ADVERTISEMENT

ಬಡಜನರ ಬಡಾವಣೆಯಲ್ಲಿ ಇಲ್ಲಗಳ ಪಟ್ಟಿ...

ಸಿದ್ದಯ್ಯ ಹಿರೇಮಠ
Published 2 ಏಪ್ರಿಲ್ 2012, 9:15 IST
Last Updated 2 ಏಪ್ರಿಲ್ 2012, 9:15 IST

ಬಳ್ಳಾರಿ: `ನಗರದ ವಿವಿಧೆಡೆ ಪೌರ ಕಾರ್ಮಿಕರು ಪಾಲಿಕೆಯ ಟ್ರ್ಯಾಕ್ಟರ್‌ಗಳಲ್ಲಿ ಬಂದು ಮನೆಗಳಲ್ಲಿನ ಕಸ ಸಂಗ್ರಹಿಸುತ್ತಾರೆ. ಆದರೆ, ಬೀದಿಬದಿಯಲ್ಲಿ ಬಿದ್ದ ಕಸವನ್ನು ಕಡೆಗಣಿಸುತ್ತ ಸ್ವಚ್ಛತೆಗೆ ಗಮನ ಹರಿಸುವುದಿಲ್ಲ~.
`ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದಿಲ್ಲ~.ಪಡಿತರ ವ್ಯವಸ್ಥೆ ಅಡಿ ಫಲಾನುಭವಿಗಳಿಗೆ ದೊರೆಯಬೇಕಿರುವ ಪ್ರಮಾಣದಲ್ಲಿ ಆಹಾರ ಧಾನ್ಯ ದೊರೆಯುವುದಿಲ್ಲ~.

`ಕುಡಿಯುವ ನೀರಿನ ಜತೆ ಒಳಚರಂಡಿ ನೀರೂ ಬೆರೆತು, ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ ಸಂಬಂಧಿಸಿದವರು ಪೈಪ್‌ಲೈನ್ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ~.ನಗರದಲ್ಲಿ ವಾಸಿಸುವ ಅಂಗವಿಕಲರಿಗೆ ಓಡಾಡಲು ತ್ರಿಚಕ್ರವಾಹನ ನೀಡಿಲ್ಲ. ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಸರ್ಕಾರ ನೀಡುವ ಮಾಸಾಶನ ನಿಗದಿತ ವೇಳೆಗೆ ಸಿಗುತ್ತಿಲ್ಲ~.

`ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿ ವೇಳೆ ಬಡಾವಣೆಗಳಲ್ಲಿ ಓಡಾಡುವುದು ಕಷ್ಟಕರವಾಗಿದ್ದು, ಬೀದಿ ನಾಯಿಗಳ ಹಾವಳಿಯೂ ಹೆಚ್ಚಿದೆ. ಆದರೂ ನಿಯಂತ್ರಣಕ್ಕೆ ಕ್ರಮ ಇಲ್ಲ~.

`ನಗರದ ಬಹುತೇಕ ಕಡೆ ಸಾರ್ವಜನಿಕ ಶೌಚಾಲಯಗಳೂ, ಮೂತ್ರಾಲಯಗಳೂ ಇಲ್ಲವೇ ಇಲ್ಲ. ನಿಸರ್ಗದ ಕರೆಗೆ ಓಗೊಡದೆ ಇರಲು ಸಾಧ್ಯವಾಗದ್ದರಿಂದ ರಸ್ತೆ ಬದಿಯಲ್ಲೋ, ಕಂಪೌಂಡ್, ಗೋಡೆಯ ಎದುರೋ ಅನೇಕರು ಮೂತ್ರ ವಿಸರ್ಜನೆಗೆ ನಿಲ್ಲುವುದು ಸಾಮಾನ್ಯ. ಆದರೂ ಜನತೆಗೆ ಅಗತ್ಯವಿರುವ ಶೌಚಾಲಯ, ಮೂತ್ರಾಲಯ ಕಟ್ಟಿಸುತ್ತಿಲ್ಲ~.

ಕಿಷ್ಕಿಂಧೆಯಂತಿರುವ ನಗರದ ಅನೇಕ ಬಡಾವಣೆಗಳಲ್ಲಿ ವಾಸಿಸುವ ಬಡಜನತೆ ಈ ರೀತಿ, `ಇಲ್ಲ~ಗಳ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದ್ದು, ಉತ್ತಮ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಶುದ್ಧ ಕುಡಿಯುವ ನೀರು, ಪಡಿತರ ಸೇರಿದಂತೆ ಮೂಲ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಿದ್ದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ.

