ADVERTISEMENT

ಬಜೆಟ್: ಆಶಾ ಕಾರ್ಯಕರ್ತೆಯರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 5:40 IST
Last Updated 22 ಮಾರ್ಚ್ 2012, 5:40 IST

ಬಳ್ಳಾರಿ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಮಾಸಿಕ ಗೌರವಧನ ನೀಡಲು ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.

ರಾಜ್ಯದ 30 ಸಾವಿರ ಆಶಾ ಕಾರ್ಯಕರ್ತೆಯರ ಸೇವೆ ಪರಿಗಣಿಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಂತೆಯೇ ಮಾಸಿಕ ಗೌರವ ಧನವನ್ನು ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಘೋಷಣೆ ಮಾಡಬಹುದು ಎಂಬ ಭರವಸೆ ಹುಸಿಯಾಗಿದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಕಾಟಾಚಾರಕ್ಕೆ ರೂ 500 ಗೌರವಧನ  ಘೋಷಿಸಿರುವುದು ಸರಿಯಲ್ಲ ಎಂದು ಸಂಘ ತಿಳಿಸಿದೆ.

ಅಪೌಷ್ಠಿಕತೆಯಿಂದ ಮಕ್ಕಳು ಸಾವಿಗೀಡಾಗುವ ಪ್ರಕರಣಗಳನ್ನು ಆಶಾ ಕಾರ್ಯಕರ್ತೆಯರು ವರದಿ ಮಾಡಿದರೆ ಮಾತ್ರ ಈ ಗೌರವಧನ ಲಭಿಸುತ್ತದೆ. ಆದರೆ, ವರದಿ ಸಿದ್ಧಪಡಿಸುವುದು ಸುಲಭ ಸಾಧ್ಯವಲ್ಲ. ಹಲವು ಸಂದರ್ಭಗಳಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಮರ್ಯಾದೆಯ ಪ್ರಶ್ನೆ ಆಗಿಸಿಕೊಂಡು ಪ್ರಕರಣವನ್ನು ವರದಿ ಮಾಡುವುದನ್ನೇ ತಡೆದಿರುವ ನಿದರ್ಶನಗಳಿದ್ದು, ಇಂತಹ ಸಂದರ್ಭ ಗೌರವಧನವೇ ಇಲ್ಲದೆ ಕಾರ್ಯಕರ್ತೆಯರು ಪರದಾಡಬೇಕಾಗುತ್ತದೆ ಎಂದು ಸಮಿತಿಯ ಕೆ. ಸೋಮಶೇಖರ್, ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.

ಮಠಗಳಿಗೆ ಹಣ ಸರಿಯಲ್ಲ: ರೈತರಿಗೆ ಪೂರಕವಾದ ಕೃಷಿ ಬಜೆಟ್ ಮಂಡಿಸಲಾಗಿದ್ದು, ಕೈಗಾರಿಕ, ಉದ್ಯಮಗಳಿಗೆ ಮೂಲ ಸೌಲಭ್ಯ, ಉದ್ಯೋಗ ಸೃಷ್ಟಿ, ಉತ್ಪಾದನೆ ಹೆಚ್ಚಳಕ್ಕೆ ಯಾವುದೇ ತರಹದ ಪ್ರಯತ್ನ ಮಾಡಿಲ್ಲ. ಖಾಸಗಿ ಆಸ್ತಿಯಾಗಿರುವ ಮಠಮನ್ಯಗಳಿಗೆ ಹಣ ನೀಡಿರುವ ಸರ್ಕಾರ, ಜನರ ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಮಠಗಳಿಗೆ ನೀಡಿದರೆ, ರಾಜ್ಯದ ಅಭಿವೃದ್ಧಿ ಅಸಾಧ್ಯ  ಎಂದು  ಚೇಂಬರ್ ಆಫ್ ಕಾಮರ್ಸ್‌ನ ಮಾಜಿ ಕಾರ್ಯದರ್ಶಿ ಮುಲ್ಲಂಗಿ ಚಂದ್ರಶೇಖರ ಚೌಧರಿ ಪ್ರತಿಕ್ರಿಯಿಸಿದ್ದಾರೆ.

