ADVERTISEMENT

ಬಿ.ಟಿ.ಹತ್ತಿ ಹಾನಿ: ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:26 IST
Last Updated 7 ಜನವರಿ 2014, 8:26 IST

ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಮಹಿಕೋ ಕಂಪೆನಿಯ ‘ಕನಕ’ ಬಿ.ಟಿ. ಹತ್ತಿ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅರ್ಜಿ ಸ್ವೀಕರಿಸುತ್ತಿರುವ ವಿಧಾನ ಸರಿಯಿಲ್ಲ. ಕೂಡಲೇ ಎಲ್ಲ ರೈತರಿಗೂ ಸೂಕ್ತ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೋರಿದರು.

ಈ ಕುರಿತ ವಿಷಯ ಮಂಡಿಸಿದ ಹಿರೇಹಡಗಲಿ ಕ್ಷೇತ್ರದ ಸದಸ್ಯ ವಸಂತ್‌, ಬಿ.ಟಿ. ಹತ್ತಿ ಬೀಜ ಖರೀದಿಸಿದ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ರಸೀದಿ, ಖಾಲಿ ಡಬ್ಬಿ ನೀಡುವಂತೆ ಸೂಚಿಸಲಾಗಿದೆ. ಆದರೆ, ರೈತರು ಕಾಳಸಂತೆಯಲ್ಲಿ ಬಿತ್ತನೆ ಬೀಜ ಖರೀದಿಸಿರುವುದರಿಂದ ರಸೀದಿ ಪಡೆದಿಲ್ಲ. ಅಲ್ಲದೆ, ಅವರು ಖಾಲಿ ಡಬ್ಬಿಗಳನ್ನೂ ಕಾದಿರಿಸಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಈ ಗೊಂದಲ ನಿವಾರಿಸಬೇಕು ಎಂದರು.

ಸರ್ಕಾರದ ನಿಯಮಾನುಸಾರ ಪರಿಹಾರ ಪಡೆಯ ಬಯಸುವ ರೈತರು ಈ ಎರಡರಲ್ಲಿ ಒಂದನ್ನು ಪೂರೈಸಲೇಬೇಕು. ಇಲ್ಲದಿದ್ದರೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಪ್ಪ ತಿಳಿಸಿದರು.

ರೈತರು ಬಿ.ಟಿ. ಹತ್ತಿ ಬಿತ್ತನೆ ಬೀಜ ಖರೀದಿಸಿರುವ ಅಂಗಡಿಗಳಿಗೆ ತೆರಳಿ, ತಮ್ಮ ಹೆಸರಿನಲ್ಲಿ ಈ ಹಿಂದೆ ಖರೀದಿಸಿದ ರಸೀದಿಯ ಪ್ರತಿ ಪಡೆಯಬಹುದು ಎಂದು ಅವರು ಹೇಳಿದರು. ಆದರೆ, ಈ ಸಲಹೆಗೆ ತೃಪ್ತರಾಗದ ಸದಸ್ಯರು, ರೈತರಿಗೆ ಸೂಕ್ತವಾದ ಸಲಹೆ ನೀಡುವ ಮೂಲಕ, ಅವರಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಸರ್ವ ಶಿಕ್ಷಣ ಅಭಿಯಾನ ಮತ್ತಿತರ ಯೋಜನೆಗಳಲ್ಲಿ ಜಿಲ್ಲೆಯ ವಿವಿಧೆಡೆ ಶಾಲೆಯ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ತಜ್ಞರ ಅಭಿಪ್ರಾಯ ಸಂಗ್ರಹಿಸದೆ ಮೇಲ್ಮಹಡಿ ಕಟ್ಟಲಾಗುತ್ತಿದೆ. ಸಿರುಗುಪ್ಪ ತಾಲ್ಲೂಕಿನ ಸಿಂಧಿಗೇರಿ ಗ್ರಾಮದಲ್ಲಿರುವ 50 ವರ್ಷದಷ್ಟು ಹಳೆಯ ಶಾಲಾ ಕಟ್ಟಡದ ಮೇಲೇ ಇನ್ನೊಂದು ಮಹಡಿ ಕಟ್ಟಲಾಗುತ್ತಿದೆ. ಕೆಳಗಿನ ಕಟ್ಟಡ ಸಮರ್ಪಕವಾಗಿ ಇರದಿದ್ದರೂ ಮೇಲೆ ಕಟ್ಟಡ ಕಟ್ಟುವುದರಿಂದ ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುತ್ತದೆ. ಈ ಕುರಿತು ಅಧಿಕಾರಿಗಳು ಗಮನಿಸಬೇಕು ಎಂದು ಸಿರಿಗೇರಿ ಸದಸ್ಯ ವಸಂತಗೌಡ ಮನವಿ ಮಾಡಿದರು.

ನಿರ್ಮಿತಿ ಕೇಂದ್ರದವರು ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದರೂ ಪೂರ್ಣಗೊಳಿಸಿಲ್ಲ. ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದ ಕಾಮಗಾರಿ ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚಿಸಿ ಎಂದು ಆಡಳಿತಾರೂಢ ಪಕ್ಷದ ಸದಸ್ಯರು ಮನವಿ ಮಾಡಿದರು.

