ADVERTISEMENT

ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಗ್ರಾಮ ಪಂಚಾಯ್ತಿ ಸಮೀಪ ಪಿಡಿಒ ವಾಸಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 5:40 IST
Last Updated 4 ಡಿಸೆಂಬರ್ 2012, 5:40 IST

ಕಂಪ್ಲಿ: ಜನತೆಯ ಮೂಲ ಸೌಕರ್ಯ ಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗಾಮ ಪಂಚಾಯ್ತಿ ಕಾರ್ಯದರ್ಶಿ ಕೇಂದ್ರ ಸ್ಥಾನದಲ್ಲಿ ವಾಸಮಾಡಬೇಕು ಎಂದು ಆಗ್ರಹಿಸಿ ಸಮೀಪದ ರಾಮಸಾಗರ ಗ್ರಾಮದ ಪಂಚಾಯ್ತಿ ಸದಸ್ಯರು ಸೋಮವಾರ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.

ಸದಸ್ಯರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪಿಡಿಒ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿಯೇ ನೆಲೆಸುವಂತೆ ನ.11ರ ಸಭೆಯಲ್ಲಿ ಠರಾವು ಮಂಡಿಸಿ ಕಾಲಾವಕಾಶ ನೀಡಲಾಗಿತ್ತು. ಆದರೂ ಪಿಡಿಒ ಕಡೆಗಣಿಸಿದ್ದಾರೆ.

ಗ್ರಾಮದ ನೈರ್ಮಲ್ಯ ಇತ್ಯಾದಿ ಸೌಕರ್ಯಗಳ ಬಗ್ಗೆ ಗಮನಕ್ಕೆ ತಂದರೂ ನಿರ್ಲಕ್ಷಿಸುತ್ತಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯರು ದೂರಿದರು. ಈ ಸಂದರ್ಭದಲ್ಲಿ ಕೆಲವರ ಮಧ್ಯೆ ಪಂಚಾಯ್ತಿ ಬಳಿ ಪರ ವಿರೋಧವೂ ನಡೆಯಿತು.

ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಶಪ್ಪ ಪ್ರತಿಭಟನಾ ನಿರತ ಸದಸ್ಯರೊಂದಿಗೆ ಮಾತನಾಡಿ, ಎಂಟು ದಿನಗಳಲ್ಲಿ ಪಂಚಾಯ್ತಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು. ಅಲ್ಲಿಯವರೆಗೆ ಅಧಿಕಾರಿಗ ಳೊಂದಿಗೆ ಸಮನ್ವಯ ಕಾಪಾಡಿ ಕೊಳ್ಳುವಂತೆ ಮನವಿ ಮಾಡಿದರು. ನಂತರ ಗ್ರಾಮ ಪಂಚಾಯ್ತಿಗೆ ಹಾಕಿದ್ದ ಬೀಗ ತೆರವುಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿ. ಶಾರದಮ್ಮ, ಉಪಾಧ್ಯಕ್ಷೆ ಸಣ್ಣ ಮಾರೆಮ್ಮ, ಸದಸ್ಯ ರಾದ ಪಲ್ಲೇ ವೀರೇಶ್, ಬಿ. ರಾಘ ವೇಂದ್ರ, ಆರ್.ಟಿ. ಶರಣಬಸವನಗೌಡ, ಕೆ. ಶಿವಕುಮಾರ, ವಿ. ಗಾಳೆಪ್ಪ, ಎಲ್. ನೀಲಾಬಾಯಿ, ಲಕ್ಷ್ಮಮ್ಮ, ಉಪ್ಪಾರು ಈರಣ್ಣ, ಎಪಿಎಂಸಿ ನಿರ್ದೇಶಕ ಎಚ್.ಎಂ. ಲಿಂಗನಗೌಡ, ಗ್ರಾಮಸ್ಥರು ಭಾಗವಹಿಸಿದ್ದರು.

ಸ್ಪಷ್ಟನೆ: ಗ್ರಾಮದಲ್ಲಿ ಸೂಕ್ತ ಮನೆ ದೊರೆಯದೆ ಮತ್ತು ವೈಯಕ್ತಿಕ ಸಮಸ್ಯೆಯಿಂದ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ ವಸತಿ ಮಾಡಲು ಅನಾನು ಕೂಲವಾಗಿದೆ. ಮನೆ ದೊರೆ ಯುತ್ತಿದ್ದಂತೆ ಗ್ರಾಮದಲ್ಲಿಯೇ ನೆಲೆಸು ವುದಾಗಿ  ಪಿಡಿಒ ರಾಜೇಶ್ವರಿ ಪತ್ರಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.