ADVERTISEMENT

ಒಬ್ಬ ವಿದ್ಯಾರ್ಥಿಗೆ ಇಬ್ಬರು ಶಿಕ್ಷಕಿಯರು..!

ತೆಲುಗು ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ.. ಕನ್ನಡಕ್ಕೆ ಪರಿವರ್ತಿಸುತ್ತಿಲ್ಲ...

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:44 IST
Last Updated 25 ಜೂನ್ 2013, 4:44 IST

ಬಳ್ಳಾರಿ: ಇಲ್ಲಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಶೌಚಾಲಯ, ಕುಡಿಯುವ ನೀರು, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳೂ ಇವೆ. ಅಗತ್ಯ ಸಂಖ್ಯೆಯ ಶಿಕ್ಷಕರೂ ಇದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ.
ಇದು ತಾಲ್ಲೂಕಿನಲ್ಲಿರುವ 40ಕ್ಕೂ ಹೆಚ್ಚು ಕ್ಯಾಂಪ್‌ಗಳಲ್ಲಿನ ತೆಲುಗು ಮಾಧ್ಯಮ ಪ್ರಾಥಮಿಕ ಶಾಲೆಗಳ ಸ್ಥಿತಿ.

ತೆಲುಗು ಭಾಷಿಕರೇ ಅಧಿಕ ಸಂಖ್ಯೆಯಲ್ಲಿರುವ ಕ್ಯಾಂಪ್‌ಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಗೌಣವಾಗಿದ್ದು, 1ರಿಂದ 5ನೇ ತರಗತಿವರೆಗಿರುವ ಶಾಲೆಗಳಿಗೆ ಕೆಲವೆಡೆ ಒಬ್ಬರು, ಇಬ್ಬರು ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದಾರೆ.

ತಾಲ್ಲೂಕಿನ ಮಂಗಮ್ಮನ ಕ್ಯಾಂಪ್‌ನಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೆ ಇಬ್ಬರು ಶಿಕ್ಷಕಿಯರಿದ್ದಾರೆ. ವಿಘ್ನೇಶ್ವರ ಕ್ಯಾಂಪ್‌ನಲ್ಲಿ 22, ಧನಲಕ್ಷ್ಮಿ ಕ್ಯಾಂಪ್‌ನಲ್ಲಿ 20 ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ, ಅನೇಕ ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಮಾತ್ರ ಇದ್ದು, ನಿತ್ಯವೂ ಶಾಲೆಗೆ ಬರುವವರ ಸಂಖ್ಯೆ ಮಾತ್ರ 10ರಿಂದ 15.

`1ರಿಂದ 5ನೇ ತರಗತಿವರೆಗೆ ತೆಲುಗು ಮಾಧ್ಯಮದಲ್ಲಿ ಓದಿ, ನಂತರ 6ನೇ ತರಗತಿಗೆ ಪಕ್ಕದ ಊರುಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಪ್ರವೇಶ ಪಡೆಯಬೇಕು ಎಂಬ ಸ್ಥಿತಿ ಇರುವದರಿಂದ ಇಲ್ಲಿನ ತೆಲುಗು ಮಾಧ್ಯಮ ಶಾಲೆಗಳನ್ನು ಕನ್ನಡ ಮಾಧ್ಯಮಕ್ಕೆ ಬದಲಾಯಿಸಿ' ಎಂದು ಪಾಲಕರು ಮನವಿ ಸಲ್ಲಿಸಿದರೂ ಸರ್ಕಾರ ಅದಕ್ಕೆ ಕಿವಿಗೊಟ್ಟಿಲ್ಲ.

ಮಂಗಮ್ಮನ ಕ್ಯಾಂಪ್‌ನ 5ನೇ ತರಗತಿವರೆಗಿನ ಶಾಲೆಯಲ್ಲಿ ಇಬ್ಬರು ಶಿಕ್ಷಕರಿಯರಿದ್ದು, ದುರ್ಗ ಎಂಬ ಒಬ್ಬ ವಿದ್ಯಾರ್ಥಿ ಮಾತ್ರ ನಿತ್ಯ ಶಾಲೆಗೆ ಬರುತ್ತಾನೆ.

