ADVERTISEMENT

ಕಂಪ್ಲಿ: ಮುಂದುವರಿದ ಅಕ್ಕಿ ಗಿರಣಿ ಬಂದ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:35 IST
Last Updated 18 ಡಿಸೆಂಬರ್ 2013, 5:35 IST

ಕಂಪ್ಲಿ: ಅಕ್ಕಿ ಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಸರ್ಕಾರದ ಲೆವಿ ಅಕ್ಕಿ ನೀತಿ ಖಂಡಿಸಿ ಎರಡನೆ ದಿನವೂ ಬಂದ್‌ ಮುಂದುವರಿಸಿದ್ದಾರೆ.

ಪಟ್ಟಣದ ಸುಮಾರು 21 ಅಕ್ಕಿ ಗಿರಣಿ ಬಂದ್‌ ಪರಿಣಾಮ ಹಮಾಲರು, ಗುಮಾಸ್ತರು, ಲಾರಿ ಚಾಲಕರು, ಕ್ಲಿನರ್‌, ಒಂಟೆತ್ತಿನ ಬಂಡಿಯವರು ಸೇರಿದಂತೆ ಸಾವಿರಾರು ಕಾರ್ಮಿಕರು ಕೈಯಲ್ಲಿ ದುಡಿಮೆ ಇಲ್ಲದೆ ಅತಂತ್ರರಾಗಿದ್ದಾರೆ.

ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಂಪ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡ ಲೆವಿ ಅಕ್ಕಿ ಸಂಗ್ರಹ ನಿರ್ಧಾರ ಅವೈಜ್ಞಾನಿಕವಾಗಿದೆ. ಇದನ್ನು ರದ್ದುಪಡಿಸಿ ಅಕ್ಕಿ ಗಿರಣಿ ಮಾಲೀಕರೊಂದಿಗೆ ಮುಕ್ತವಾಗಿ ಚಿರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದರು.

ಅಂತಿಮ ತೀರ್ಮಾನ ಪ್ರಕಟವಾಗುವವರೆಗೆ ಪಟ್ಟಣದ ಎಲ್ಲಾ ಅಕ್ಕಿಗಿರಣಿಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಬಂದ್‌ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಂದು ಕ್ವಿಂಟಲ್ ಅಕ್ಕಿ ಉತ್ಪಾದನೆಗೆ 12 ಯೂನಿಟ್ ವಿದ್ಯುತ್ ವೆಚ್ಚವಾಗುತ್ತದೆ. ಆದರೆ ಸರ್ಕಾರ ಕೇವಲ 4 ಯೂನಿಟ್‌ ಪ್ರಕಾರ ಲೆಕ್ಕ ಹಾಕಿ 13.5 ಲಕ್ಷ ಮೆಟ್ರಿಕ್ ಟನ್ ಲೆವಿ ಅಕ್ಕಿ ಸಂಗ್ರಹ ನಿಗದಿ ಮಾಡಿರುವುದು   ಅವೈಜ್ಞಾನಿಕವಾಗಿದೆ. ಅಕ್ಕಿ ಗಿರಣಿ ಮಾಲೀಕರನ್ನು ದಿವಾಳಿ ಎಬ್ಬಿಸುವ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2005-–06ರಲ್ಲಿ ಸೋನಾ ಮಸೂರಿ ಭತ್ತ ಬೆಳೆಯುವ ಜಿಲ್ಲೆಗಳಿಗೆ ಲೆವಿ ವಿನಾಯ್ತಿ ನೀಡಿದಂತೆ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸೇರಿ ಅನೇ ಕಡೆಗಳಲ್ಲಿ ಸೋನಾ ಮಸೂರಿ ಭತ್ತ ಬೆಳೆಯುತ್ತಿದ್ದು, ಲೆವಿ ವಿನಾಯ್ತಿ ನೀಡುವಂತೆ ಒತ್ತಾಯಿಸಿದರು. ವರ್ತಕರಿಂದ ಲೆವಿ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೂ ಲೆವಿ ವಸೂಲಿ ಮಾಡದೇ ಕೇವಲ ಅಕ್ಕಿ ಗಿರಣಿಗಳಿಗೆ ಮಾತ್ರ ಲೆವಿ ನಿಗದಿ ಮಾಡಿದ್ದನ್ನು ಖಂಡಿಸಿದರು.

ಅಕ್ಕಿ ಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಎಂ. ಬಾಲವೆಂಕಟೇಶ್, ಕಾರ್ಯದರ್ಶಿ ಟಿ. ವೆಂಕಟರಮಣ, ಖಜಾಂಚಿ ಗರಡಿ ವೀರಣ್ಣ, ಮಾಲೀಕರಾದ ಟಿ. ಕೊಟ್ರೇಶ್, ಡಿ.ವಿ. ಸುಬ್ಬಾರಾವ್, ಜಿ. ಕೇದಾರೇಶ್ವರರಾವ್, ಯು. ತುಳಸಿರಾಮ್, ಬಳ್ಳಾರಿ ರವೀಂದ್ರನಾಥ್, ಜಿ. ಸತ್ಯನಾರಾಯಣ ಬಾಬು, ಕೆ. ಸುನೀಲ್ ಕುಮಾರ್, ಜಿ. ಶ್ರೀನಿವಾಸ್, ಎಂ. ಮಂಜುನಾಥ್, ಡಿ. ಗೋವಿಂದರೆಡ್ಡಿ, ವೈ. ಹನುಮಂತರೆಡ್ಡಿ, ಕೆ. ಸುಭಾಶ್ಚಂದ್ರ ಸೇರಿ ಅನೇಕರು ತಮ್ಮ ಅಕ್ಕಿ ಗಿರಣಿಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಕ್ಕಿ ಗಿರಣಿ ಬಂದ್‌ ಪರಿಣಾಮ ರೈತರಿಗೆ, ಕಾರ್ಮಿಕರಿಗೆ, ವರ್ತಕರಿಗೆ ತೊಂದರೆಯಾಗಿದ್ದು, ಸಹಕರಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.