ADVERTISEMENT

ಬಸ್‌ ಪಾಸ್‌ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:29 IST
Last Updated 3 ಜೂನ್ 2018, 11:29 IST

ಬಳ್ಳಾರಿ: ‘ಕೂಡಲೇ ಬಸ್‌ ಪಾಸ್‌ ವಿತರಿಸಬೇಕು ಅಥವಾ ಹಳೆಯ ಪಾಸ್‌ಗಳನ್ನು ಬಳಸಿ ಸಂಚರಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಎಐಡಿಎಸ್‍ಓ ಹಾಗೂ ಎಐಎಂಎಸ್‍ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮೆರವಣಿಗೆ ನಡೆಸಿದರು.

ನಗರದ ಕನಕದುರ್ಗಮ್ಮ ಗುಡಿ ಮುಂಭಾಗದಿಂದ ಮೆರವಣಿಗೆ ನಡೆಸಿದ ಅವರು ಪಾರ್ವತಿ ನಗರ ಮುಖ್ಯ ರಸ್ತೆ, ಎಸ್ಪಿ ವೃತ್ತದ ಮೂಲಕ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಘಟಕದ ಮುಂಭಾಗ ಧರಣಿ ನಡೆಸಿದರು.

‘ಶೈಕ್ಷಣಿಕ ವರ್ಷ ಮೇ ತಿಂಗಳಿನಿಂದಲೇ ಪ್ರಾರಂಭವಾಗಿದೆ. ಆದರೆ ಜೂನ್‌ ತಿಂಗಳು ಪ್ರಾರಂಭವಾದರೂ ಹೊಸ ಬಸ್‌ ಪಾಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿಲ್ಲ. ಹೀಗಾಗಿ, ತರಗತಿಗಳಿಗೆ ಹಾಜರಾಗುವುದು ಕಷ್ಟಕರವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕು’ ಎಂದು ಎಐಡಿಎಸ್‍ಓ ರಾಜ್ಯ ಘಟಕದ ಅಧ್ಯಕ್ಷ ಡಾ.ಪ್ರಮೋದ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಳಿಕ ಘಟಕದ ವ್ಯವಸ್ಥಾಪಕ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಬೇಡಿಕೆಗಳ ಕುರಿತು ಉನ್ನತ ಅಧಿಕಾರಿಗಳ ಗಮನ ಸೆಳೆಯುವುದಾಗಿ ಅಧಿಕಾರಿಯು ಭರವಸೆ ನೀಡಿದರು. ಮುಖಂಡರಾದ ಎ.ಶಾಂತಾ, ಗೋವಿಂದ್,ಈಶ್ವರಿ, ಸುರೇಶ್, ಜಗದೀಶ್, ಗುರಳ್ಳಿ ರಾಜಾ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.