ADVERTISEMENT

ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದ ಕಾಂಗ್ರೆಸ್‌: ಮೋದಿ

ಜಿಲ್ಲೆಯಲ್ಲಿ ಹರಡಿದ ಪ್ರಧಾನಿ ಮೋದಿ ಹವಾ

​ಪ್ರಜಾವಾಣಿ ವಾರ್ತೆ
Published 4 ಮೇ 2018, 7:03 IST
Last Updated 4 ಮೇ 2018, 7:03 IST

ಬಳ್ಳಾರಿ: ‘ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಪ್ರಾಕೃತಿಕ ಸಂಪತ್ತು, ರೈತರು, ಗಣಿ ಸಂತ್ರಸ್ತರು, ಹಾಗೂ ಯುವಜನರ ಅಭಿವೃದ್ಧಿಗೆ ತಕ್ಕ ಕೆಲಸಗಳನ್ನು ಸರ್ಕಾರ ಮಾಡಲಿಲ್ಲ’ ಎಂದು ದೂರಿದರು.

‘ಬೆಂಗಳೂರಿನಲ್ಲಿ ಕುಳಿತ ಸರ್ಕಾರ ಇಲ್ಲಿನ ಎಲ್ಲವನ್ನೂ ಕಡೆಗಣಿಸಿತು. ಹೀಗಾಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿಯುವಂತಾಗಿದೆ’ ಎಂದರು.

ADVERTISEMENT

₹2 ಸಾವಿರ ಕೋಟಿ: ‘2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಗೆ ₹2 ಸಾವಿರ ಕೋಟಿ ಅಭಿವೃದ್ಧಿ ಪ್ಯಾಕೇಜ್‌ ಘೋಷಿಸಲಾಗಿತ್ತು. ಕುಡಿಯುವ ನೀರಿನ ಯೋಜನೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಲಿಂಕ್‌ ರಸ್ತೆಗಳ ಅಭಿವೃದ್ಧಿ ಆರಂಭವಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಏನನ್ನೂ ಮಾಡಲಿಲ್ಲ. ನೀರಿನ ಸಮಸ್ಯೆ ಪರಿಹರಿಸಲಿಲ್ಲ. ತುಂಗಭದ್ರಾ ಜಲಾಶಯವಿದ್ದರೂ ರೈತರಿಗೆ ಸಮರ್ಪ ಕವಾಗಿ ನೀರು ದೊರಕುತ್ತಿಲ್ಲ. ಹೂಳು ತೆಗೆಯಬೇಕು ಎಂಬ ಮನವಿಗೂ ಕಿವಿಗೊಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮಾದರಿ: ‘ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಬೆಂಬಲ ಪಡೆದು ನೀರು ಪೂರೈಕೆ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ₹6 ಸಾವಿರ ಕೋಟಿ ಖರ್ಚು ಮಾಡಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಿದ ಪರಿಣಾಮ 11 ಸಾವಿರ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆಯಾಯಿತು. ಕಾಂಗ್ರೆಸ್‌ ಸರ್ಕಾರ ಇದನ್ನು ಮಾದರಿಯಾಗಿ ಪರಿಗಣಿಸಿದ್ದಿದ್ದರೆ, ರಾಜ್ಯದಲ್ಲಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ’ ಎಂದರು.

ವಿರೋಧ: ‘ಹಿಂದುಳಿದ ವರ್ಗದವರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಕೇಂದ್ರ ರೂಪಿಸಿರುವ ಮಸೂದೆಯನ್ನು ಕಾಂಗ್ರೆಸ್‌ ರಾಜ್ಯಸಭೆಯಲ್ಲಿ ಅಂಗೀಕರಿಸದೆ ಸತಾಯಿಸುತ್ತಿದೆ’ ಎಂದರು.
ಅವರನ್ನು ಸನ್ಮಾನಿಸಿದ ಮುಖಂಡರು, ಕುಳಿತ ಭಂಗಿಯಲ್ಲಿರುವ ಆಂಜನೇಯ ಮೂರ್ತಿ ಮತ್ತು ಮರದ ನೇಗಿಲನ್ನು ಸ್ಮರಣಿಕೆಯಾಗಿ ನೀಡಿದರು.

