ADVERTISEMENT

ಎಸಿ ಕಚೇರಿ ವಸ್ತುಗಳು ಜಪ್ತಿ

ಭೂಮಿಗೆ ದೊರೆಯದ ಸೂಕ್ತ ಪರಿಹಾರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 5:36 IST
Last Updated 5 ಸೆಪ್ಟೆಂಬರ್ 2013, 5:36 IST

ಬಳ್ಳಾರಿ: ಕೈಗಾರಿಕೆ ಸ್ಥಾಪನೆಗಾಗಿ ವಶಪಡಿಸಿಕೊಳ್ಳಲಾದ ಭೂಮಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಆದೇಶ ನೀಡಲಾಗಿದ್ದರೂ, ನಿಗದಿತ ವೇಳೆಯಲ್ಲಿ  ಪರಿಹಾರ ನೀಡದೆ ಸತಾಯಿಸಿದ ನಗರದ ಉಪ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಮತ್ತಿತರ ವಸ್ತುಗಳನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ ಸೂಚನೆಯ ಮೇರೆಗೆ ಬುಧವಾರ ಜಪ್ತಿ ಮಾಡಲಾಯಿತು.

ತಾಲ್ಲೂಕಿನ ಕುಡತಿನಿ ಗ್ರಾಮದ ಘನಶ್ಯಾಮ ಸುಂದರಮೂರ್ತಿ ಅವರು, ತಮಗೆ ಸೇರಿದ 20 ಎಕರೆ ಜಮೀನನ್ನು ಕೈಗಾರಿಕೆ ಸ್ಥಾಪನೆಗಾಗಿ 1979-80ರಲ್ಲಿ ವಶಪಡಿಸಿಕೊಂಡು, ಪ್ರತಿ ಎಕರೆಗೆ ಆಗ ್ಙ 6500 ಪರಿಹಾರ ನಿಗದಿ ಮಾಡಿದ್ದನ್ನು ಪ್ರಶ್ನಿಸಿ 1998ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಹೆಚ್ಚುವರಿ ಪರಿಹಾರ ನೀಡುವಂತೆ ಉಪ ವಿಭಾಗಾಧಿಕಾರಿ ಅವರಿಗೆ ಆದೇಶ ನೀಡಿದ್ದರೂ ಇದುವರೆಗೆ ಕ್ರಮ ಕೈಗೊಳ್ಳದ್ದರಿಂದ ಕಚೇರಿಯ ವಸ್ತುಗಳನ್ನು ಲಾರಿಯೊಂದರಲ್ಲಿ ಕೊಂಡೊಯಲಾಯಿತು. ಬೆಳಿಗ್ಗೆ 10.30ಕ್ಕೆ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಆಗಮಿಸಿದ ಘನಶ್ಯಾಮ ಅವರು, ಕುರ್ಚಿ, ಟೇಬಲ್ ಮತ್ತಿತರ ವಸ್ತುಗಳನ್ನು ಕೊಂಡೊಯ್ದರು.

ಕಚೇರಿಯ ವಸ್ತುಗಳನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲಾಗುತ್ತಿದ್ದು, ಸಹಕರಿಸಬೇಕು ಎಂದು ಕೋರಿದರೂ, ಅದಕ್ಕೆ ಕಚೇರಿ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದರಲ್ಲದೆ, ಕಚೇರಿಗೆ ಕೋರ್ಟ್ ಸಿಬ್ಬಂದಿಯೊಂದಿಗೆ ಆಗಮಿಸಿದ್ದನ್ನು ಕಂಡ ಕಚೇರಿ ತಹಶೀಲ್ದಾರ್ ಸುನೀತಾ ಅವರು ಕಚೇರಿ ಒಳಗೆ ಬಾರದೆ ಆಟೊ ಹತ್ತಿ ವಾಪಸ್ ತೆರಳಿದ್ದು ಕಂಡುಬಂತು.

ನಂತರ ಕಚೇರಿಯಲ್ಲಿನ ಕುರ್ಚಿ, ಟೇಬಲ್ ಸೇರಿದಂತೆ 8 ಬಗೆಯ ಪರಿಕರಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಕೊಂಡೊಯ್ಯಲಾಯಿತು. ಸರ್ಕಾರಿ ಕಚೇರಿಯ ಅಧಿಕಾರಿಗಳ ಮಾತಿಗೆ ಗೌರವ ನೀಡಿ ಇಲ್ಲಿಯವರೆಗೆ ಗಡುವು ನೀಡಲಾಗಿದೆ. ಆದರೆ, ಯಾವೊಬ್ಬ ಅಧಿಕಾರಿಯೂ ಈ ಕುರಿತು ಸ್ಪಂದಿಸದ್ದರಿಂದ ಅನಿವಾರ್ಯವಾಗಿ ಜಪ್ತಿ ಮಾಡಬೇಕಾಯಿತು ಎಂದು ಕೋರ್ಟ್‌ನ ಅಮೀನರು ತಿಳಿಸಿದರು.

ಸಹಾಯಕ ಆಯುಕ್ತರ ಕಚೇರಿ ಪರ ವಕೀಲ ಸಿದ್ದಪ್ಪ ಅವರು ಸ್ಥಳಕ್ಕೆ ಆಗಮಿಸಿ ಕೋರ್ಟ್ ಸಿಬ್ಬಂದಿ ಹಾಗೂ ಪತ್ರಕರ್ತರ ವಿರುದ್ಧವೇ ಹರಿಹಾಯ್ದರು.

ಕಚೇರಿ ಪರಿಕರಗಳನ್ನು ಯಾವುದೇ ದುರುದ್ದೇಶದಿಂದ ಜಪ್ತಿ ಮಾಡಲಾಗುತ್ತಿಲ್ಲ. ಈ ಹಿಂದೆ ಹಲವು ಬಾರಿ ಕೋರ್ಟ್ ಆದೇಶ ನೀಡಿದರೂ ಪರಿಹಾರದ ಹಣ ದೊರೆಯಬಹುದು ಎಂಬ ವಿಶ್ವಾಸದಿಂದ ಜಪ್ತಿ ಮಾಡಿರಲಿಲ್ಲ ಎಂದು ರೈತ ಘನಶ್ಯಾಮ ತಿಳಿಸಿದರು.

ಉಪ ವಿಭಾಗಾಧಿಕಾರಿ ಕಚೇರಿಯ ಬಹುತೇಕ ಕುರ್ಚಿ, ಟೇಬಲ್‌ಗಳನ್ನು ಜಪ್ತಿ ಮಾಡಿದ  ನಂತರ ಸಿಬ್ಬಂದಿ ಹೊರ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.