ADVERTISEMENT

‘ಗೊಣ್ಣೆಹುಳು ಬಾಧೆ, ಆತಂಕದಲ್ಲಿ ಕಬ್ಬು ಬೆಳೆಗಾರರು’

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 7:17 IST
Last Updated 6 ಜುಲೈ 2017, 7:17 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದ ರೈತರೊಬ್ಬರ ಕಬ್ಬಿನ ಜಮೀನಿನಲ್ಲಿ ಗೊಣ್ಣೆಹುಳು ಬಾಧೆಯನ್ನು ಕೃಷಿ ಅಧಿಕಾರಿ ಪರಿಶೀಲಿಸಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದ ರೈತರೊಬ್ಬರ ಕಬ್ಬಿನ ಜಮೀನಿನಲ್ಲಿ ಗೊಣ್ಣೆಹುಳು ಬಾಧೆಯನ್ನು ಕೃಷಿ ಅಧಿಕಾರಿ ಪರಿಶೀಲಿಸಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆಬಾರದೆ ಚಿಂತೆಗೀಡಾ ಗಿರುವ ಕಬ್ಬು ಬೆಳೆದ ರೈತರಿಗೆ ಗಾಯದಮೇಲೆ ಬರೆ ಹಾಕಿದಂತಾಗಿದೆ. ಕಬ್ಬಿನ ಬೆಳೆಗೆ ದಾಳಿ ಮಾಡಿರುವ ಗೊಣ್ಣೆಹುಳು ಬಾಧೆಯಿಂದ ರೈತರು ತೀವ್ರ ನಷ್ಟದ ಹಾದಿ ತಲುಪಿದ್ದಾರೆ.

ತಾಲ್ಲೂಕಿನಲ್ಲಿ ಇರುವ ಅಲ್ಪ ಪ್ರಮಾಣದ ನೀರಾವರಿ ಪ್ರದೇಶದಲ್ಲಿ ಒಟ್ಟು 2250 ಎಕರೆ ಕಬ್ಬು ಬೆಳೆಯಲಾಗಿದೆ. ಅದರಲ್ಲಿ 500ಎಕರೆಯಷ್ಟು ಆರು ತಿಂಗಳ ಬೆಳೆ ಒಣಗಲಾರಂಬಿಸಿದೆ. ಹಂಪಸಾಗರ ಹೋಬಳಿಯ ಏಣಗಿ ಬಸಪುರ, ಕೋಡಿಹಳ್ಳಿ, ಸೊನ್ನ ಗ್ರಾಮಗಳಲ್ಲಿ ಬಾಧೆಯ ತೀವ್ರತೆ ಹೆಚ್ಚಾಗಿದೆ.

ಕೃಷಿ ಅಧಿಕಾರಿಯ ಸಮಯ ಪ್ರಜ್ಞೆಯಿಂದಾಗಿ ರೋಗ ಈಗ ಹತೋಟಿಗೆ ಬಂದಿದೆ. ಆದರೆ ಇನ್ನುಳಿದ ಕೋಗಳಿ, ಹಗರಿ ಬೊಮ್ಮನಹಳ್ಳಿ ಹೋಬಳಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಬಾಧೆ ಕಂಡು ಬಂದಿದ್ದು ಹತೋಟಿ ಬಾರದೆ ರೈತರು ತೀವ್ರ ಆತಂಕಗೊಂಡಿದ್ದಾರೆ.

ADVERTISEMENT

ರೋಗದ ಲಕ್ಷಣಗಳು: ಈ ಕೀಟದ ಬಾಧೆಯು ಸಾಮಾನ್ಯವಾಗಿ  ಕೆಂಪು ಮಿಶ್ರಿತ  ಭೂಮಿಯಲ್ಲಿ ಅಧಿಕವಾಗಿ  ಕಂಡು ಬರುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ  ಈ ಕೀಟದ ಬಾಧೆಯ  ತೀವ್ರತೆ ಹೆಚ್ಚಾಗಿರುತ್ತದೆ. ಜಮೀನುಗಳಲ್ಲಿ ತೇವಾಂಶದ ಕೊರತೆ ಯಾದಲ್ಲಿ ಶೇಕಡ 80ರಿಂದ 100 ರಷ್ಟು ಬೆಳೆ ಹಾನಿಯಾಗುತ್ತದೆ.

