ADVERTISEMENT

ಪಾರದರ್ಶಕ ತೀರ್ಪಿನಿಂದ ಪ್ರತಿಭೆಗೆ ಮನ್ನಣೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 7:04 IST
Last Updated 29 ನವೆಂಬರ್ 2017, 7:04 IST

ಬಳ್ಳಾರಿ: ‘ಪಾರದರ್ಶಕ ತೀರ್ಪಿನಿಂದ ಮಾತ್ರ ಪ್ರತಿಭೆಗೆ ಮನ್ನಣೆ ದೊರಕುತ್ತದೆ’ ಎಂದು ಶಾಸಕ ಅನಿಲ್‌ ಲಾಡ್‌ ಪ್ರತಿಪಾದಿಸಿದರು. ನಗರದ ಶ್ರೀ ವಿಶ್ವೇಶ್ವರಯ್ಯ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರದಿಂದ ಆರಂಭವಾದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ರಾಜ್ಯದ 34 ಜಿಲ್ಲೆಗಳಿಂದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ತೀರ್ಪುಗಾರರು ಪಾರದರ್ಶಕವಾಗಿ ತೀರ್ಪು ಪ್ರಕಟಿಸಬೇಕು’ ಎಂದರು.

‘ಆಟದ ಸ್ಪರ್ಧೆಗಳಲ್ಲಿ ಇರು ವಂತೆ ಫಲಿತಾಂಶ ಪ್ರಕಟಿಸುವ ಮುನ್ನ, ನಿರ್ಣಾಯಕ ಕ್ಷಣಗಳನ್ನು ಭೂತಗನ್ನಡಿಯಿಂದ ಮತ್ತೊಮ್ಮೆ ವೀಕ್ಷಿಸುವ ಅವಕಾಶ ಇಲ್ಲಿ ಇರುವುದಿಲ್ಲ. ಒಮ್ಮೆ ಪ್ರತಿಭೆ ಪ್ರದರ್ಶನಗೊಂಡರೆ ಮುಗಿಯಿತು. ಅದರ ಬಗ್ಗೆ ತೀರ್ಪು ಕೊಡುವುದು ಕಷ್ಟಕರವಾಗುತ್ತದೆ. ಆದರೂ ತೀರ್ಪುಗಾರರು ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಎಲ್ಲರೂ ಪ್ರತಿಭಾವಂತರೇ: ‘ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕಷ್ಟೇ’ ಎಂದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್, ‘ಎರಡೂ ಕೈ ಇಲ್ಲದಿದ್ದರೂ ಕುಂಗ್‌ಫೂ ಕಲಿಯುವ ಆಸೆಯುಳ್ಳ ಬಾಲಕನಿಗೆ ಆತನ ಗುರುವು ರಕ್ಷಣಾತ್ಮಕ ತಂತ್ರಗಳಿಗಿಂತಲೂ, ಭಿನ್ನವಾದ ತಂತ್ರಗಳನ್ನು ಹೇಳಿಕೊಟ್ಟ ಕಾರಣ ಆತ ಯಶಸ್ವಿ ಕುಂಗೂಫೂ ಪಟುವಾದ’ ಎಂದು ವಿವರಿಸಿದರು.

ADVERTISEMENT

’ವಿಜಯನಗರದ ಅರಸರು ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅದ್ಭುತ ನೀರಾವರಿ ವ್ಯವಸ್ಥೆಯನ್ನೂ ರೂಪಿಸಿರು ವುದು, ಅವರ ತಂತ್ರಜ್ಞಾನ ಕೌಶಲಕ್ಕೆ ಸಾಕ್ಷಿ. ಅಂಥವರಿದ್ದ ಊರಿನಲ್ಲಿ ಸ್ಪರ್ಧೆಗಳು ನಡೆದಿರುವುದು ಹೆಮ್ಮೆಯ ಸಂಗತಿ’ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಮುಖ್ಯಕಾರ್ಯನಿರ್ವಹಣಾ ಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿದರು. ಡಿಡಿಪಿಐ ಎ.ಶ್ರೀಧರನ್‌ ಪ್ರಾಸ್ತಾವಿಕ ಮಾತನಾಡಿದರು.

ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕಿ ಫಿಲೋಮಿನಾ ಲೋಬೋ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗೀಯ ನಿರ್ದೇಶಕಿ ಫಾತಿಮಾ ಬೀ, ಶಾಲೆಯ ಅಧ್ಯಕ್ಷ ಕೊನಕಿ ರಾಮಪ್ಪ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಕೆ.ಹನುಮಂತಪ್ಪ, ಸಿ.ನಿಂಗಪ್ಪ, ಎಂ.ಮರಿಸ್ವಾಮಿ ರೆಡ್ಡಿ, ಕೆ.ವಿ.ವಿಜಯಕುಮಾರ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ್‌, ಉಪಾಧ್ಯಕ್ಷೆ ಪಿ.ದೀನಾ, ಸದಸ್ಯೆಯರಾದ ಸೌಭಾಗ್ಯ, ಕೋಟೇಶ್ವರರೆಡ್ಡಿ, ಬನಶಂಕರಿ, ಕಲಾವಿದ ಬೆಳಗಲ್ಲು ವೀರಣ್ಣ ವೇದಿಕೆಯಲ್ಲಿದ್ದರು.

ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಪುರಸ್ಕರಿಸಬೇಕಿದ್ದ ಶಿಕ್ಷಣ ಸಚಿವ ತನ್ವೀರ್‌ಸೇಠ್‌ ಮತ್ತು ಅಧ್ಯಕ್ಷತೆ ವಹಿಸಬೇಕಿದ್ದ ಗ್ರಾಮೀಣ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರ ಗೈರು ಎದ್ದುಕಂಡಿತು.

ತಮ್ಮ ಕ್ಷೇತ್ರದಲ್ಲೇ ರಾಜ್ಯಮಟ್ಟದ ಕಾರ್ಯಕ್ರಮ ನಡೆದರೂ ಬಾರದ ಗೋಪಾಲಕೃಷ್ಣ ಅವರು ಶುಭ ಸಂದೇಶವನ್ನು ಕಳಿಸಿದ್ದರು. ಉಳಿ ದಂತೆ ಜಿಲ್ಲೆಯ ಯಾವೊಬ್ಬ ಶಾಸಕರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅನಿಲ್‌ ಲಾಡ್‌ ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದರು. ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು.

ಊಟ, ವಸತಿ ಅಚ್ಚುಕಟ್ಟು ವ್ಯವಸ್ಥೆ...
ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬಂದ ವಿವಿಧ ಜಿಲ್ಲೆಗಳ 3500 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅಚ್ಚುಕಟ್ಟಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದು ಕಂಡು ಬಂತು. ಮೊದಲ ದಿನ ಹೋಳಿಗೆ, ಐಸ್‌ಕ್ರೀಂ ಊಟ ಸವಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಕುರ್ಚಿಗಳ ಅಭಾವದಿಂದ ಹಲವರು ಮಣ್ಣಿನ ನೆಲದಲ್ಲೇ ಕುಳಿತು ಊಟ ಮಾಡಿದರು. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ನೂಕುನುಗ್ಗಲು ಕಂಡುಬರಲಿಲ್ಲ. ರಾತ್ರಿ ಜೋಳದ ರೊಟ್ಟಿ, ಮೊಳಕೆ ಕಾಳಿನ ಪಲ್ಯದ ಊಟವನ್ನು ಬಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.