ಬಳ್ಳಾರಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಎನ್‌ಇಇಟಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎನ್‌ಇಇಟಿ ಪರೀಕ್ಷೆಯನ್ನು ಜಾರಿಗೆ ತಂದಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಇದನ್ನು ಈಗಲೇ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಆಂಧ್ರ ಪ್ರದೇಶ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳು ನಿರಾಕರಿಸಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಕೇಂದ್ರಕ್ಕೆ ಮಣಿದು ವಿದ್ಯಾರ್ಥಿ ವಿರೋಧಿ ನೀತಿಯನ್ನು ಜಾರಿಗೊಳಿಸಲು ಸಜ್ಜಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಸ್ತುತ ಎನ್‌ಇಇಟಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಕೇಂದ್ರದ ಪಠ್ಯವನ್ನು ಅಧ್ಯಯನ ಮಾಡಿದ್ದಾರೆ. ಆದರೆ, ರಾಜ್ಯದ ವಿಜ್ಞಾನ ವಿದ್ಯಾರ್ಥಿ ಗಳಿಗೆ ಇದು ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಠ್ಯಕ್ರಮ ದಲ್ಲಿ ಸುಮಾರು ಶೇ. 40 ರಷ್ಟು ವ್ಯತ್ಯಾಸವಿದ್ದು, ಇದರಿಂದಾಗಿ ಕರ್ನಾಟಕ ವಿದ್ಯಾರ್ಥಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಪ್ರವೇಶದಿಂದ ವಂಚಿತರಾಗ ಬೇಕಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಮುಖಂಡ ಪ್ರಶಾಂತ ಪವಾರ್ ಮಾತನಾಡಿ, ಪ್ರಸ್ತುತ ದೇಶದಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ 17 ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. ರಾಜ್ಯ ಸರ್ಕಾರದ ಪಠ್ಯಕ್ರಮವನ್ನು ವರ್ಷದಲ್ಲಿ 75 ಗಂಟೆಗಳಲ್ಲಿ ಬೋಧಿಸಲಾಗುತ್ತದೆ.
ಆದರೆ, ಕೇಂದ್ರದ ಪಠ್ಯಕ್ರಮವನ್ನು 120 ಗಂಟೆಗಳಲ್ಲಿ ಬೋಧಿಸಲಾಗುತ್ತದೆ. ಮತ್ತು ಪರೀಕ್ಷೆಯ ಸ್ವರೂಪವೂ ಸಂಪೂರ್ಣ ಭಿನ್ನವಾಗಿದೆ. ಸಿ.ಇ.ಟಿ ಪರೀಕ್ಷೆ ಕರ್ನಾಟಕದಲ್ಲಿ 210 ನಿಮಿಷ ಗಳಾಗಿದ್ದು, 2 ದಿನಗಳು ನಡೆಸಲಾಗುತ್ತದೆ.
ಆದರೆ, ಎನ್‌ಇಇಟಿ ಪರೀಕ್ಷೆಯನ್ನು ಒಂದೇ ದಿನದಲ್ಲಿ 180 ನಿಮಿಷಗಳಲ್ಲಿ ಬರೆಯಬೇಕಾದ ಅನಿವಾರ್ಯ ಇದೆ. ಈ ಎಲ್ಲ ಅಂಶ ಗಳನ್ನು ಗಮನಿಸಿದಾಗ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಎನ್‌ಇಇಟಿ ಪರೀಕ್ಷೆಯನ್ನು ಅಳವಡಿಸುವುದು ಅತ್ಯಂತ ಅವೈಜ್ಞಾನಿಕವಾಗಿದೆ ಎಂದ ರಲ್ಲದೆ, ಕೂಡಲೇ ಸರ್ಕಾರ ತನ್ನ ನೀತಿ ಯಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.
ಇಲ್ಲಿನ ನಳಂದಾ ಪದವಿ ಪೂರ್ವ ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಸರ್ಕಾರಕ್ಕೆ ಮನವಿ ಪತ್ರ ಕಳುಹಿಸಿ ಕೊಟ್ಟರು.
ಎಬಿವಿಪಿ ನಗರ ಕಾರ್ಯದರ್ಶಿ ಶಿವಪ್ರಕಾಶ್, ಮಣಿಕಂಠ ರೆಡ್ಡಿ, ಮಹಾಂತೇಶ ನಾಯಕ, ನಾಗರಾಜ, ಎಸ್.ಆರ್. ರವಿಗೌಡ, ವೈ.ವಿನೋದ್‌ಕುಮಾರ್ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.