ನಗರದ ಕೌಲ್‌ಬಝಾರ್ ವ್ಯಾಪ್ತಿಯಲ್ಲಿರುವ 9 ವಾರ್ಡ್‌ಗಳು ಹಾಗೂ ಬ್ರೂಸ್‌ಪೇಟೆ ವಿಭಾಗದ 6 ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳನ್ನೇ ಆಲಿಸಲೆಂದು `ಪಾದಯಾತ್ರೆ~ ನಡೆಸಿದ ಕಾಂಗ್ರೆಸ್‌ನ ನಗರ ಜಿಲ್ಲಾ ಘಟಕದ ಮುಖಂಡರೆದುರು ಜನತೆ ಈ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದ್ದು, ಜನರ ಸಮಸ್ಯೆಗಳು ಬಗೆಹರಿಸುವತ್ತ ಪಾಲಿಕೆ ಆಡಳಿತ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಮಾಡಿಕೊಳ್ಳುತ್ತಾರೆ.

ಶೌಚಾಲಯಗಳೇ ಇಲ್ಲ: `ಅಂಬೇಡ್ಕರ್ ನಗರ~ ಎಂದು ಕರೆಸಿಕೊಳ್ಳುವ ನಗರದ ಹೊರ ವಲಯದ ಬೆಳಗಲ್ ಬೈಪಾಸ್ ರಸ್ತೆಯಲ್ಲಿನ ಬಡಜನರೇ ವಾಸಿಸುವ ಆಶ್ರಯ ಕಾಲೋನಿಯಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಬಯಲಲ್ಲೇ ಶೌಚಕ್ಕೆ ತೆರಳುವ ಮಹಿಳೆಯರ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡುಬಂದಿರುವ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕಮಲಾ ಮರಿಸ್ವಾಮಿ ಪ್ರಾರ್ಥಿಸುತ್ತಾರೆ.

ಇತ್ತೀಚೆಗಷ್ಟೇ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೌಲ್‌ಬಝಾರ್ ವ್ಯಾಪ್ತಿಗೆ ಬರುವ ಈ ಪ್ರದೇಶದ ಜನರೆಲ್ಲ ಮತದಾನ ಮಾಡಿದ್ದಾರೆ. ಆದರೆ, ಆ ಭಾಗದ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳೇ ಇಲ್ಲ. ಅಲ್ಲಿನ ಅನೇಕ ಮಹಿಳೆಯರು ನಿತ್ಯವೂ ಬಹಿರ್ದೆಸೆಗೆ ತೆರಳಿದರೆ, ಅವರಿಗೆ ಕಾಣಿಸುವಂತೆಯೇ ಪುರುಷರೂ ಅಲ್ಲೇ ಸಮೀಪದಲ್ಲೇ ಶೌಚಕ್ಕೆ ಕುಳಿತಿರುತ್ತಾರೆ.

ಗಂಡಸರೊಂದಿಗೇ ಹೆಂಗಸರೂ ಶೌಚಕ್ಕೆ ಕುಳಿತುಕೊಳ್ಳುವಂತಹ ಕೆಟ್ಟ ಪರಿಸ್ಥಿತಿ ಇಲ್ಲಿದೆ. ಯಾಕೆ ಈ ಸಮಸ್ಯೆ ಆಳುವವರಿಗೆ ಗೋಚರಿಸುವುದಿಲ್ಲ? ಎಂದು ಆ ಮಹಿಳೆಯರು ಪ್ರಶ್ನಿಸುತ್ತಿದ್ದರೆ,  ಉತ್ತರಿಸುವುದಕ್ಕೆ ಆಡಳಿತ ನಡೆಸುವವರು ಕೈಗೆ ಸಿಗುವುದಿಲ್ಲ ಎಂಬುದೂ ಅವರ ಆರೋಪ.

ಇದು ಕೇವಲ ಆಶ್ರಯ ಕಾಲೋನಿಯ ಮಹಿಳೆಯರ ಸಮಸ್ಯೆ ಮಾತ್ರವಲ್ಲ. ಬಡಜನರು ವಾಸಿಸುವ ನಗರದ ಅನೇಕ ಬಡಾವಣೆಗಳಲ್ಲಿ ಈ ಸಮಸ್ಯೆ ಇದೆ. ಕೇವಲ ಹೆಂಗಸರು ಮಾತ್ರವಲ್ಲ, ಗಂಡಸರೂ ಶೌಚಾಲಯ ಇಲ್ಲದೆ ತೊಂದರೆ ಪಡುವ ಸ್ಥಿತಿ ಇದೆ ಎಂಬುದು ಅವರ ದೂರು.