‘ಈಗಾಗಲೇ ಕಾಮಗಾರಿಗಳ ಪರಿಶೀಲನೆಗಾಗಿ ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿ ಇರುವುದರಿಂದ ಮತ್ತೊಂದು ಸಮಿತಿ ಅನಗತ್ಯ’ ಎಂದು ಸಿಇಓ ಮಂಜುನಾಥ  ನಾಯ್ಕ ತಿಳಿಸಿದ್ದರಿಂದ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ವಸಂತ್, ನಿರ್ಮಿತಿ ಕೇಂದ್ರದ ವಿರುದ್ಧ ಮೃಧು ಧೋರಣೆಯನ್ನೇ ಏಕೆ ಅನುಸರಿಸಲಾಗುತ್ತಿದೆ ಎಂದು ಹರಿಹಾಯ್ದರು.

ಶಾಲೆಯಿಂದ ದೂರ ಉಳಿದಿರುವ ಮಕ್ಕಳಿಗಾಗಿ ಜಿಲ್ಲೆಯ 65 ಕಡೆ ತೆರೆಯಲಾಗಿರುವ ಶೈಕ್ಷಣಿಕ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.  ಶಿಕ್ಷಣ ಇಲಾಖೆ ಈ ಕುರಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಗೋನಾಳ್‌ ರಾಜಶೇಖರಗೌಡ ಮತ್ತಿತರರು ಆರೋಪಿಸಿದರು.

ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಕೃಷಿ ಕೂಲಿ ಮಾಡುವವರ ಮಕ್ಕಳನ್ನು ಸೇರಿಸಲಾಗಿದೆ. ಆದರೆ, ಶಾಲೆ ಸುಗಮವಾಗಿ ನಡೆಯುತ್ತಿಲ್ಲ. ಸಂಬಂಧಿಸಿದ ಮುಖ್ಯಾಧ್ಯಾಪಕರು ಭಾನುವಾರ ಶಾಲೆಗೆ ಆಗಮಿಸಬೇಕೆಂಬ ನಿಯಮವಿದ್ದರೂ ಹಾಜರಾಗುವುದಿಲ್ಲ ಎಂದು ಕೆಲವು ಸದಸ್ಯರು ದೂರಿದಾಗ, ಶಿಕ್ಷಕರು ನಿಯಮಾನುಸಾರ ವಾರದ ಆರು ದಿನಗಳ ಕಾಲ ಸರಿಯಾಗಿ ಪಾಠ ಮಾಡುವುದಿಲ್ಲ. ಇನ್ನು ಭಾನುವಾರ ಬರುವುದು ಕನಸಿನ ಮಾತು ಎಂದು ಸದಸ್ಯೆ ಅರುಣಾ ತಿಪ್ಪಾರೆಡ್ಡಿ ವ್ಯಂಗ್ಯವಾಡಿದರು.

ದೊರೆಯದ ಆಹ್ವಾನ: ಕುಡಿಯುವ ನೀರು ಪೂರೈಕೆ ಕಾಮಗಾರಿಯ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಆಹ್ವಾನ ನೀಡಿಲ್ಲ ಎಂದು ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಸದಸ್ಯೆ ಹೇಮ್ಲವ್ವ ನಾಯ್ಕ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ವಿವಿಧ ಸಭೆಗಳು ನಿಗದಿಯಾದ ದಿನದಂದೇ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಪದ್ಧತಿ ಕೈಬಿಡುವಂತೆ ಸೂಚಿಸಿ ಎಂದು ಅವರು ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಅವರ ಈ ಆರೋಪಕ್ಕೆ ಬಹುತೇಕ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ಅಧಿಕಾರಿಗಳು ಯಾವುದೇ ಕಾರ್ಯಕ್ರಮಗಳಿಗೂ ಆಹ್ವಾನ ನೀಡುವುದಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು. ಹದಗೆಟ್ಟು ಹೋಗಿರುವ ವಿವಿಧ ಗ್ರಾಮೀಣ ರಸ್ತೆಗಳ ದುರಸ್ತಿಗೆ ಮುಂದಾಗಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಸೇವೆ ಸಲ್ಲಿಸುವ ಡಾಟಾ ಎಂಟ್ರಿ ಆಪರೇಟರ್‌ಗಳ ವೇತನ ಬಿಡುಗಡೆ ಮಾಡಬೇಕು ಎಂದು ಸದಸ್ಯರು ಮನವಿ ಸಲ್ಲಿಸಿದರು.

ಹಂಪಿಯಲ್ಲಿ ಇದೇ 10ರಿಂದ 3 ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಜಿಲ್ಲಾ ಪಂಚಾಯ್ತಿಯಿಂದ ₨ 2 ಲಕ್ಷ ದೇಣಿಗೆ ನೀಡುವ ನಿರ್ಧಾರಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾವಿತ್ರಮ್ಮ, ಸುನಂದಾಬಾಯಿ, ಶಶಿಧರ ಮತ್ತಿತರರು ಇದೇ ಸಂದರ್ಭ ಪರಿಶಿಷ್ಟಜಾತಿ, ಜನಾಂಗದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಸೌಲಭ್ಯಗಳ ಕುರಿತ ಕೈಪಿಡಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.