ಎರಡನೇ ಮತ್ತು ಮೂರನೇ  ಹಂತದ ಮರಿಹುಳುಗಳು ಕಬ್ಬಿನ ಬೇರನ್ನು ತಿನ್ನುತ್ತವೆ. ಈ ಬಾಧೆಗೆ ತುತ್ತಾದ ಕಬ್ಬಿನ ರವದಿ ಹಳದಿ ಬಣ್ಣಕ್ಕೆ ತಿರುಗಿ ತುದಿಯಿಂದ ಒಣಗಲು  ಆರಂಭಿಸುತ್ತವೆ.  ಕಬ್ಬಿನ ಬೆಳೆಯನ್ನು ಕಿತ್ತಾಗ  ಬೇರು ಸಮೇತ  ಬರುತ್ತದೆ ಎಂದು ಕೃಷಿ ಅಧಿಕಾರಿ ಗೀತಾ ಬೆಸ್ತರ್ ವಿವರಿಸುತ್ತಾರೆ.

ಮೆಟಾರೈಜಿಯಂ ದ್ರಾವಣವನ್ನು ತಯಾರಿ ಸುವ ವಿಧಾನ: ಒಂದು ಎಕರೆ ಪ್ರದೇಶಕ್ಕೆ ಎರಡು ಕೆ.ಜಿ. ಬೆಲ್ಲ , ಎರಡು ಕೆ.ಜಿ ದ್ವಿದಳ ಧಾನ್ಯದ ಹಿಟ್ಟು, ಎರಡರಿಂದ ಐದು ಕೆ.ಜಿ ಮೆಟಾರೈಜಿಯಂ  ಪೌಡರ್‌ (ದ್ರಾವಣ ರೂಪದಲ್ಲಿದ್ದರೆ ಒಂದು ಲೀಟರ್ ಸಾಕು.) 200 ಲೀಟರ್ ನೀರು, ಮೆಟಾರೈಜಿಯಂ, ಬೆಲ್ಲ ಮತ್ತು ದ್ವಿದಳ ಧಾನ್ಯದ ಹಿಟ್ಟಿನ  ದ್ರಾವಣಗಳನ್ನು ಪ್ರತ್ಯೇಕವಾಗಿ ತಯಾರಿಸಿಕೊಳ್ಳಬೇಕು.\

 ಹೀಗೆ ತಯಾರಿಸಿದ ದ್ರಾವಣಗಳನ್ನು  ತೆಳುವಾದ ಬಟ್ಟೆಯಲ್ಲಿ ಸೋಸಿ  200 ಲೀಟರ್ ನೀರನ್ನು ಹಾಕಿದ ಡ್ರಮ್ ನಲ್ಲಿ ಸೇರಿಸಿ ಅದನ್ನು ಗಾಳಿ ಯಾಡದ ಹಾಗೆ ಮುಚ್ಚಿ  48ಗಂಟೆಗಳ ಕಾಲ ಕಳಿಯಲಿಕ್ಕೆ ಬಿಡಬೇಕು, ನಂತರ  ಮಿಶ್ರಣ ಮಾಡಿದ  ದ್ರಾವಣವನ್ನು ಹನಿ ನೀರಾವರಿ ಪದ್ದತಿ  ಅಳವಡಿಸಿಕೊಂಡ ರೈತರು  ಡ್ರಿಪ್ ನ ಮುಖಾಂತರ ಮೆಟರೈಜಿಯಂ  ದ್ರಾವಣ ವನ್ನು ಬೆಳೆಯ ಬುಡಕ್ಕೆ  ತೇವಗೊಳ್ಳು ವಂತೆ  ಸಿಂಪರಣೆ  ಮಾಡಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ.ಅರುಣ್‌ಕುಮಾರ್ ಹೇಳುತ್ತಾರೆ.