ಸ್ಪಂದಿಸದಿರುವುದು ಸೋಜಿಗ: ನಗರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಒಳಚರಂಡಿ ನೀರು ಬೆರೆತ ಕಲುಷಿತ ಕುಡಿಯುವ ನೀರು ಪೂರೈಕೆಯಾಗುವುದು ಅನೇಕ ಕಡೆ ಕಂಡುಬರುತ್ತದೆ. ಒಳಚರಂಡಿ ವ್ಯವಸ್ಥೆಯಂತೂ ಬಹುತೇಕ ಕಡೆ ಇಲ್ಲದೆ, ಚರಂಡಿಗಳನ್ನು ಸ್ವಚ್ಛಗೊಳಿಸದ್ದರಿಂದ ಮಳೆಯ ನೀರು ಸರಾಗವಾಗಿ ಹರಿದುಹೋಗದೆ ಮನೆಗಳಿಗೇ ನುಗ್ಗಿ ಜನರನ್ನು ತೊಂದರೆಗೀಡು ಮಾಡುವಂತಹ ಸ್ಥಿತಿ ಬಹುತೇಕ ಕಡೆ ಇದೆ ಎಂದೂ ಅವರು ಹೇಳುತ್ತಾರೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಅನುದಾನ ಸಾಕಷ್ಟು ಬಿಡುಗಡೆ ಆಗುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಜನರಿಗೆ ಅಗತ್ಯವಾಗಿರುವ ಮೂಲ ಸೌಲಭ್ಯ ಕಲ್ಪಿಸುವ ಗೋಜಿಗೆ ಹೋಗದಿರುವುದು ಸೋಜಿಗ ಎಂಬುದು ಕಾಂಗ್ರೆಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್. ಆಂಜಿನೇಯುಲು ಅವರ ದೂರು.

`ವಿರೋಧ ಪಕ್ಷದವರು ಸುಮ್ಮನೆ ಆರೋಪಿಸುತ್ತಾರೆ~ ಎಂಬ ಸ್ಪಷ್ಟನೆಗಳು ಆಡಳಿತಾರೂಢ ಜನಪ್ರತಿನಿಧಿಗಳಿಂದ ಕೇಳಿಬರುತ್ತವೆ. ಆದರೆ, ವಸ್ತುಸ್ಥಿತಿಯನ್ನು ಅರಿತು ಮಾತಾಡಿದರೆ ಅವರಿಂದ ಅದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ ಎಂಬುದೂ ಆಶ್ಚರ್ಯ ಮೂಡಿಸುತ್ತದೆ ಎಂದು ಅವರು ಹೇಳುತ್ತಾರೆ.

ಜನರಿಂದ ಆಯ್ಕೆಯಾಗಿ ಬಂದಿದ್ದರೂ ಜನರ ಸಮಸ್ಯೆಗಳನ್ನು ನೀಗಿಸಲು ಸ್ಥಳೀಯ ಸಂಸ್ಥೆಯ ಸದಸ್ಯರು ಮುಂದಾಗದಿರುವುದು ಏಕೆ? ಎಂಬುದು ಯಕ್ಷಪ್ರಶ್ನೆಯಾಗಿದೆ. ಜನರ ಒಳಿತನ್ನೇ ಬಯಸಿ, ಅವರ ಸಮಸ್ಯೆಗೆ ಪರಿಹಾರವನ್ನು ಚಿಂತಿಸಿ, ಅಗತ್ಯ ಸೌಲಭ್ಯ ನೀಡಲು ಶ್ರಮಿಸುವ ಅಗತ್ಯವಂತೂ ಇದೆ ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿದ ಬಹುತೇಕ ಸದಸ್ಯರು ಕೋರುತ್ತಾರೆ.ಇಲ್ಲಗಳ ಪಟ್ಟಿ~ ಎಲ್ಲ ಕಡೆ ಇದ್ದದ್ದೇ. ಆದರೂ ಕಣ್ಣಿಗೇ ಗೋಚರಿಸುವ ಸಮಸ್ಯೆಗಳನ್ನು ನೀಗಿಸಲು ಯತ್ನಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂಬುದು ಅವರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.