ADVERTISEMENT

`ನೀರು ಪೂರೈಸಿ ಮತ ಪಡೆಯಿರಿ'

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:02 IST
Last Updated 17 ಏಪ್ರಿಲ್ 2013, 10:02 IST
ಕುರುಗೋಡು ಸಮೀಪದ ಚೆನ್ನಪಟ್ಟಣ ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸುತ್ತಿರುವ  ಮಹಿಳೆಯರು.
ಕುರುಗೋಡು ಸಮೀಪದ ಚೆನ್ನಪಟ್ಟಣ ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸುತ್ತಿರುವ ಮಹಿಳೆಯರು.   

ಕುರುಗೋಡು: ಇಲ್ಲಿಗೆ ಸಮೀಪದ ಚೆನ್ನಪಟ್ಟಣ ಗ್ರಾಮದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೇವಲ 1234ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಲಭ್ಯವಿರುವ ಕೊಳವೆಬಾವಿಗಳಿಗೆ ಜನ ಮುಗಿಬೀಳುತ್ತಿದ್ದಾರೆ.

ಪ್ರಸ್ತುತ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಯಾಚಿಸಲು ಬರುವ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ `ಕುಡಿಯಲು ನೀರು ಕೊಟ್ಟು-ಓಟು ಪಡೆಯಿರಿ' ಎನ್ನುತ್ತಿದ್ದಾರೆ.

10ವರ್ಷದ ಹಿಂದೆ  ಗ್ರಾಮದಿಂದ 2ಕಿಮೀ. ದೂರದಲ್ಲಿ ರೂ. 6ಲಕ್ಷ  ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆ ಅಡಿ ಕೆರೆ ನಿರ್ಮಿಸಿ ತುಂಗಭದ್ರ ಕೆಳಮಟ್ಟದ ಕಾಲುವೆಯಿಂದ ನೀರು ಪೂರೈಸಲಾಗಿದೆ.  ಆದರೆ ಕಳಪೆ ಕಾಮಗಾರಿಯಿಂದಾಗಿ ಟ್ಯಾಂಕ್ ಸೋರುತ್ತಿರುವ ಕಾರಣ ಕೊಳವೆ ಸಂಪೂರ್ಣ ಹಾಳಾಗಿವೆ. ಟ್ಯಾಂಕ್ ದುರಸ್ತಿಗೊಳಿಸಿ ಜನರಿಗೆ ನೀರು ನೀಡುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿಲ್ಲ.

`ಬೋರ್ ನೀರಿಗೂ ಅಸಮರ್ಪಕ ವಿದ್ಯುತ್ ಪೂರೈಕೆ ಅಡ್ಡಿಯಾಗಿದೆ. ವಿದ್ಯುತ್ ಬಂದ ಕೂಡಲೇ ಗ್ರಾಮಸ್ಥರು ತಳ್ಳುವ ಗಾಡಿಯಲ್ಲಿ ಕೊಡ ಹಾಕಿಕೊಂಡು ಬೋರ್‌ವೆಲ್ ಮುಂದೆ ಗುಂಪು ಸೇರುತ್ತಿದ್ದಾರೆ. ಅನೇಕ ವರ್ಷಗಳಿಂದ ಕೆರೆ ನೀರು ನೀಡುವಂತೆ ಜನಪ್ರತಿನಿಧಿಗೆ ಒತ್ತಾಯಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಸ್ಪಂದಿಸಿಲ್ಲ' ಎಂದು ಗ್ರಾಮದ ರೈತ ಸಂಘದ ಅಧ್ಯಕ್ಷ ಸಿ. ಮಲ್ಲಿಕಾರ್ಜುನ ದೂರಿದ್ದಾರೆ.

ರಾಜೀನಾಮೆ ಬೆದರಿಕೆ
ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಮಾಜಿಸಚಿವ ಎಂ.ದಿವಾಕರ ಬಾಬು ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದಿದ್ದರೆ,  ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ನೂತನ ಸದಸ್ಯರು ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಾಲಿಕೆ ಸದಸ್ಯ ಬಿ.ಕುಮಾರಸ್ವಾಮಿ, ವೆಂಕಟರಮಣ ಮತ್ತಿತರರು, ದಿವಾಕರ ಬಾಬು ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ನವದೆಹಲಿಗೆ ತೆರಳಿ, ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ.

ಆದರೂ, ದಿವಾಕರ ಬಾಬು ಅವರ ಬದಲಿಗೆ, ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. `ಪಕ್ಷದ ಹೈಕಮಾಂಡ್ ಸೂಕ್ತವಾಗಿ ಸ್ಪಂದಿಸಿಲ್ಲ. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿರುವ ದಿವಾಕರಬಾಬು ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಿಸದಿದ್ದರೆ, 25ಕ್ಕೂ ಅಧಿಕ ಸದಸ್ಯರು ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ' ಎಂದು ಹೇಳಿದರು. ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರು  ಇದ್ದರು.

ನಂದಿಹಳ್ಳಿ ಹಾಲಪ್ಪ ಕಾಂಗ್ರೆಸ್‌ಗೆ
ಹೂವಿನಹಡಗಲಿ: `ರಾಜಕೀಯ ದೀಕ್ಷೆ ನೀಡಿದ್ದ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರುವ ಮೂಲಕ ದೊಡ್ಡ ಪ್ರಮಾದ ಎಸಗಿದ್ದೇನೆ. ಇದೀಗ ತಪ್ಪಿನ ಅರಿವಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ' ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.

`ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಮತ್ತು ನಮ್ಮ ನಡುವಿನ ತಾತ್ವಿಕ ವಿರೋಧಗಳಿಂದ ಬೇರೆ ಬೇರೆ ಪಕ್ಷದಲ್ಲಿದ್ದು ಹೋರಾಟ ಮಾಡಿಕೊಂಡು ಬಂದಿದ್ದೆವು. ಅವರು ಬದುಕಿರುವಾಗಲೇ ಇಬ್ಬರೂ ಒಂದೇ ಪಕ್ಷದಲ್ಲಿರುವ ಅವಕಾಶ ಸಿಗದೇ ಹೋಗಿದ್ದಕ್ಕೆ ವ್ಯಥೆಪಟ್ಟಿದ್ದೇನೆ' ಎಂದರು.

`ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಪಿ.ರವೀಂದ್ರ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. 125 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ, ಎಪಿಎಂಸಿ ಅಧ್ಯಕ್ಷ ಗೌಸ್‌ಮೊಹಿದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಸಿ.ಮೋಹನರೆಡ್ಡಿ, ಜಿ.ಪಂ. ಸದಸ್ಯ ಜಿ.ವಸಂತ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.