ADVERTISEMENT

ನೀಲಮ್ಮನ ದಯಾಲಿದ್ದ ಮಳಿ ಆಗಿದ್ದು ಬೇಸಾತು...

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 8:00 IST
Last Updated 2 ನವೆಂಬರ್ 2012, 8:00 IST
ನೀಲಮ್ಮನ ದಯಾಲಿದ್ದ ಮಳಿ ಆಗಿದ್ದು ಬೇಸಾತು...
ನೀಲಮ್ಮನ ದಯಾಲಿದ್ದ ಮಳಿ ಆಗಿದ್ದು ಬೇಸಾತು...   

ಬಳ್ಳಾರಿ: `ನೀಲಮ್ಮ ಬೀಸಾಕತ್ತಾಳಂತ... ಅಂತೂ ಅಕಿ ದಯಾಲಿದ್ದ ಮಳಿ ಆಗಾಕತ್ತೈತಿ. ನಮ್ಮ ಬೆಳಿಗೂಳಿಗೆ ಆಸರಾಗೇತಿ. ಹಿಂಗ ಇನ್ನೊಂದ್ಯಾಡ್ ದಿನಾ ಮಳೀ ಹಿಡಕೋಂಡ್ ಬಿಟ್ರ, ಬ್ಯಾಸಿಗೀ ಬೆಳೀ ಕೈ ಸೇರತಾವು.~
ತೀವ್ರ ಬರಗಾಲದಿಂದ ತತ್ತರಿಸಿ, ಮಳೆರಾಯನ ಹಾದಿ ಕಾಯುತ್ತಿದ್ದ ಜಿಲ್ಲೆಯ ಬೆಳಗಲ್ ಗ್ರಾಮದ ರೈತಮಹಿಳೆ ಕನಕಮ್ಮ, `ನೀಲಂ~ ಚಂಡಮಾರುತದಿಂದ ಸುರಿಯುತ್ತಿರುವ ಮಳೆಯ ಕುರಿತು ಗುರುವಾರ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

`ನೀಲಂ~ ಚಂಡಮಾರುತವನ್ನೇ `ನೀಲಮ್ಮ~ ಎಂದು ಸಂಬೋಧಿಸಿದ ಅವರು, ತಾವು ಬೆಳೆದ ಹಿಂಗಾರು ಬೆಳೆಗೆ ಈ ಹಸಿಮಳೆ ಆಸರೆಯಾಗಿದೆ ಎಂದರು.

ಬಂಗಾಳ ಕೊಲ್ಲಿಯನ್ನು ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಬರದಿಂದ ಕಂಗೆಟ್ಟಿರುವ ರೈತಸಮೂಹ ನಿಟ್ಟಿಸಿರು ಬಿಡುವಂತಾಗಿದೆ.

ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕೂಡ್ಲಿಗಿ, ಸಂಡೂರು, ಹೊಸಪೇಟೆ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಬುಧವಾರ ರಾತ್ರಿ ಆರಂಭವಾದ ಧೋ ಮಳೆ, ಗುರುವಾರ ಸಂಜೆಯವರೆಗೂ ಮುಂದುವರಿದ ಪರಿಣಾಮ ಜನಜೀವನ ಅಸ್ತವ್ಯವಸ್ತಗೊಂಡಿದೆ.

ಗುರುವಾರ ಆಚರಿಸಬೇಕಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭಗಳಿಗೆ ಮಳೆ ಅಡ್ಡಿಪಡಿಸಿದರೂ, ಜನರಲ್ಲಿ ಬೇಸರ ಮೂಡದೆ, ಹರ್ಷಚಿತ್ತರಾಗುವಂತೆ ಮಾಡಿದೆ.

