ADVERTISEMENT

`ಜನರೊಂದಿಗೆ ಸೌಜನ್ಯದಿಂದ ವರ್ತಿಸಿ'

ಅಧಿಕಾರಿಗಳ ಬೆವರಿಳಿಸಿದ ಸಚಿವ ಪರಮೇಶ್ವರ ನಾಯ್ಕ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 9:55 IST
Last Updated 18 ಜೂನ್ 2013, 9:55 IST
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಜಿ.ಪಂ. ಸಿಇಓ ಮಂಜುನಾಥ ನಾಯ್ಕ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಚಿತ್ರದಲ್ಲಿದ್ದಾರೆ
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಜಿ.ಪಂ. ಸಿಇಓ ಮಂಜುನಾಥ ನಾಯ್ಕ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಚಿತ್ರದಲ್ಲಿದ್ದಾರೆ   

ಬಳ್ಳಾರಿ: ಸರ್ಕಾರಿ ಅಧಿಕಾರಿಗಳು ಜನ ಸಾಮಾನ್ಯರನ್ನು ಕೀಳಾಗಿ ಕಾಣದೆ, ಅವರೊಂದಿಗೆ ಸೌಜನ್ಯ, ಸೌಹಾರ್ದದಿಂದ ನಡೆದುಕೊಳ್ಳಬೇಕು. ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಶಾಲೆಯ ವಿದ್ಯಾರ್ಥಿಗಳ ದಂಡು ಮನೆಯತ್ತ ನುಗ್ಗಿದಂತೆ ಹೊರಟು ಹೋಗದೆ, ಜನರ ಸಮಸ್ಯೆಗಳ ಕುರಿತ ಯೋಜನೆಗಳ ಜಾರಿಗೆ ರಾತ್ರಿ 9ರವರೆಗೆ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಆದೇಶ ನೀಡಿದ ಅವರು, ರೈತರು ಮತ್ತು ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ನಡೆದುಕೊಳ್ಳಬೇಕು. ಅನಕ್ಷರಸ್ಥ ಜನರನ್ನು ಕೀಳಾಗಿ ಕಾಣದೆ ಅವರನ್ನು ಗೌರವದಿಂದ ನೋಡಬೇಕು. ಜನ ಸಾಮಾನ್ಯರ ತೆರಿಗೆ ಹಣದಿಂದಲೇ ತನ್ನ ಸಿಬ್ಬಂದಿಗೆ ಸರ್ಕಾರ ಸಂಬಳ ನೀಡುತ್ತದೆ. ಅದನ್ನು ಅರಿತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಪಾಪ ಪರಿಹರಿಸಿಕೊಳ್ಳಿ
ಅಧಿಕಾರಿಗಳು, ರಾಜಕಾರಣಿಗಳು ಅನೇಕ ಭ್ರಷ್ಟಾಚಾರದಲ್ಲಿ ತೊಡಗಿರುವುದು ಜನರಿಗೆ ಗೊತ್ತೇ ಇದೆ. ಜನಸೇವೆ ಮಾಡಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಈ ಹಿಂದೆ ಮಾಡಿದ ಪಾಪವನ್ನು ಪರಿಹರಿಸಿಕೊಳ್ಳಬೇಕು ಎಂದು ಅವರು ಖಾರವಾಗಿಯೇ ನುಡಿದರು.

