ADVERTISEMENT

ಪಕ್ಷದಲ್ಲಿ ತುಕಾರಾಂಗೆ ಪೈಪೋಟಿ ಇಲ್ಲ! 

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 8:49 IST
Last Updated 24 ಫೆಬ್ರುವರಿ 2018, 8:49 IST

ಕೃಷ್ಣಾನಗರ (ಸಂಡೂರು): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಹಾಲಿ ಶಾಸಕ ಈ.ತುಕಾರಾಂ ಅವರಿಗೆ ಪೈಪೋಟಿ ನೀಡುವವರೇ ಇಲ್ಲ!

ತಾಲ್ಲೂಕಿನ ಕೃಷ್ಣಾನಗರದಲ್ಲಿನ ವಿ.ಎಸ್.ಎಲ್. ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಕೆಪಿಸಿಸಿ ವೀಕ್ಷಕರಾದ ಬಿ.ವಿ. ನಾಯಕ್‌ ಹಾಗೂ ಮಲ್ಲಿಕಾರ್ಜುನ ನಾಗಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಅಂಶ ಎದ್ದುಕಂಡಿತು.

ಏಕೆಂದರೆ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ಈ ಮುನ್ನ ನಡೆದಿದ್ದ ಸಭೆಗಳಲ್ಲಿ ಹಲವರು ನಾಮಪತ್ರ ಸಲ್ಲಿಸಿದಂತೆ ಇಲ್ಲಿ ಬಹುಸಂಖ್ಯೆಯ ಆಕಾಂಕ್ಷಿಗಳು ಕಂಡು ಬರಲಿಲ್ಲ.‌ ಇಂಥ ಸನ್ನಿವೇಶದಲ್ಲಿ ತುಕಾರಾಂ ನಾಮಪತ್ರ ಸಲ್ಲಿಸಿದ ಏಕೈಕ ಆಕಾಂಕ್ಷಿಯಾಗಿ ಹೊರಹೊಮ್ಮಿದರು.

ADVERTISEMENT

ಪೂರ್ಣ ಬೆಂಬಲ: ಸಭೆಯಲ್ಲಿ ಸೇರಿದ್ದ ಸಂಡೂರು ಹಾಗೂ ತೋರಣಗಲ್‌ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ತಮ್ಮ ಕೈಗಳನ್ನು ಮೇಲೆತ್ತಿ, ಒಮ್ಮತದಿಂದ ತುಕರಾಂ ಅವರನ್ನು ಬೆಂಬಲಿಸಿದರು. ನಂತರ ಅವರು ಅರ್ಜಿ ಸಲ್ಲಿಸಿದರು.

ನಂತರ ಮಾತನಾಡಿದ ನಾಯಕ್‌, ‘ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ಪಡೆಯುವ ಅವಕಾಶವಿಲ್ಲ. ಕೋಮುವಾದಿಯಾದ ಆ ಪಕ್ಷಕ್ಕೆ ಹೋರಾಟದ ಇತಿಹಾಸವೂ ಇಲ್ಲ. ಹೀಗಾಗಿ ರಾಜಕಾರಣವನ್ನು ವ್ಯಾಪಾರೀಕರಣಗೊಳಿಸುತ್ತಿದೆ. ಈ ಬಗ್ಗೆ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು. ಕಾಂಗ್ರೆಸ್‌ ಪರವಾದ ವಾತಾವರಣ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಂಡೂರು–ತೋರಣಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್ ಕುಮಾರ್ ಹಾಗೂ ಜಿ. ಏಕಾಂಬರಪ್ಪ, ನಗರ ಜಿಲ್ಲಾ ಘಟಕದ ಅಧ್ಯಕ್ಷ
ಮಹ್ಮದ್‌ ರಫೀಕ್, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ, ತಾಲ್ಲೂಕು ಘಟಕದ ಅಧ್ಯಕ್ಷೆ ಪಿ. ಈರಮ್ಮ, ಉಪಾಧ್ಯಕ್ಷರಾದ ಈರಮ್ಮ, ರೇಖಾ, ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.