ADVERTISEMENT

ಬ್ರಾಹ್ಮಣ ಸಮಾಜದಿಂದ ಪ್ರತಿಭೆಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 10:55 IST
Last Updated 3 ಜನವರಿ 2011, 10:55 IST

ಹೊಸಪೇಟೆ: ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ಉದ್ಯಮಿ ಪಂತರ್ ಜಯಂತ್ ಸಲಹೆ ನೀಡಿದರು. ನಗರದ ಜೇಸೀಸ್ ಶಾಲಾ ಆವರಣದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸದ ನಂತರ ಮಾತನಾಡಿದ ಅವರು ಸಮಾಜಕ್ಕೆ ಬ್ರಾಹ್ಮಣ ಸಂಘ ಮಾದರಿ ಸಂಘವಾಗಿ ಕೊಡುಗೆ ನೀಡಬೇಕಾಗಿದೆ ಎಂದರು.

ಪ್ರಸ್ತುತ ಬ್ರಾಹ್ಮಣ ಸಮಾಜದ ಯುವಕರು ಸಮಾಜದ ಅಭಿವೃದ್ಧಿಗೆ ಹಾಗೂ ಸಂಘಟನೆಗೆ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಂಘದ ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಸಮಾಜ ಮತ್ತು ದೇಶ ದೇಹದ ಎರಡು ಕಣ್ಣುಗಳಿದ್ದಂತೆ ಎಂದರು. ಬ್ರಾಹ್ಮಣ ಸಮಾಜ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ಹೇಳಿದ್ದು ಸಂಘದ ವತಿಯಿಂದ ಸ್ಥಳೀಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ 25ಸಾವಿರ ರೂ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.

ತಾಲ್ಲೂಕು ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಸತ್ಯನಾರಾಯಣ ಶಾಸ್ತ್ರೀ ಮಾತನಾಡಿ, ಬ್ರಾಹ್ಮಣ ಸಮಾಜವು ಮೊದಲಿಂದಲೂ ಸ್ವಾಲಂಬನೆಯಿಂದ ಜೀವನ ಸಾಗಿಸುತ್ತಿದೆ. ಪ್ರಸ್ತುತ ಸಮಾಜವೂ ಬದಲಾವಣೆ ಹೊಂದುತ್ತಿರುವುದರಿಂದ ನಾವು ಸಹ ಬದಲಾಗಬೇಕಾಗಿದೆ. ಬ್ರಾಹ್ಮಣ ಸಮಾಜದ ಯುವಕರು ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವ-ಉದ್ಯೋಗಕ್ಕೆ ಮುಂದಾಗಬೇಕು ಎಂದು ಹೇಳಿದರು.
 
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಮಾಜದವರು ಆರೋಗ್ಯಕರ ಪೈಪೋಟಿಯಲ್ಲಿ ತೊಡಗಬೇಕು. ಬ್ರಾಹ್ಮಣ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕು. ಇದರಿಂದ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪಂಡಿತರಾದ ಮುರಳಿಧರ್ ಭಟ್ ಜೋಶಿ, ಕಾಶೀನಾಥ ಪುರಾಣಿಕ್ ಹಾಗೂ ಯುವ ಉದ್ಯಮಿ ಪಂತರ್ ಜಯಂತರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ವಿಷಯವಾರು ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪುರಸ್ಕಾರ ಮತ್ತು ನಗದು ಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ. ಸೀನಂಭಟ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಶ್ರೀಧರ್‌ರಾವ್,  ಬಿಜೆಪಿ ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ, ಚಂದ್ರಕಾಂತ ಕಾಮತ್, ಸಮಾಜದ ಮುಖಂಡರಾದ ಮುದ್ಲಾಪುರ ನಾಗರಾಜ್, ರಮೇಶ್ ಪುರೋಹಿತ್, ಭರತ್‌ಕುಮಾರ್, ಡಾ.ಹನುಮಂತರಾವ್, ಕೆ.ದಿವಾಕರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.