ADVERTISEMENT

ಬ್ಯಾಡ ಅಂದ್ರೂ ಮತ್ತಿಬ್ಬರನ್ನ ಹತ್ತಿಸಿಕೊಂಡ...

ಸಿದ್ದಯ್ಯ ಹಿರೇಮಠ
Published 8 ಫೆಬ್ರುವರಿ 2012, 8:20 IST
Last Updated 8 ಫೆಬ್ರುವರಿ 2012, 8:20 IST

ಬಳ್ಳಾರಿ: ಮೈಲಾರಲಿಂಗೇಶ್ವರನ ಜಾತ್ರೀಗೆ ಅಂತ ಊರಿಂದ ಸೋಮವಾರ ಸಂಜಿಮುಂದ ಮೂರು ಟ್ರ್ಯಾಕ್ಟರ್ ತಗೊಂಡ್ ಬಂದೇವಿ. ಇವತ್ ಮಧ್ಯಾಹ್ನ ನದ್ಯಾಗ ಜಳಕಾ ಮಾಡಿ ಬಿಸಿಲಿಗೆ ನಿಂತಿದ್ವಿ. ಸಣ್ಣ ಹಡಗ (ತೆಪ್ಪ) ಸ್ವಲ್ಪ್ ಮಂದಿ ತುಂಬ್‌ಕೊಂಡ್ ಬಂತು. ನಾವೂ ಅದರಾಗ ಹೋದ್ರಾತು ಅಂತ ಹತ್ತಿ ತಲಾಗ ಐದ್ ರೂಪಾಯ್ ಕೊಟ್ಟು ಅಚ್ಚಿಕಡೇ ದಂಡೀಗೆ ಹೋದ್ವಿ. ಹೊಳ್ಳಿ ಬರೂಮುಂದ ಇದ್ದಕ್ಕಿದ್ದಂಗ ಹಡಗಾ ಹೊಳ್ಳಿ ಬಿತ್ತು. ನನಗ ಈಜ್ ಬರ್ತಿತ್ತು ಈಶಾಡಕೋಂತ ದಂಡೀಗಿ ಬಂದ್ಯಾ. ನಮ್ ಗ್ಯಳಿಯಾರು ನಾಕ್ ಮಂದಿ ಮುಳುಗ್ಯಾರ.~

ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಬಳಿಯ ತುಂಗಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ತೆಪ್ಪ ದುರಂತದಲ್ಲಿ ಬದುಕಿ ಬಂದಿರುವ ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದ ನೀಲಪ್ಪ ಬ್ಯಾಹಟ್ಟಿ ದುಃಖದಲ್ಲೇ `ಪ್ರಜಾವಾಣಿ~ಗೆ ಘಟನೆಯ ಬಗ್ಗೆ ಈ ರೀತಿ ವಿವರ ನೀಡಿದ.

`ನಾವು ಒಟ್ಟ ಎಂಟ್ ಮಂದೀ. ಒಂದ ಊರಾನ ಒಂದ ಓಣೀಯವ್ರ ಹಡಗಾ ಹತ್ತೀದ್ವಿ. ಅಚ್ಚಿಕಡೆ ದಂಡ್ಯಾಗಿಂದ ಹೊಳ್ಳಿ ಬರೂ ಮುಂದ ಮತ್ತ ಇಬ್ಬರನ್ನ ಹಡಗಾ ನಡಸಂವಾ ಹತ್ತಿಸಿಕೊಂಡಾ. ಅವರಷ್ಟ ಅಲ್ಲ, ಇನ್ನೂ ಮೂರ್ ಮಂದೀನ ಹತ್ತಿಸಿಕೊಳ್ಳಾಕತ್ತಿದ್ದಾ. ನಾವ್ ಬ್ಯಾಡಾ ಅಂತ ಹೇಳಿದಮ್ಯಾಲೆ ಮೂರ್ ಮಂದೀನ ಇಳಿಸೀದಾ. ಇಬ್ಬರು ಹೆಚ್ಚಾಗಿದ್ದಕ್ಕ ಹಡಗಾ ಆಯ ತಪ್ಪಿ ಉಳ್ಳಿ ಬಿತ್ತು~.

ದೊಡ್ಡದೊಂದು ತೆಗ್ಗು ಇತ್ತು. ಅಲ್ಲಿಗೆ ಬಂದ್ ಕೂಡ್ಲೇ ಹಡಗಾ ಅತ್ತಾಗ,  ಇತ್ತಾಗ ಆಗಾಕತ್ತಿತ್ತು. ಗಾಬರ‌್ಯಾಗಿ ಎಲ್ಲಾರೂ ಒಂದ ಕಡೆ ಬಂದ್‌ಬಿಟ್ರು. ಹಡಗಾ ಡಬ್ಬಾತು~ ಎಂದು ಆ ಯುವಕ ಅಳುವನ್ನು ನುಂಗುತ್ತಲೇ ಹೇಳಿದ.