ಈ ಕ್ಯಾಂಪ್ ಸೇರಿದಂತೆ ಪಕ್ಕದ ಬಹುತೇಕ ಕ್ಯಾಂಪ್‌ಗಳ ವಿದ್ಯಾರ್ಥಿಗಳು ಪಕ್ಕದ ಚರಕುಂಟೆ, ಅಂದ್ರಾಳ್, ಶಂಕರಬಂಡೆ ಮತ್ತಿತರ ಗ್ರಾಮಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಪಡೆದಿದ್ದು, ಇನ್ನು ಕೆಲವರು ಬಳ್ಳಾರಿಯಲ್ಲಿನ ಇಂಗ್ಲಿಷ್ ಮಾಧ್ಯಮ ಶಾಲೆಗೆ ತೆರಳುತ್ತಾರೆ.

`5ನೇ ತರಗತಿವರೆಗೆ ತೆಲುಗು ಮಾಧ್ಯಮದಲ್ಲಿ ಕಲಿತು 6ನೇ ತರಗತಿಯಲ್ಲಿ ಕನ್ನಡ ಕಲಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮೊದಲ ತರಗತಿಯೊಂದಲೇ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ದೊರೆಯುವಂತಾದರೆ ನಮ್ಮ ಮಕ್ಕಳನ್ನು ಇಲ್ಲೇ ದಾಖಲಿಸುತ್ತೇವೆ' ಎಂದು ಮಂಗಮ್ಮನ ಕ್ಯಾಂಪ್‌ನ ನಿವಾಸಿ ಬಸವರಾಜ್ ಹಾಗೂ ಇತರರು `ಪ್ರಜಾವಾಣಿ'ಗೆ ತಿಳಿಸಿದರು.

`ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ತೆಲುಗು ಮಾಧ್ಯಮವನ್ನು ರದ್ದು ಮಾಡಿ, ಕನ್ನಡ ಮಾಧ್ಯಮವನ್ನಾಗಿ ಪರಿವರ್ತಿಸುತ್ತಿಲ್ಲ. ಕರ್ನಾಟಕದಲ್ಲೇ ಜೀವನ ನಡೆಸವವರು ತೆಲುಗು ಮಾಧ್ಯಮದಲ್ಲಿ ಕಲಿತರೂ ಪ್ರಯೋಜನ ಇಲ್ಲ ಎಂದೇ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಆರಂಭಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ' ಎಂದು ಅವರು ದೂರಿದರು.

`ನಾವು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಶಕ್ತರಾಗಿದ್ದು, ನಮ್ಮ ಸೇವೆಯನ್ನು ಕನ್ನಡ ಶಾಲೆಗಳಿಗೂ ಪಡೆಯಬಹುದಾಗಿದೆ' ಎಂದು ತೆಲುಗು ಮಾಧ್ಯಮದ ಕೆಲವು  ಶಿಕ್ಷಕರೂ ತಿಳಿಸಿದರು.

ಈ ಕ್ಯಾಂಪ್‌ಗಳಲ್ಲಿ 50ರಿಂದ 80 ಕುಟುಂಬಗಳಿದ್ದು, ಪ್ರಾಥಮಿಕ ಶಾಲೆಗಳಿಗೆ 70ರಿಂದ 90 ವಿದ್ಯಾರ್ಥಿಗಳು ಶಾಲೆ ಕಲಿಯುತ್ತಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ಪಕ್ಕದ ಊರುಗಳಲ್ಲಿನ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ.

ಕ್ಯಾಂಪ್‌ಗಳ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ತಿಳಿದಿದೆ. ಪಾಲಕರು ಕನ್ನಡ ಮಾಧ್ಯಮವನ್ನಾಗಿ ಪರಿವರ್ತಿಸುವಂತೆ ಮನವಿ ಸಲ್ಲಿಸಿದರೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ನಾರಾಯಣಗೌಡ ತಿಳಿಸಿದ್ದಾರೆ.

ಮುಖ್ಯವಾಗಿ ಬಳ್ಳಾರಿ, ಹೊಸಪೇಟೆ ಮತ್ತು ಸಿರಗುಪ್ಪ ತಾಲ್ಲೂಕುಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲೇ ಶೇಕಡಾವಾರು ಫಲಿತಾಂಶ ಕಡಿಮೆ ಆಗುತ್ತಿರುವುದಕ್ಕೆ ದಿಢೀರ್ ಮಾಧ್ಯಮ ಬದಲಾವಣೆಯೂ ಕಾರಣ ಎಂಬುದು ಇಲಾಖೆಗೆ ಮನವರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.