ಹಿಂಗಾರು ಬೆಳೆಗೆ ಆಸರೆ: ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ತಾಲ್ಲೂಕುಗಳ ಮಳೆಯಾಶ್ರಿತ ಪ್ರದೇಶಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ, ಕುಸುಬಿ, ಜೋಳ, ಗುರೆಳ್ಳು, ಹುರುಳಿ ಬಿತ್ತನೆ ಮಾಡಿ, ಮಳೆಯ ಕೊರತೆಯಿಂದಾಗಿ ಬೆಳೆ ಒಣಗಿ ಹೋಗುತ್ತಿರುವುದನ್ನು ಕಂಡು ಕಂಗಾಲಾಗಿದ್ದ ರೈತರಿಗೆ ಇದೀಗ ಆರಂಭವಾಗಿರುವ ಮಳೆ ಕೊಂಚ ನೆಮ್ಮದಿ ಮೂಡಿಸಿದೆ.

ಬಳ್ಳಾರಿ ತಾಲ್ಲೂಕಿನಲ್ಲಿ 80 ಮಿಮೀ ಮಳೆ ಸುರಿದಿದ್ದು, ಸಂಡೂರಿನಲ್ಲಿ 60 ಮಿಮೀ, ಕಂಪ್ಲಿಯಲ್ಲಿ 60 ಮಿಮೀ, ಹೊಸಪೇಟೆಯಲ್ಲಿ 65 ಮಿಮೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.

`ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಅಪಾರ ಪ್ರಮಾಣದ ಬೆಳೆ ಒಣಗಿ ಹೋಗಿದೆ. ಆದರೂ, ಅಂಗೈಯಲ್ಲಿ ಜೀವ ಹಿಡಿದಿದ್ದ ಕೆಲವು ಬೆಳೆಗಳಿಗೆ,   `ಪ್ರವಾಹದಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿಯೇ ಆಸರೆ~ ಎಂಬಂತೆ ವರದಾನವಾಗಿದೆ. ಅಲ್ಲದೆ, ತೀವ್ರ ಬರಗಾಲದಿಂದ ತತ್ತರಿಸಿರುವವರಿಗೆ ತುಸು ತಡವಾಗಿ ಸುರಿಯುತ್ತಿರುವ ಮಳೆ ನೆಮ್ಮದಿ ನೀಡಿದೆ. ಒಣಗುತ್ತ ಸಾಗಿದ್ದ ಬೆಳೆಗಳಿಗೆ ಆಮ್ಲಜನಕ ನೀಡಿದಂತಾಗಿದೆ~ ಎಂದು ಬೆಳಗಲ್‌ನ ರೈತ ಬಸವರೆಡ್ಡಿ `ಪ್ರಜಾವಾಣಿ~ ಎದುರು ಸಂತಸ ಹಂಚಿಕೊಂಡರು.

ತುಂಬಿದ ಕೆರೆ: ಕೂಡಿಗಿ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಪಟ್ಟಣದ ಹೊರ ವಲಯದಲ್ಲಿರುವ ಅಮರದೇವರ ಗುಡ್ಡ ಗ್ರಾಮದ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ.

ತಾಲ್ಲೂಕಿನ ವಿವಿಧೆಡೆ ತಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಕುಸಿದಿರುವ ಅಂತರ್ಜಲ ಮಟ್ಟದ ಸುಧಾರಣೆಗೆ ಅನುಕೂಲ ಕಲ್ಪಿಸಿದೆ.

ತಡವಾಗಿ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಬೆಳೆದಿರುವ ಶೇಂಗಾ ಬೆಳೆಗೆ ಮಾರಕವಾಗಿ ಪರಿಣಮಿಸಿದೆ.

ಸಜ್ಜೆ ಬೆಳೆ ನಾಶ: ಮಳೆಯಿಂದ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲವಾಗಿದ್ದರೂ, ಕಟಾವು ಮಾಡಿ, ರಸ್ತೆಯ ಮೇಲೆ ಹಾಕಲಾಗಿದ್ದ   ಸಜ್ಜೆ ಬೆಳೆ ಮಳೆಗೆ ಆಹುತಿಯಾಗಿದೆ.

ಕಣ ಮಾಡುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಅಪಾರ ಮೌಲ್ಯದ ಸಜ್ಜೆ ಹಾಗೀಡಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ತೋಟಗಾರಿಕೆ ಬೆಳೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ತಾಲ್ಲೂಕಿನ ರೈತರಿಗೆ ಮಳೆ ಸಂತಸ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.