ADVERTISEMENT

ಡಣಾಯಕನಕೆರೆ ಯೋಜನೆ; ಬೆಂಬಿಡದ ವಿಘ್ನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 5:55 IST
Last Updated 20 ಸೆಪ್ಟೆಂಬರ್ 2013, 5:55 IST
ಡಣಾಯಕನಕೆರೆ ಯೋಜನೆ; ಬೆಂಬಿಡದ ವಿಘ್ನ
ಡಣಾಯಕನಕೆರೆ ಯೋಜನೆ; ಬೆಂಬಿಡದ ವಿಘ್ನ   

ಮರಿಯಮ್ಮನಹಳ್ಳಿ: ಈ ಭಾಗದ ರೈತರ ಕನಸಾದ ತುಂಗಭದ್ರಾ ಜಲಾಶಯದ ಹಿನ್ನೀರಿನ ಏತನೀರಾವರಿಯಿಂದ ಡಣಾಯಕನಕೆರೆಗೆ ನೀರು ಹಾಯಿಸುವ ಕಾರ್ಯಕ್ಕೆ ಎಡರುತೊಡರುಗಳು ಮುಂದುವರಿದಿದ್ದು, ಈಗ ಮತ್ತೊಂದು ವಿಘ್ನ ಎದುರಾಗಿದೆ.

ಈ ಯೋಜಗೆ ನೀರು ಹಾಯಿಸುವ ಕಾರ್ಯಕ್ಕೆ ಬಿಎಂಎಂ ಕಾರ್ಖಾನೆ ಮುಂದೆ ಹಾದು ಪೈಪ್‌ಲೈನ್‌ನಲ್ಲಿ ಮತ್ತೆ ಸಮಸ್ಯೆ ತಲೆದೋರಿದ್ದು, ಯೋಜನೆಯ ಸಮಸ್ಯೆಗಳು ಬಗೆಹರಿಯದಂತಾಗಿದ್ದು, ಅನ್ನದಾತರ ಸುಮಾರು ವರ್ಷಗಳ ಕನಸಾದ ಯೋಜನೆ ವರವಾಗದೆ  ಒಂದರ್ಥದಲ್ಲಿ ಮುಳುವಾಗುತ್ತಿದೆ.

ಜಲ್ಲೆಯ ಎರಡನೇ ಅತಿದೊಡ್ಡ ಕೆರೆಗೆ ನೀರು ಹಾಯಿಸುವುದಕ್ಕೆ ಕಳೆದ ನವೆಂಬರ್‌ನಲ್ಲಿ ಚಾಲನೆ ನೀಡಲಾಯಿತು. ಈ ಬಾರಿ ಆರಂಭದಲ್ಲಿ ಉತ್ತಮ ಮಳೆಯಾಗಿ ಜಲಾಶಯ ತುಂಬಿದ್ದರಿಂದ ನೀರು ಹರಿದು ಬರಲಿದೆ, ಅಂತರ್ಜಲ ಹೆಚ್ಚುತ್ತದೆಂದು ರೈತರಲ್ಲಿ ಆಶಾಕಿರಣ ಮೂಡಿತ್ತು.

ಸಮಸೆ್ಯಗಳ ಸುಳಿಯಲ್ಲಿ ಸಿಲುಕಿದ ಯೋಜನೆಗೆ ಆರಂಭದಲ್ಲಿ ಒಂದೆರಡು ದಿನ ಹರಿದು, ಪೈಪ್‌ಲೈನ್‌ ಕಿತ್ತು ಹೋಗುತ್ತಿದ್ದರಿಂದ, ಶೇ 40ರಷ್ಟು ತುಂಬಬೇಕಾಗಿದ್ದ ಕೆರೆಯ ಅಂಗಳ ಇನ್ನು ತುಂಬಲಿಲ್ಲ. ಇಪ್ಪತ್ತು ದಿನಗಳಿಂದ ಮಾಯಾವಾದ ಮಳೆಯಿಂದಾಗಿ, ಕೆರೆಯಲ್ಲಿ ಶೇಖರಣೆಯಾದ ಅಲ್ಪಸ್ವಲ್ಪ ನೀರನ್ನು ಬೆಳೆಗಳು ಉಳಿಸಲೆಂದು ರೈತರು ತೂಬು ಎತ್ತಿ ಹರಿಸಿದ್ದಾರೆ.