ರೂ 19 ಸಾವಿರ ಕೋಟಿ ಕೃಷಿಗೆ, ರೂ 6896 ಕೋಟಿ ಗ್ರಾಮೀಣಾಭಿವೃದ್ಧಿಗೆ ನೀಡಿರುವುದು ಹಾಗೂ ಕೃಷಿ, ವಾಣಿಜ್ಯ ಅಭಿವೃದ್ಧಿ ನೀತಿ ರೂಪಿಸಿರುವುದು  ಸ್ವಾಗತಾರ್ಹ. ಉದ್ಯೋಗ ಸೃಷ್ಟಿ ಮತ್ತು `ನನ್ನ ಮನೆ ಯೋಜನೆ~ ಕೇವಲ  ಜನಪ್ರಿಯ ಕಾರ್ಯಕ್ರಮ ಆಗಬಾರದು. ಕಳೆದ ಬಜೆಟ್‌ನಲ್ಲಿನ ಘೋಷಣೆಗಳು ಅನುಷ್ಠಾನಕ್ಕೆ ಬಂದಲ್ಲಿ ಒಳ್ಳೆಯದು ಎಂದು ಅರ್ಥಶಾಸ್ತ್ರಜ್ಞ ನಾಗನಗೌಡ ತಿಳಿಸಿದ್ದಾರೆ.

ಮಠ- ಮಾನ್ಯಗಳಿಗೆ ಆದ್ಯತೆ ನೀಡುವುದರಿಂದ ರಾಜ್ಯದ ಅಭಿವೃದ್ಧಿ ಆಗುವುದಿಲ್ಲ, ಮೂಲ ಸೌಲಭ್ಯ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಿದರೆ ಅಭಿವೃದ್ಧಿ ಸಾಧ್ಯ. ಅಲ್ಲದೆ, ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ  ಅಭಿವೃದ್ಧಿಗೆ ಆದ್ಯತೆ ನೀಡಲಾಗಿಲ್ಲ ಎಂದು ಸ್ಥಳೀಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಮಂಜಪ್ಪ ಹೊಸಮನೆ ಪ್ರತಿಕ್ರಿಯಿಸಿದ್ದಾರೆ.

 ಬೇಸಿಗೆ ರೈಲಿಗೆ ಬೆಂಗಳೂರಿನಲ್ಲಿ ನಿಲುಗಡೆ

ಹುಬ್ಬಳ್ಳಿ: ಮೈಸೂರು-ತಿರುನಲ್ವೇಲಿ ನಡುವೆ ಏಪ್ರಿಲ್ 6ರಿಂದ ಸಂಚರಿಸಲಿರುವ ಬೇಸಿಗೆ ವಿಶೇಷ ರೈಲಿಗೆ (06040/06039) ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್‌ನಲ್ಲಿ ಎರಡು ನಿಮಿಷ ನಿಲುಗಡೆ ನೀಡಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ತಿರುನಲ್ವೇಲಿಯಿಂದ ಆಗಮಿಸುವ ರೈಲು ರಾತ್ರಿ 3.08ಕ್ಕೆ ಕಂಟೋನ್ಮೆಂಟ್ ಸ್ಟೇಷನ್‌ಗೆ ಆಗಮಿಸಲಿದ್ದು 3.10ಕ್ಕೆ ಹೊರಡಲಿದೆ. ಮೈಸೂರಿನಿಂದ ತೆರಳುವಾಗ ರಾತ್ರಿ 11.15ಕ್ಕೆ ಕಂಟೋನ್ಮೆಂಟ್ ಸ್ಟೇಷನ್ ತಲುಪಲಿದ್ದು 11.17ಕ್ಕೆ ಹೊರಡಲಿದೆ ಎಂದು ತಿಳಿಸಲಾಗಿದೆ.

 ವಿಶೇಷ ಎಸಿ ರೈಲು ಸಂಚಾರ 24ರಿಂದ

ಹುಬ್ಬಳ್ಳಿ: ಕಳೆದ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾದ ಅಹಮ್ಮದಾಬಾದ್-ಯಶವಂತಪುರ ವಿಶೇಷ ಹವಾ ನಿಯಂತ್ರಿತ ರೈಲು ಸಂಚಾರ ಇದೇ 24ರಂದು ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
24ರಿಂದ ಪ್ರತಿ ಶನಿವಾರ ರಾತ್ರಿ 11.40ಕ್ಕೆ ಅಹಮ್ಮದಾಬಾದ್‌ನಿಂದ ಹೊರಡಲಿರುವ ರೈಲು (19406) ಸೋಮವಾರ ಬೆಳಿಗ್ಗೆ 6.40ಕ್ಕೆ ಯಶವಂತಪುರ ತಲುಪಲಿದೆ.  

