ಡ್‌ ನೀಡಲಾಗುವುದು
- ಡಾ.ಬಿ.ಎನ್.ರಜನಿ, ಜಿಲ್ಲಾ ನೋಟಲ್‌ ಅಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.