ಮೆಟಾರೈಜಿಯಂ ರಾಮಬಾಣ
ಈ ಬಾಧೆಗೆ ಮೆಟಾರೈಜಿಯಂ ಬಾಣ ಎಂದು ಕೃಷಿ ವಿಜ್ಞಾನಿಗಳು ಹೇಳು ತ್ತಾರೆ. ಮೆಟಾರೈಜಿಯಂ ಶಿಲೀಂದ್ರ ಬಳಕೆ ಅತೀ ಕಡಿಮೆ ಖರ್ಚಿನಲ್ಲಿ ಮಾಡುವ ಕೀಟ ನಿರ್ವಹಣಾ  ತಾಂತ್ರಿ ಕತೆ ಆಗಿದೆ. ಇವು  ನಿಸರ್ಗದಲ್ಲಿ  ಪುನರುತ್ಪತ್ತಿ ಆಗುವುದರಿಂದ  ನಿರಂತರವಾಗಿ  ಇತರೆ  ಕೀಟನಾಶಕ ಗಳಂತೆ  ಬಳಸುವುದು  ಅವಶ್ಯವಿಲ್ಲ.

ಚರ್ಮದಲ್ಲಿ ರುವ ಉಸಿರಾಟದ  ರಂಧ್ರಗಳ  ಮೂಲಕ ಈ ಶಿಲೀಂದ್ರವು  ಗೊಣ್ಣೆ ಹುಳುವಿನ ದೇಹವನ್ನು ಪ್ರವೇಶಿಸಿ ರೋಗ ಉಂಟು ಮಾಡುತ್ತದೆ. ರೋಗಪೀಡಿತ  ಗೊಣ್ಣೆಹುಳು ಆಹಾರವನ್ನು  ಸೇವಿಸದೇ ನಿತ್ರಾಣ ಗೊಂಡು ಸಾವನ್ನಪ್ಪುವುದು. ಸತ್ತ ಗೊಣ್ಣೆಹುಳುವಿನ  ಮೇಲೆ ಹಸಿರು ಪಾಚಿ ಬಣ್ಣದ ಬೂಸ್ಟ್ ಉತ್ಪಾದನೆಗೊಂಡು ಪುನಾ ಮೆಟಾರೈಜಿಯಂ ಶಿಲೀಂದ್ರದ  ಸೋಂಕು ಬೀಜಗಳು   ರೂಪುಗೊಂಡು  ಜೀವನ ಚಕ್ರದ ಪುನಾರವರ್ತನೆಯಾಗುವುದು.

ಹತೋಟಿಗೆ ಬಂದ ರೋಗಬಾಧೆ
‘ನಮ್ಮ ಜಮೀನಿನಲ್ಲಿ ನೀರಿನ ಕೊರತೆಯಿಂದ ಕಬ್ಬು ಬೆಳೆ ಒಣಗುತ್ತದೆ ಎಂದು ತಿಳಿದುಕೊಂಡಿದ್ವಿ, ಇದರಿಂದಾಗಿ ತೀವ್ರ ಗಾಬರಿಯಾಗಿತ್ತು. ಆದರೆ ಕೃಷಿ ಅಧಿಕಾರಿ ಗೀತಾ ಬೆಸ್ತರ್ ಮೇಡಂ ಅವರು ಜಮೀನಿಗೆ ಭೇಟಿ ನೀಡಿದಾಗ ಕಬ್ಬಿಗೆ ಗೊಣ್ಣೆ ಹುಳು ಬಾಧೆ ಇರುವುದು ತಿಳಿದು ಬಂತು. ಅವರ ನಿರ್ದೇಶನದಂತೆ ಬಾಧಿತ ಬೆಳೆಗೆ ಮೆಡರೈಜಿಯಂ ದ್ರಾವಣ ಸಿಂಪರಣೆ ಮಾಡಿದಾಗ ರೋಗಬಾಧೆ ಹತೋಟಿಗೆ ಬಂದಿದೆ’.
– ಭರಮಪ್ಪ
ರೈತ, ಮೋರಿಗೇರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.