ಜಿಲ್ಲೆಯ ದೂರದ ತಾಲ್ಲೂಕುಗಳಾದ ಹೂವಿನ ಹಡಗಲಿ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಕೆಲಸದ ನಿಮಿತ್ಯ ಹಣ ಖರ್ಚು ಮಾಡಿಕೊಂಡು ಬರುವ ಜನರನ್ನು ಕಾಯಿಸದೆ ಕೆಲಸ ಮಾಡಬೇಕು. ಆದರೆ, ಅನೇಕ ಅಧಿಕಾರಿಗಳು ಜನರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಹಾಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಆಗಬಾರದ್ದು ಆಗುತ್ತದೆ
`ಜನರ ತೆರಿಗೆಯಿಂದ ನಾವೆಲ್ಲ ಸಂಬಳ, ಸೌಲಭ್ಯ ಪಡೆಯುತ್ತೇವೆ. ಅವರು ನಿಟ್ಟುಸಿರು ಬಿಡದಂತೆ ಕೆಲಸ ಮಾಡಬೇಕು. ಆತ್ಮಸಾಕ್ಷಿಗೆ ಬೆಲೆ ನೀಡಿ ಸೇವೆ ಸಲ್ಲಿಸಿದರೆ ಮಾತ್ರ ನಾವು ಮಾಡಿರುವ ಅರ್ಧದಷ್ಟು ಪಾಪ ಕಡಿಮೆಯಾಗುತ್ತದೆ. ಮಾಡಬಾರದ್ದನ್ನು ಮಾಡಿದರೆ  ಆಗಬಾರದ್ದು ಆಗುತ್ತದೆ. ಸಾಯುವ ಮುನ್ನ ಒಳ್ಳೆ ಕೆಲಸ ಮಾಡಿ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು' ಎಂದು ಅವರು ಕಿವಿಮಾತು ಹೇಳಿದರು.

ನಿಗದಿತ ವೇಳೆ ಕೆಲಸ ಮಾಡಿಸಿ
ಅರಣ್ಯ ಇಲಾಖೆಯವರು ಬೇಸಿಗೆ ವೇಳೆಯಲ್ಲಿ ಸಸಿ ನೆಡುವುದು, ಲೋಕೋಪಯೋಗಿ ಇಲಾಖೆಯವರು ಮಳೆಗಾಲದಲ್ಲಿ ರಸ್ತೆ ದುರಸ್ತಿ ಮಾಡುವುದು ಸಾಮಾನ್ಯ ವಿಷಯ. ಬೇಸಿಗೆಯಲ್ಲಿ ಸಸಿ ನೆಟ್ಟರೆ ಸಸಿ ಒಣಗಿ ಹೋಗುತ್ತದೆ. ಮಳೆಗಾಲದಲ್ಲಿ ಡಾಂಬರ್ ಹಾಕಿದರೆ ಅದು ರಸ್ತೆಗೆ ಹೊಂದಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡುವ ಅನುದಾನ ಸದ್ಬಳಕೆ ಆಗುವಂತೆ ಬಳಸಬೇಕು ಎಂದು ಅವರು ಹೇಳಿದರು.

ಯಾವುದೇ ಕೆಲಸ ಮಾಡಿದರೂ ಅದರಿಂದ ಜನರಿಗೆ ಪ್ರಯೋಜನ ಆಗಬೇಕು. ಸುಮ್ಮನೆ ಗುಡ್ಡಕ್ಕೆ ಕಲ್ಲು ಹೊತ್ತಂತೆ ಅವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡಿದರೆ ಸರ್ಕಾರದ ಅನುದಾನ ಖರ್ಚಾಗುತ್ತದೆಯೇ ವಿನಾ, ಯಾರಿಗೂ ಉಪಯೋಗ ಆಗುವುದಿಲ್ಲ. ಈ ಹಿಂದಿನ ಸರ್ಕಾರ ಸಹಿಸಿದಂತೆ ಈ ಸರ್ಕಾರ ಅದನ್ನು ಸಹಿಸುವುದೂ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ತೋರಣಗಲ್‌ನಿಂದ ಬಳ್ಳಾರಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, 15 ದಿನಗಳ ಒಳಗಾಗಿ ಈ ರಸ್ತೆಯು ಸಂಚಾರಕ್ಕೆ  ಯೋಗ್ಯವಾಗುವಂತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ಗಮನ ಸೆಳೆದು, ಶಿಸ್ತು ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಚಲನಶೀಲರಾಗಿ, ಕನ್ನಡಕ್ಕೆ ಆದ್ಯತೆ ನೀಡಿ: ಅಧಿಕಾರಿಗಳು ಚಲನಶೀಲರಾಗಿ ಇರಬೇಕು. ಕಚೇರಿಯಲ್ಲೇ ಕಾಲ ಕಳೆಯದೆ, ಗ್ರಾಮೀಣ ಪ್ರದೇಶಕ್ಕೆ ಆಗಾಗ ಭೇಟಿ ನೀಡಿ ಜನರ ಸಮಸ್ಯೆ ಅರಿಯಬೇಕು ಎಂದು ಅವರು ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೂ ಸಹಕರಿಸಬೇಕು. ಆಂಗ್ಲ ಭಾಷೆಯಲ್ಲಿ ಯಾವುದೇ ರೀತಿಯ ಪತ್ರ ವ್ಯವಹಾರ ಮಾಡದೆ, ಅಂಥ ಪತ್ರಗಳನ್ನು ವಾಪಸ್ ಕಳುಹಿಸಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಲು ಎಲ್ಲರೂ ಕಾಣಿಕೆ ನೀಡಬೇಕು. ಮುಖ್ಯಮಂತ್ರಿಯವರೇ  ಈ ಕುರಿತು ಕಟ್ಟೆಚ್ಚರ ನೀಡಿದ್ದಾರೆ ಎಂದು ವಿವರಿಸಿದರು.

ಸಭೆಗಳಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಆದರೆ, ಈ ರೀತಿ ಎರಡು ಬಾರಿ ಮಾತ್ರ ಮೋಸ ಮಾಡಬಹುದು. 3ನೇ ಬಾರಿ ತಪ್ಪು ಕಂಡುಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ ನಾಯ್ಕ ಸೂಚಿಸಿದರು.

ಆಸ್ಪತ್ರೆಗಳ ದುಃಸ್ಥಿತಿ
ಆರೋಗ್ಯ ಇಲಾಖೆ ಸಿಬ್ಬಂದಿ 24 ಗಂಟೆ ಸೇವೆ ಸಲ್ಲಿಸುವುದಕ್ಕೆ ಆದ್ಯತೆ ನೀಡಬೇಕು. ಬಡ ರೋಗಿಗಳ ಸೇವೆಯೇ ದೇವರ ಸೇವೆ ಎಂದು ಭಾವಿಸುವ ಮೂಲಕ ಚಿಕಿತ್ಸೆ ನೀಡಬೇಕು. ಸಿಬ್ಬಂದಿ ಕೊರತೆ, ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಸರ್ಕಾರ ಬದ್ಧವಾಗಿದ್ದು, ವೈದ್ಯರು, ಆರೋಗ್ಯ ಸಹಾಯಕರು ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಅಲ್ಲಿ ದಾಖಲಾದ ರೋಗಿಗಳನ್ನು ಮಾತನಾಡಿಸಲು ಹೋಗುವ ಸಂಬಂಧಿಗಳೂ ಚಿಕಿತ್ಸೆಗೆ ದಾಖಲಾಗುವ ಸ್ಥಿತಿ ಇದೆ. ಅಲ್ಲದೆ, ಆಸ್ಪತ್ರೆಗಳಲ್ಲಿನ ಬಚ್ಚಲು ಮತ್ತು ಶೌಚಾಲಯಗಳ ಸ್ಥಿತಿ ಹೇಗಿದೆಯೆಂದರೆ, ಆರು ತಿಂಗಳು ಅಥವಾ ಒಂದು ವರ್ಷ ಬದುಕಿ ಉಳಿಯಬಲ್ಲ ರೋಗಿ ಎರಡೇ ತಿಂಗಳಿಗೆ ಇಹಲೋಕ ಯಾತ್ರೆ ತ್ಯಜಿಸವಂತಿದೆ. ಸಿಬ್ಬಂದಿಯು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಅನೇಕ ಇಲಾಖೆಗಳ ಪ್ರಗತಿಯ ಕುರಿತು ವಿವರವಾದ ಮಾಹಿತಿ ಪಡೆದ ಸಚಿವರು, ಅನುಭವದ ಹಿನ್ನೆಲೆಯಲ್ಲಿ ಸಲಹೆ ಸೂಚನೆ ನೀಡಿದರಲ್ಲದೆ, ಜನಪರ ಕಾಳಜಿಯೇ ಸರ್ಕಾರಿ ಸಿಬ್ಬಂದಿಯ ಕರ್ತವ್ಯ ಎಂಬುದನ್ನೇ ಒತ್ತಿ ಹೇಳಿದರು. ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿ.ಪಂ. ಸಿಇಓ ಮಂಜುನಾಥ ನಾಯ್ಕ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.