ತಪಾಸಣೆಗೆ ಒಳಗಾದ ಎಸ್ಪಿ: ವೇದಿಕೆ ಮುಂಭಾಗದ ದ್ವಾರದಲ್ಲಿದ್ದ ತಪಾಸಣೆ ತಂಡದ ಬಳಿ ಹೋಗಿ ನಿಂತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ರಂಗರಾಜನ್‌ ತಮ್ಮನ್ನೂ ತಪಾಸಣೆ ಮಾಡುವಂತೆ ಹೇಳಿದರು. ಅವರ ನಡೆಯಿಂದ ಕೆಲ ಕ್ಷಣ ಸಿಬ್ಬಂದಿ ವಿಚಲಿತರಾದರೂ, ಎಚ್ಚೆತ್ತುಕೊಂಡು ತಪಾಸಣೆ ನಡೆಸಿದ್ದು ಗಮನ ಸೆಳೆಯಿತು. ಜನರ ಅನುಕೂಲಕ್ಕಾಗಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಂಸದ ಬಿ.ಶ್ರೀರಾಮುಲು, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಪಕ್ಷದ ಅಭ್ಯರ್ಥಿಗಳಾದ ನೇಮಿರಾಜ ನಾಯ್ಕ, ಎಸ್‌.ಕೃಷ್ಣನಾಯ್ಕ, ಜಿ.ಸೋಮಶೇಖರ ರೆಡ್ಡಿ, ಟಿ.ಎಚ್‌.ಸುರೇಶ್‌ಬಾಬು, ಎಂ. ಎಸ್‌.ಸೋಮಲಿಂಗಪ್ಪ, ಎಸ್‌.ಪಕ್ಕೀರಪ್ಪ, ಡಿ.ರಾಘವೇಂದ್ರ, ಎಚ್‌.ಆರ್‌.ಗವಿಯಪ್ಪ, ಎನ್‌.ವೈ.ಗೋಪಾಲಕೃಷ್ಣ, ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ, ಮುಖಂಡರಾದ ಮೃತ್ಯುಂಜಯ ಜಿನಗಾ, ಕಾರ್ತಿಕೇಯ ಘೋರ್ಪಡೆ, ಎಚ್‌.ಹನುಮಂತಪ್ಪ, ಜೆ.ಶಾಂತಾ ಇದ್ದರು.

ಮೋದಿ ಕನ್ನಡ: ಹುಚ್ಚೆದ್ದು ಕುಣಿದ ಜನ!

ಬಳ್ಳಾರಿ: ಭಾಷಣವನ್ನು ಕನ್ನಡದಲ್ಲೇ ಆರಂಭಿಸಿದ್ದ ಮೋದಿ, ‘ಸ್ವಚ್ಛ, ಸುಂದರ್‌ ಮತ್ತು ಸುರಕ್ಷಿತ ಕರ್ನಾಟಕ ನಿರ್ಮಿ ಸೋಣ’ ಎಂದು ಭಾಷಣದ ಕೊನೆಗೆ ಕನ್ನಡಕ್ಕಿಳಿದರು. ಅವರು ‘ಬನ್ನಿ, ಬನ್ನಿ ಎಲ್ಲರೂ, ಕೈ ಜೋಡಿಸಿ’ ಎನ್ನುತ್ತಲೇ ಚಪ್ಪಾಳೆ, ಶಿಳ್ಳೆಗಳು ಮುಗಿಲು ಮುಟ್ಟಿದವು.

ನಂತರ ಅವರು, ‘ಸರ್ಕಾರ್ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂದು ಏಳು ಬಾರಿ ಜೋರಾಗಿ ಹೇಳಿ, ಕುಣಿಯುವ ಭಂಗಿಯಲ್ಲಿ ತಮ್ಮ ಎರಡೂ ಕೈ ಎತ್ತಿ ಸಭಿಕರಿಂದಲೂ ಹೇಳಿಸಿದರು.

ಆರಂಭದಲ್ಲಿ ಅವರು, ‘ಬಳ್ಳಾರಿಯೇ ಮಹಾ ಜನ್ತೆಗೇ ನನ್ನ ನಮಷ್ಕಾರ್ಗಳೂ. ಹಂಪಿ ವಿರೂಪಾಕ್ಸ್, ಹಜಾರ್ ರಾಮ್‌, ಉಗ್ರ ನರ್ಸಿದೇವರ್ ಸನ್ನಿಧಿಗೆ ನನ್ನ ಭಕ್ತಿಯ ಪ್ರಣಾಮ್‌ಗಳು’ ಎಂದರು.