ಆದರೆ ಶಾಸಕರು ಮಾತ್ರ ಈ ಕಡೆ ನೋಡಿಲ್ಲ ರೈತರ ಕಷ್ಟಕಾರ್ಪಣ್ಯ ಕೇಳಿಲ್ಲ ಎಂಬುದು ಮಾಗಾಣಿ ರೈತರ ಆರೋಪ. ಐದಾರು ದಿನಗಳಿಂದ ಸುರಿಯುತ್ತಿ ರುವ ಮಳೆಗೆ ಕೆರೆಗೆ ಸುಮಾರು ನೀರು ಹರಿದು ಬಂದಿದೆ. ಆರಂಭದಲ್ಲಿಯೇ  ಕಂಟಕಗಳು ಎದುರಾಗಿದ್ದು, ಯೋಜನೆಗೆ ನಿರ್ಮಿಸಿದ ಸುಮಾರು ಏಳು ಏರ್‌ವಾಲ್ವ್ ಗಳ ಯೂನಿಟ್‌ ಅನ್ನೇ ಕಳ್ಳರು ಕದ್ದಿದ್ದರು, ಈ ಬಗ್ಗೆ ದೂರು ನೀಡಿದರೂ, ಪೊಲೀಸರು ದೂರು ದಾಲಿಸಿಕೊಂಡಿಲ್ಲ ಎಂಬುದು ಅಧಿಕಾರಿಗಳ ವಾದ. ಈಗಾಗಲೇ ಸುಮಾರು ಹತ್ತನೆರಡು ಕಡೆಗಳಲ್ಲಿ ಕಿತ್ತ್ತಿದ ಪೈಪ್‌ಲೈನ್‌ ದುರಸ್ತಿಗೊಳಿಸಿ ದ್ದಾರೆ, ಕಾರ್ಖಾನೆಯ ಮುಂದೆ ಪದೇ ಪದೇ ಕಿತ್ತು ಹೋಗುತ್ತಿರುವದು ಯೋಜನೆಯ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದೆ.

‘ಶಾಸಕರು ಆರಂಭದಲ್ಲಿ ತೋರಿಸಿದ ಉತ್ಸಾಹ ಈಗ ತೋರಿಸುತ್ತಿಲ್ಲ. ಏನಾಗಿದೆ ಎಂಬ ಬಗ್ಗೆಯೂ  ಗಮನ ಹರಿಸುತ್ತಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ಕೈಕೊಟ್ಟ ಮಳೆಯಿಂದಾಗಿ, ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಬೆಳೆಗಳು ಉಳಿಸಿ ಕೊಳ್ಳಲು ಬಳಸಿಕೊಂಡಿದ್ದೇವೆ. ಆದರೆ ನಮ್ಮ ಪುಣ್ಯ ಸದ್ಯ ಮಳೆ ಚೆನ್ನಾಗಿ ಸುರಿಯುತ್ತಿದೆ. ಕೆರೆಗೆ ಅಲ್ಪಸ್ವಲ್ವ ನೀರು ಹರಿದು ಬರುತ್ತಿದೆ. ಈ ಭಾಗದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ರೈತರ ಕಷ್ಟ ಕೇಳುವಷ್ಟು, ನೋಡುವಷ್ಟು ಕಾಳಜಿವಹಿಸುತ್ತಿಲ್ಲ ಎನ್ನುತ್ತಾರೆ ಡಣಾಯಕನಕೆರೆ ಮಾಗಾಣಿ ರೈತ ಹನುಮಂತಪ್ಪ.

ಪತ್ರಿಕೆಯೊಂದಿಗೆ ಮಾತನಾಡಿದ ಸಣ್ಣನೀರಾವರಿ ಇಲಾಖೆಯ ಎಇಇ ಅಖ್ತರ್‌ ಮೊಹಿದ್ದೀನ್‌, ಕಾರ್ಖಾನೆಯ ಮುಂದೆ ಹಾದು ಪೈಪ್‌ಲೈನ್‌ನಲ್ಲಿ ಇದ್ದ ದುರಸ್ತಿಕಾರ್ಯ ನಡೆಯುತ್ತಿದ್ದು, ಪೈಪ್‌ಲೈನ್‌ನಲ್ಲಿ ಬಿದ್ದ ಗುಂಡಿಯನ್ನು ಮುಚ್ಚಿದ್ದು, ಕಾರ್ಖಾನೆಯವರು ಕಾಂಕ್ರೀಟ್‌ ಮಾಡಿಸುತ್ತಿದ್ದಾರೆ. ನಾಲ್ಕೈದು ದಿನಗಳಲ್ಲಿ ಪ್ರಾರಂಭಿಸಲಾಗು ತ್ತದೆ. ಹಿನ್ನೀರು ಸರಿಯುವದರೊಳಗೆ ತುಂಬಿಸುವ ಪ್ರಯತ್ನ  ಮಾಡಲಾಗು ತ್ತಿದೆ. ಸುಮಾರು 2500ಮೀಟರ್‌ ಉದ್ದ  ಕಾರ್ಖಾನೆಯ ಮುಂದೆ ಹಾಗೂ ಒಳಗಡೆ ಹಾದು ಹೋದ ಪೈಪ್‌ಲೈನ್‌ಅನ್ನು  ತಮ್ಮ ಸ್ಥಳದಿಂದ ಹೊರಗಡೆ ಹಾಕಿಸಿಕೊಡುವ ಬಗ್ಗೆ ಈಗಾಗಲೇ  ಸರ್ಕಾರದಿಂದ ಅನುಮತಿ ಪಡೆದಿದ್ದು, ಬೇಸಿಗೆ ವೇಳೆಗೆ ಪೈಪ್‌ ಸ್ಥಳಾಂತರಿಸಲಿದ್ದಾರೆ ಎಂದರು.

ಒಟ್ಟಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಪರ ಕಾಳಜಿವಹಿಸಿ  ರೈತಪರ ಯೋಜನೆಗಳ ಬಗ್ಗೆ ನಿಗಾ ವಹಿಸಬೇಕೆಂಬುದು ಈ ಭಾಗದ ನೇಗಿಲಯೋಗಿಗಳ ಒತ್ತಾಯವಾಗಿದೆ.
ಎಚ್‌.ಎಸ್‌.ಶ್ರೀಹರಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.