ಭೀಮಪ್ಪ ಮಾವನ ಒಬ್ಬನ ಮಗ ಸಿದ್ದಪ್ಪ (23) ನೀರಾಗ ಮುಳುಗಿ ಸತ್ತಾನ. ಮುಂದಿನ ತಿಂಗಳ ಅಂವನ ಲಗ್ನ ಫಿಕ್ಸ್ ಆಗಿತ್ತು. ಅವನೇ ತಮ್ಮ ಬೀಗರ ಟ್ರ್ಯಾಕ್ಟರ್ ಹೊಡಕೋಂಡ್ ಬಂದಿದ್ದಾ. ಮನ್ಯಾಗ ಅವರಪ್ಪಾರು ಬ್ಯಾಡ ಅಂದ್ರೂ ಎಲ್ಲಾರ್ನೂ ಕರಕೋಂಡ್ ಬಂದಿದ್ದಾ. ಈಗ ನೋಡೀದ್ರ ಅವನ ನೀರಾಗ ಮುಳುಗಿಬಿಟ್ಟಾನ `ಎಂದು ಈಜಿ ದಡ ಸೇರಿದ ಯುವಕರಾದ ಮುದಕಪ್ಪ ಬ್ಯಾಹಟ್ಟಿ, ಗಂಗಪ್ಪ ಮಲ್ಲೂರ, ಶಿವಪ್ಪ ಬ್ಯಾಹಟ್ಟಿ ಅಳುತ್ತಲೇ ಹೇಳಿದರು.

ಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ಮೈಲಾರದ ನದಿಯಲ್ಲಿ ಆಚೆಯ ದಡ ಸೇರಿಸಲು ಯಾಂತ್ರೀಕೃತ ದೋಣಿಗಳೂ ಇಲ್ಲದ್ದರಿಂದ ಅನಿವಾರ್ಯವಾಗ ಜನ ತೆಪ್ಪವನ್ನೇ ಅವಲಂಬಿಸಿದ್ದಾರೆ. ತೆಪ್ಪದ ಮೂಲಕ ಜನರನ್ನು ಸಾಗಿಸುವುದನ್ನು ನಿಷೇಧಿಸಲಾಗಿದ್ದರೂ ಜನರನ್ನು ಕರೆತರುವ ಪ್ರಕ್ರಿಯೆ ನಡೆದೇ ಇದೆ.

ಆಶ್ಚರ್ಯವೆಂದರೆ, ಸಾಮರ್ಥ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿ ಕೊಂಡು ತೆಪ್ಪ ಚಾಲನೆ ಮಾಡುತ್ತಿದ್ದ ನಾವಿಕ ತೆಪ್ಪ ಮುಳುಗುತ್ತಿದ್ದಂತೆಯೇ ಈಜು ಬಾರದವರ ನೆರವಿಗೂ ಧಾವಿಸದೆ ಈಜಿ ದಡ ಸೇರಿ ಕಣ್ತಪ್ಪಿಸಿಕೊಂಡಿದ್ದಾನೆ.

ದಂಡೆಯಿಂದ ಕೇವಲ 20ರಿಂದ 25 ಅಡಿ ದೂರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇತರ ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿದ್ದ ಅಮ್ಮಿನಭಾವಿ ಗ್ರಾಮದ ಮಹಿಳೆಯರ ಆರ್ತನಾದ ನದಿ ದಂಡೆಯಲ್ಲಿ ಮುಗಿಲುಮುಟ್ಟಿತ್ತು.

ಅಕ್ರಮವಾಗಿ ಮರುಳು ಗಣಿಗಾರಿಕೆ ನಡೆಸಿ ಮರಳು ತೆಗೆದಿದ್ದರಿಂದ ಈ ತಗ್ಗುಗಳು ಬಿದ್ದಿದ್ದು, ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳದಿರುವುದೇ ಐವರ ಸಾವಿಗೆ ಕಾರಣವಾಗಿದೆ ಎಂದು ಘಟನಾ ಸ್ಥಳದಲ್ಲಿ ಜಮೆಯಾಗಿದ್ದ ಸುತ್ತಮುತ್ತಲ ಗ್ರಾಮಗಳ ಜನ ದೂರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.