ಗೇರಾತಪುರ, ಆನಂದ್, ವಡೋದರಾ, ಅಂಕಲೇಶ್ವರ, ಸೂರತ್, ವಾಪಿ, ವಾಸವಿ, ಸೋಲಾಪುರ, ವಿಜಾಪುರ (ಭಾನುವಾರ ಮಧ್ಯಾಹ್ನ 2.50), ಬಾಗಲಕೋಟೆ (ಸಂಜೆ 5.38), ಬಾದಾಮಿ (ಸಂಜೆ 6.04), ಗದಗ (7.45), ಹುಬ್ಬಳ್ಳಿ (ರಾತ್ರಿ 9.35), ದಾವಣಗೆರೆ (ರಾತ್ರಿ 12.14), ಅರಸಿಕೆರೆ (ಮುಂಜಾನೆ 3.15) ಮೂಲಕ ಯಶವಂತಪುರಕ್ಕೆ ತಲುಪಲಿದೆ.

ಯಶವಂತಪುರದಿಂದ 26ರಿಂದ ಪ್ರತಿ ಸೋಮವಾರ  ಬೆಳಿಗ್ಗೆ 10.45ಕ್ಕೆ ಹೊರಡಲಿರುವ ರೈಲು (19405) ಮಂಗಳವಾರ ಸಂಜೆ 7.20ಕ್ಕೆ ಅಹಮ್ಮದಾಬಾದ್ ತಲುಪಲಿದೆ. ಅರಸಿಕೆರೆ (ಮಧ್ಯಾಹ್ನ 1.15), ದಾವಣಗೆರೆ (ಸಂಜೆ 4.09), ಹುಬ್ಬಳ್ಳಿ (ಸಂಜೆ 7.15), ಗದಗ (ರಾತ್ರಿ 9), ಬಾದಾಮಿ (ರಾತ್ರಿ 10.29), ಬಾಗಲಕೋಟೆ (10.58), ವಿಜಾಪುರ (ರಾತ್ರಿ 1.35)ದ ಮೂಲಕ ಸಾಗಲಿದೆ ಎಂದು ತಿಳಿಸಲಾಗಿದೆ.

ರಾಜ್ಯಕ್ಕೆ ಏ. 2ರಂದು ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲು

ಹುಬ್ಬಳ್ಳಿ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ಸಹಯೋಗದಲ್ಲಿ ರೈಲ್ವೆ ಸಚಿವಾಲಯ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹಮ್ಮಿಕೊಂಡಿರುವ `ರೆಡ್ ರಿಬ್ಬನ್~ ರೈಲಿನ ಪ್ರಯಾಣ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಏಪ್ರಿಲ್ 2ರಂದು ಆರಂಭಗೊಳ್ಳಲಿದೆ.

ಇದೇ 29ರಿಂದ ಏಪ್ರಿಲ್ 1ರ ವರೆಗೆ ಮಡಗಾಂವ್‌ನಲ್ಲಿ ತಂಗಲಿರುವ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ಬೆಳಗಾವಿ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ. ಏಪ್ರಿಲ್ 4ರಂದು ಬೆಳಗಾವಿಯಿಂದ ಹೊರಡಲಿರುವ ರೈಲು, 5ರಂದು ಹರಿಹರ ನಿಲ್ದಾಣ ತಲುಪಲಿದೆ. 7ರಂದು ಧಾರವಾಡ ತಲುಪಿ 9ರಂದು ರಾತ್ರಿ 10 ಗಂಟೆಯವರೆಗೂ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

10ರಂದು ರಾತ್ರಿ 1 ಗಂಟೆಗೆ ಗದಗಕ್ಕೆ ತಲುಪಿ 11ರಂದು ಬೀದರ್‌ಗೆ ತೆರಳಲಿದೆ. 15ರಂದು ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್‌ಗೆ ಆಗಮಿಸಿ 17ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಮೈಸೂರಿನ ಅಶೋಕಪುರಂ ನಿಲ್ದಾಣಕ್ಕೆ       18ರಂದು ಆಗಮಿಸಿ 19ರಂದು ಕೋಲಾರಕ್ಕೆ ತೆರಳಲಿದೆ. 22ರಂದು ಕೋಲಾರದಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.