ಬಳ್ಳಾರಿ: ವಕೀಲರು ನಿತ್ಯದ ಆಗು ಹೋಗುಗಳನ್ನು ತಿಳಿಯುವ ನಿಟ್ಟಿನಲ್ಲಿ ಮಾತ್ರವಲ್ಲದೆ, ನ್ಯಾಯಾಂಗ ವ್ಯವಸ್ಥೆ ಯಲ್ಲಿ ಉಂಟಾಗುವ ಪ್ರತಿ ಹಂತದ ಬೆಳವಣಿಗೆಯನ್ನೂ, ಮಹತ್ವದ ತೀರ್ಪುಗಳನ್ನೂ ಅಭ್ಯಸಿಸುವ ಮೂಲಕ ತಮ್ಮ ಜ್ಞಾನದ ಹರಹನ್ನು ಹೆಚ್ಚಿಸಿ ಕೊಳ್ಳಬೇಕು ಎಂದು ಸಹಾಯಕ ಸಾಲಿಸಿಟರ್ ಜನರಲ್ ಎಸ್. ಕಲ್ಯಾಣ ಬಸವರಾಜ್ ಸಲಹೆ ನೀಡಿದರು.
ವಕೀಲರ ಸಂಘವು ನಗರದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅವಧಿಯ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಜ್ಞಾನಕ್ಕೆ ಮಿತಿ ಎಂಬುದೇ ಇಲ್ಲ. ಕಕ್ಷಿದಾರರ ಒಳಿತಿಗಾಗಿ ವಕೀಲರು ಸದಾ ಅಧ್ಯಯನಶೀಲರಾಗುವ ಮೂಲಕ ಜ್ಞಾನವನ್ನು ಸಂಪಾದಿಸುತ್ತಲೇ ಇರುವ ಅಗತ್ಯವಿದೆ ಎಂದು ಅವರು ಹೇಳಿದರು.
ಬ್ರಿಟಿಷರ ವಿರುದ್ಧ ನಡೆದ ಹೋರಾಟದ ಮುಂಚೂಣಿಯಲ್ಲಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ವಕೀಲರೇ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಯುವ ವಕೀಲರು ಇದನ್ನು ಅರಿಯುವ ಮೂಲಕ ನಾಯಕತ್ವ ಗುಣಗಳು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಜಗತ್ತಿನಲ್ಲೇ ಉತ್ತಮ ಹೆಸರಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಯುವ ವಕೀಲರದ್ದಾ ಗಿದ್ದು, ಸೇವಾ ಮನೋಭಾವವನ್ನು ರೂಢಿಸಿಕೊಳ್ಳುವ ಮೂಲಕ ಆ ಜವಾಬ್ದಾರಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ. ಉಮಾ ಮಾತನಾಡಿ, ವಕೀಲರು ಕಂಪ್ಯೂಟರ್ ಜ್ಞಾನ ಹೊಂದುವ ಮೂಲಕ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿನ ಮಹತ್ವದ ತೀರ್ಪುಗಳನ್ನು ಆನ್‌ಲೈನ್ ಮೂಲಕ ಅವಲೋಕಿಸಿ, ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘವು `ಅಧ್ಯಯನ ವೃತ್ತ~ ರೂಸಿಕೊಂಡು ಪ್ರತಿ ತಿಂಗಳೂ ಇಂತಹ ಕಾರ್ಯಾಗಾರ, ವಿಚಾರ ಸಂಕಿರಣ, ಚರ್ಚೆ ಏರ್ಪಡಿಸುವ ಮೂಲಕ ಜ್ಞಾನದ ವಿನಿಮಯ ಮಾಡಿ ಕೊಳ್ಳಬೇಕು. ಇಂಗ್ಲಿಷ್ ಭಾಷೆಯ ಮೇಲೂ ಪ್ರಾಬಲ್ಯ ಸಾಧಿಸುವ ಮೂಲಕ ಸಮರ್ಥವಾಗಿ ವಕಾಲತ್ತು ವಹಿಸಬೇಕು ಎಂದರು.
ನ್ಯಾಯಾಧೀಶರಾಗಲು ಅಗತ್ಯವಿರುವ ಅಧ್ಯಯನ ಶೀಲತೆಯನ್ನು ಪ್ರತಿ ವಕೀಲರೂ ರೂಢಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತಿತರ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಲ್ಲದೆ, ನಿರಂತರ ಅಭ್ಯಾಸದಲ್ಲಿ ತೊಡಗಬೇಕು ಎಂದರು.
ವಕೀಲರ ಪರಿಷತ್ ಸದಸ್ಯ ಜೆ.ಎಂ. ಅನಿಲಕುಮಾರ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್. ಬದರಿನಾಥ, ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷ ಉಡೇದ ಬಸವರಾಜ್, ಶ್ರೀವತ್ಸವ, ಡಾ.ಷಡಕ್ಷರಗೌಡ ಮತ್ತಿತರರು ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಎರೆಗೌಡ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.