ADVERTISEMENT

ಜನನಿಬಿಡ ಓಣಿ.. ನಿರ್ಜೀವ ಆಡಳಿತ...

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:20 IST
Last Updated 8 ಅಕ್ಟೋಬರ್ 2012, 5:20 IST

ಬಳ್ಳಾರಿ: ಎಲ್ಲಿ ನೋಡಿದರಲ್ಲಿ ಕಸ. ತಿಪ್ಪೆಯಂತಾಗಿರುವ ಸುತ್ತಮುತ್ತಲಿನ ಪರಿಸರ, ದುರ್ವಾಸನೆ ಬೀರುವ ಚರಂಡಿ ಗಳು, ತುಂಬಿ ತಟಸ್ಥವಾಗಿರುವ ಒಳ ಚರಂಡಿಗಳು, ಮೂಗು ಮುಚ್ಚಿಕೊಂಡು ಓಡಾಡಿದರೂ, ಬಾಯಿಯ ಮೂಲಕವೇ ಉಸಿರಗುಂಟ ಒಳಸೇರುವ ಸೂಕ್ಷ್ಮಾಣು ಜೀವಿಗಳು.

ಇದು ಮೂಲ ಬಳ್ಳಾರಿಯ ಹಲವು ಪ್ರದೇಶಗಳ ದುಸ್ಥಿತಿ. ಅಲ್ಲಿ ಕೊಳಾಯಿ ನೀರಿನ ಜತೆಜತೆಗೇ ಚರಂಡಿ ನೀರೂ ಬರುತ್ತದೆ. ರೋಗ- ರುಜಿನಗಳ `ತವರುಮನೆ~ಯೇ ಈ ಪ್ರದೇಶವೇನೋ ಎಂಬ ಶಂಕೆ ಮೂಡುವಂತೆಯೇ ಇಲ್ಲಿ ನೈರ್ಮಲ್ಯ ಹದಗೆಟ್ಟಿದೆ.

ಸಾಲದೆಂಬಂತೆ, ಇಲ್ಲಿನ ರಸ್ತೆಗಳಲ್ಲಿ ಹಗಲಲ್ಲಿ ಹಂದಿಗಳ ಹಾವಳಿ, ರಾತ್ರಿ ನಾಯಿಗಳ ಹಾವಳಿ. ಮತ್ತು ಹಗಲು- ರಾತ್ರಿಯೆನ್ನದೆ ಸೊಳ್ಳೆಗಳ ಕಾಟ. ಈ ಪ್ರದೇಶಗಳಲ್ಲಿ ಸಂಚರಿಸಿದರೆ ಕೇಳುವುದು, ಆಬಾಲವೃದ್ಧರಾದಿಯಾಗಿ ಎಲ್ಲರ  ನರಳಾಟ. ಅಷ್ಟು ಪ್ರಮಾಣದಲ್ಲಿ ಇಲ್ಲಿ ಸಾಂಕ್ರಾಮಿಕ ಕಾಯಿಲೆ- ಕಸಾಲೆಗಳು ಮನೆ ಮಾಡಿವೆ.

ಇದು ಬಳ್ಳಾರಿಯ ರೆಡ್ಡಿ ಬೀದಿ, ಕಮ್ಮಿಂಗ್ ರಸ್ತೆ, ಗ್ರಹಾಂ ರಸ್ತೆ, ಮಿಲ್ಲರ್ ಪೇಟೆ, ಮರಿಸ್ವಾಮಿ ಮಠ, ರಾಜ್ಯೋತ್ಸವ ನಗರ, ಕುಲಮಿ ಚೌಕ್, ಸಣ್ಣದುರ್ಗಮ್ಮ ಬೀದಿ, ಜುಮ್ಮಾ ಮಸೀದಿ ಬೀದಿ, ಸಿಂದಗಿ ಓಣಿ, ಕುದುರೆ ಗಾಳಪ್ಪ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ಕಲ್ಮಠ ಬೀದಿ, ವಾಲ್ಮೀಕಿ ಬೀದಿ ಸೇರಿದಂತೆ ಅಡ್ಡಡ್ಡ- ಉದ್ದುದ್ದ ಎದುರಾಗುವ ನೂರಾರು ಬೀದಿಗಳ ಸ್ಥಿತಿ.

ಇಲ್ಲೆಲ್ಲ ಸ್ವಚ್ಛತೆಯ ಕೊರತೆ ಇದ್ದು, ಮಲೇರಿಯಾ, ಟೈಫಾಯಿಡ್, ಡೆಂಗೆ, ವೈರಾಣು ಜ್ವರ ಮತ್ತಿತರ ರೋಗ ಗಳಿಂದ ನರಳುವವರ ಒಡ್ಡೋಲಗವೇ ಕಂಡುಬರುತ್ತದೆ.ಈ ಪ್ರದೇಶಗಳಲ್ಲಿನ ಕಿರಿದಾದ ಓಣಿಗಳಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ, ಒಂದಕ್ಕೊಂದು ಅಂಟಿಕೊಂಡಂತೆಯೇ ಇರುವ ಬಹುತೇಕ ಮನೆಗಳ ತಲಬಾಗಿಲ ಹೊರಗೆ ಕಾಲಿಟ್ಟರೆ ರಸ್ತೆಯ ಮೇಲೇ ಹೆಜ್ಜೆಗಳು ಮೂಡುತ್ತವೆ.

