ADVERTISEMENT

ಕಾಲುವೆಗಳಿಗೆ ನೀರು ಪೂರೈಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಕುರುಗೋಡು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಸಮರ್ಪಕ ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಡೆಪ್ಪ ದೇಸಾಯಿ ಒತ್ತಾಯಿಸಿದರು.

ಸಿರಿಗೇರಿ ಕ್ರಾಸ್‌ನಲ್ಲಿ ಗುರುವಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಐಸಿಸಿ ಸಭೆಯ ನಿರ್ಣಯದಂತೆ ರೈತರಿಗೆ ಮಾ.31ರ ವರೆಗೆ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಜ.1ರಿಂದ  ಆಂಧ್ರದ ಪಾಲಿನ ನೀರನ್ನು ಸ್ಥಗಿತಗೊಳಿಸಿದ್ದರಿಂದ ಹಿಂಗಾರು ಬೆಳೆಗೆ ತೊಂದರೆಯಾಗಿದೆ. ಆದ್ದರಿಂದ ಮಾ.31ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂಗಾರು ಹಂಗಾವಿನಲ್ಲಿ ಮಳೆ ಇಲ್ಲದೆ ರೈತರು ತೀವ್ರ ಹಾನಿ ಅನುಭವಿಸಿದ್ದಾರೆ. ಕಾಲುವೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ರೈತ ಮುಖಂಡ ಜಿ.ಪುರುಷೋತ್ತಮ ಗೌಡ ಆರೋಪಿಸಿದರು.

ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ 38 ಟಿ.ಎಂ.ಸಿ. ನೀರಿನ ಕೊರತೆ ಉಂಟಾಗಿದೆ. ಕರ್ನಾಟಕದ ಪಾಲಿನಡಿ ಬರುವ ನೀರಿನಲ್ಲಿ 135 ರಿಂದ 150 ಕ್ಯೂಸೆಕ್‌ನಷ್ಟು ಕಡಿಮೆ ಮಾಡಲಾಗಿದೆ.  ಈ ಮೊದಲೇ ರೈತರಿಗೆ ಅಲ್ಪಾವಧಿ ಬೆಳೆಗಳನ್ನು ಹಾಕುವಂತೆ ಮನವಿ ಮಾಡಿಲಾಗಿತ್ತು. ಮಾರ್ಚ್ 31ರ ವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆಯ ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್ ಎನ್.ಜಗದೀಶ್ ಹೇಳಿದರು.

ವಣೆನೂರು ಸದಾಶಿವರೆಡ್ಡಿ, ಕರೂರು ಕೋಟೇಶ್ವರರೆಡ್ಡಿ, ಸಿದ್ಧರಾಮಪ್ಪ, ಎಚ್.ದೇವರೆಡ್ಡಿ, ಲೋಕರೆಡ್ಡಿ, ಕುಂದಾಪುರ ನಾಗರಾಜ, ದರೂರು ಶಾಂತನಗೌಡ, ರಾಮನಗೌಡ, ಪೂಜಾರಿ ನಾಗರಾಜಗೌಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.