‘ಇತಿಹಾಸ್‌ ಪ್ರಸಿದ್ಧ ವಿಜಯಾನಗರ್ ಸಾಮ್ರಾಜ್ಯ, ರಾಮ್‌ಭಕ್ತ ಹನುಮಾನ್‌ ಜನ್ಮಸ್ಥಾನ್‌, ಪ್ರಭು ಶ್ರೀರಾಮನ್‌ ಪಾದಸ್ಪರ್ಷ್‌ವಾದ್‌ ಪವಿತ್ರ್ ಈ ಭೂಮಿಗೆ ನನ್ನ ನಮಸ್ಕಾರ್‌ಗಳು’ ಎಂದರು.

‘ಕುಮಾರರಾಮ್‌, ಹಕ್ಕ–ಬಕ್ಕ, ಶ್ರೀಕೃಷ್ಣದೇವರಾಯನಂತ ಮಹಾವೀರ ನಾಡು, ವಿದ್ಯಾರಣ್ಯ, ವ್ಯಾಸರಾಯ, ಪುರಂದರದಾಸ್‌, ಕನಕದಾಸರಂತ ಎಲ್ಲ ಮಹಾತ್ಮರಿಗೆ ನನ್ನ ನಮನ್‌ಗಳು’ ಎಂದು ಹಿಂದೆ ಭಾಷೆಗೆ ಮರಳಿದರು.

ಎಲ್ಲ ರಸ್ತೆಗಳೂ ಮೋದಿ ಕಡೆಗೆ..

ನಗರದ ಎಲ್ಲ ರಸ್ತೆಗಳೂ ಪ್ರಧಾನಿ ಮೋದಿ ಅವರೆಡೆಗೆ ಜನರನ್ನು ಕರೆದೊಯ್ಯುತ್ತಿವೆ ಎಂದು ಭಾಸವಾಗುವ ರೀತಿಯಲ್ಲಿ ಜನಜಂಗುಳಿ ಇತ್ತು.

ಬಿಸಿಲು ಲೆಕ್ಕಿಸದೆ ಮಹಿಳೆಯರು, ವೃದ್ಧರು ನಡೆದುಬಂದರು. ದೂರದ ಊರುಗಳಿಂದ ಸರಕು ಸಾಗಣೆ ವಾಹನಗಳಲ್ಲಿ ಸಾವಿರಾರು ಮಂದಿ ಬಂದಿದ್ದು ಗಮನ ಸೆಳೆಯಿತು. ಜಿಲ್ಲಾ ಕ್ರೀಡಾಂಗಣ ಮುಂದೆ ಯುವಕರು ಮೋದಿ ಮುಖವಾಡ ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಮೋದಿ ಭಾಷಣ ಮಾಡುತ್ತಿದ್ದಾಗ ಹಿಂದಿನ ಸಾಲುಗಳ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಸಮಾವೇಶ ಮುಗಿಯುತಿದ್ದಂತೆ ಮೋದಿ, ಯಡಿಯೂರಪ್ಪ, ಅಮಿತ್‌ ಶಾ ಅವರ ಆಳೆತ್ತರ ಕಟೌಟ್‌ಗಳನ್ನು ಅಭಿಮಾನಿಗಳು ಕೊಂಡೊಯ್ದರು. ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾ ಕ್ರೀಡಾಂಗಣ ರಸ್ತೆ, ಮೇಲು ಸೇತುವೆ ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡತ್ತು.

3 ಹೆಲಿಕಾಪ್ಟರ್‌!

ಬಳ್ಳಾರಿ: ಪ್ರಚಾರ ಸಭೆಗೆ ಮೂರು ಹೆಲಿಕಾಪ್ಟರ್‌ಗಳಲ್ಲಿ ಗಣ್ಯರು, ಭದ್ರತಾ ಮತ್ತು ಮಾಧ್ಯಮ ಸಿಬ್ಬಂದಿ ಬಂದಿಳಿದರು. ಅವುಗಳನ್ನು ನೋಡಲೆಂದೇ ನೂರಾರು ಮಂದಿ ವೇದಿಕೆಯ ಹಿಂಭಾಗದ ಹೆಲಿಪ್ಯಾಡ್‌ ಸುತ್ತ ನೆರೆದಿದ್ದರು. ಭದ್ರತೆಗಾಗಿ ಅಲ್ಲಿ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ ಬೃಹತ್‌ ಗಾತ್ರದಲ್ಲಿ ಬೆಳೆದಿದ್ದ ಎಲ್ಲ ಪೊದೆಗಳನ್ನು ತೆರವುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.