ADVERTISEMENT

ಈ ಸರ್ಕಾರಿ ಶಾಲೆ ಗೋಳು ಕೇಳುವವರು ಯಾರು?

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 8:58 IST
Last Updated 27 ಡಿಸೆಂಬರ್ 2012, 8:58 IST

ಕಂಪ್ಲಿ: ಸುಸಜ್ಜಿತ ನೂತನ ಶಾಲಾ ಕೊಠಡಿಗಳ ಮಧ್ಯೆ ಹಲವು ದಶಕಗಳ ಶಿಥಿಲ ಕಟ್ಟಡ ಭೂತಬಂಗಲೆಯಂತೆ ಗೋಚರಿಸುತ್ತಿದ್ದರೆ, ಇದೇ ಕೊಠಡಿಯ ಮೇಲೆ ಮೂರು ಫೇಸ್ ವಿದ್ಯುತ್ ತಂತಿಗಳು ಹಾದು ಹೋಗಿರುವ ದೃಶ್ಯ ಇಲ್ಲಿಗೆ ಸಮೀಪದ ಕೊಂಡಯ್ಯಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಂಡುಬರುತ್ತದೆ.

ಈ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಾಲ್ಕು ಕೊಠಡಿಗಳು ನಿರ್ಮಾಣಗೊಂಡಿವೆ. ಈ ಸುಸಜ್ಜಿತ ಕೊಠಡಿಗಳ ಮಧ್ಯೆ  ಸುಮಾರು 50ವರ್ಷಗಳ ಶಿಥಿಲವಾಗಿರುವ ಕಟ್ಟಡ ಹಾಗೆಯೇ ಇದೆ.

ಶಿಥಿಲವಾದ ಕಟ್ಟಡದ ಮೇಲ್ಛಾವಣಿಗೆ ಜೋಡಿಸಿರುವ ಮಂಗಳೂರು ಹಂಚು ಆಗೊಮ್ಮೆ ಈಗೊಮ್ಮೆ ಬೀಳುತ್ತಾ ಶಬ್ಧ ಮಾಡುತ್ತಲೇ ಇರುತ್ತವೆ. ಇದೇ ಶಿಥಿಲ ಕಟ್ಟಡ ಮುಂಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ ಆಟ ಆಡುವುದು, ಕುಳಿತುಕೊಳ್ಳುವುದು ಮಾಡುತ್ತಾರೆ.

ಈ ಸಂದರ್ಭದಲ್ಲಿ ಹಂಚು ಆಕಸ್ಮಿಕ ಮಕ್ಕಳ ಮೇಲೆ ಬಿದ್ದು, ಕಂಟಕ ಸಂಭವಿಸಿದರೆ ಹೊಣೆ ಯಾರು ಎನ್ನುವುದು ಮಕ್ಕಳ ಪಾಲಕರ, ಪೋಷಕರ ಪ್ರಶ್ನೆ. ಶಾಲೆ ಮಂಭಾಗದಲ್ಲಿ ಹಲ ವರ್ಷಗಳ ಹಿಂದೆ ಬಿರುಕು ಬಿಟ್ಟ ವಿದ್ಯುತ್ ಕಂಬವೂ ಇದೆ. ಇದು ಯಾವಾಗ ನೆಲಕ್ಕೆ ಉರುಳುವುದೋ ಗೊತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆದಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಈಗಲಾದರೂ ಎಚ್ಚೆತ್ತು ಶಾಲಾ ಆವರಣದಲ್ಲಿ ಕಪ್ಪು ಚುಕ್ಕಿಯಂತೆ ಕಂಡುಬರುವ ಶಿಥಿಲ ಕಟ್ಟಡ ತೆರವುಗೊಳಿಸಬೇಕು. ಜೊತೆಗೆ ಕಟ್ಟಡದ ಮೇಲ್ಭಾಗದಲ್ಲಿ ಹಾದು ಹೋಗಿರುವ ಮೂರು ಫೇಸ್ ವಿದ್ಯುತ್ ತಂತಿ ಸ್ಥಳಾಂತರ ಮತ್ತು ಆವರಣದಲ್ಲಿ ಬಿರುಕು ಬಿಟ್ಟ ವಿದ್ಯುತ್ ಕಂಬ ಬದಲಾವಣೆಗೆ ಅಧಿಕಾರಿಗಳು ತುರ್ತು ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.