ಕಿಷ್ಕಿಂಧೆ ಯಂತೆ ಇರುವ, ಸದಾ ಜನಜಂಗುಳಿ ಯಿಂದ ಕೂಡಿದ ಈ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ, ಮಳೆ ನೀರು ಹರಿದು ಹೋಗಲು ಹೊರ ಚರಂಡಿಗಳೂ ಇವೆ. ಆದರೆ, ಅವು ಗಳನ್ನು ಸ್ವಚ್ಛಗೊಳಿಸದೆ ಬಿಟ್ಟಿರುವು ದರಿಂದ ದುರ್ನಾತ ನಿರಂತರ ಕಾಡುತ್ತಿದೆ.

ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕ ವಾಗಿ ಮನೆಗಳೆದುರು ಬಾಗಿಲೆದುರಿನ ಹೊಸ್ತಿಲುಗಳಿಗಿಂತಲೂ ಮೇಲಕ್ಕೆ ಸಿಸಿ ರಸ್ತೆ ನಿರ್ಮಿಸಿರುವು ದರಿಂದ ಬಾಗಿಲು ಗಳೆಲ್ಲ ತಗ್ಗಿನಲ್ಲಿ ಸೇರಿವೆ. ಮೆಟ್ಟಿಲುಗಳು ಮಾಯ ವಾಗಿದ್ದು, ಮಳೆ ಬಂದರೆ, ನೀರೆಲ್ಲ ಮನೆಯೊಳಗೆ ನುಗ್ಗುವ ಸಮಸ್ಯೆ ಹೆಚ್ಚುವರಿಯಾಗಿ ದೊರೆತಿದೆ.

ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 11, 12 ಮತ್ತು 13ನೇ ವ್ಯಾಪ್ತಿಗೆ ಸೇರಿರುವ ಈ ಪ್ರದೇಶಗಳ ಜನತೆ ಐದು ವರ್ಷಗಳ ಹಿಂದೆ ಮತ ಹಾಕಿ ತಮ್ಮನ್ನು ಪ್ರತಿನಿಧಿಸುವ ಸದಸ್ಯ ರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ, ಅವರ‌್ಯಾರೂ ಮತ ಪಡೆದು ಹೋದ ನಂತರ ಇತ್ತ ಮುಖ ಮಾಡಿಲ್ಲ ಎಂಬ ಆರೋಪವನ್ನು ಬಹುತೇಕರು ಮಾಡುತ್ತಾರೆ.

ಅನೇಕ ದಿನಗಳಿಂದ ಇಲ್ಲಿನ ಚರಂಡಿ ಗಳನ್ನು ಸ್ವಚ್ಛಗೊಳಿಸಿಲ್ಲ. ಮೊದಲು 8ರಿಂದ 10 ಜನ ಚರಂಡಿ ಸ್ವಚ್ಛ ಮಾಡಲು ದಿನ ಬಿಟ್ಟು ದಿನ ಬರು ತ್ತಿದ್ದರು. ಆದರೆ, ಇದೀಗ ಮನಸ್ಸಿಗೆ ತೋಚಿದಾಗ 20 ದಿನಕ್ಕೊಮ್ಮೆ ಒಂದಿಬ್ಬರು ಬಂದು, ಕಾಟಾಚಾರಕ್ಕೆ ಚರಂಡಿ ಸ್ವಚ್ಛಗೊಳಿಸಿದಂತೆ ಮಾಡಿ ಹೋಗುತ್ತಾರೆ ಎಂಬುದು ರೆಡ್ಡಿ ಬೀದಿಯ ನಿವಾಸಿ ಎಸ್.ಮಂಜುನಾಥ ಅವರ ದೂರು.

ಸಿಬ್ಬಂದಿ ಕೊರತೆಯಿರುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ ಎಂಬ ಉತ್ತರ ಮಹಾನಗರ ಪಾಲಿಕೆ ಅಧಿಕಾರಿ ಗಳಿಂದ ಕೇಳಿಬರುತ್ತದೆ ಎಂದು ಅವರು ಹೇಳುತ್ತಾರೆ.

`ನಾವು ಇಲ್ಲಿ ನಿತ್ಯವೂ ನರಕ ಅನುಭವಿಸುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದೇವೆ. ಅನೇಕರು ಜೀವನ್ಮರಣದ ನಡುವೆ ಹೋರಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದಾಗಿದೆ. ಆದರೂ ನಮ್ಮ ಗೋಳು ಕೇಳುವವರೇ ಇಲ್ಲ~ ಎಂದು ಸಿಂದಗಿ ಓಣಿಯ ಸುರೇಖಾ, ಶಿವಲೀಲಮ್ಮ, ಮಂಜುಳಾ, ಬೀಬಿ ಮತ್ತಿತರರು ಗೋಳಾಡುತ್ತಾರೆ.

ಈ ಪ್ರದೇಶದಲ್ಲಿರುವ ಕಸದ ಕಂಟೇನರ್‌ಗಳು ತುಂಬಿ ತುಳುಕುತ್ತಿದ್ದು, ಹೊರಚೆಲ್ಲಿರುವ ಕಸವನ್ನು ಬಿಡಾಡಿ ದನಗಳು ತಿನ್ನುತ್ತ ಓಡಾಡುತ್ತವೆ. ಈ ಬಗ್ಗೆ ಅನೆಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಖಲೀಲ್, ಚಂದ್ರು, ಪ್ರಶಾಂತ, ಶ್ರೀಕಾಂತ, ವಿನಯ್ ಮತ್ತಿತರ ಯುವಕರು `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.

ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಜನತೆ ಎದುರಿಸುತ್ತಿರುವ ಸಂಕಷ್ಟವನ್ನು ದೂರ ಮಾಡಲು ಪಾಲಿಕೆ ಅಧಿಕಾರಿ ಗಳೂ. ಸದಸ್ಯರೂ ಯತ್ನಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.