ADVERTISEMENT

ಭತ್ತದ ಫಸಲಿಗೆ ಚರಗ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 9:56 IST
Last Updated 2 ಜನವರಿ 2014, 9:56 IST
ಸಿರುಗುಪ್ಪ ತಾಲ್ಲೂಕಿನ ಬಾಗವಾಡಿ ಗ್ರಾಮದಲ್ಲಿ ಎಳ್ಳಮಾವಾಸ್ಯೆಯ ಅಂಗವಾಗಿ ಬುಧವಾರ ರೈತ ಜೋಗಿನ ಅಯ್ಯನಗೌಡ ಭತ್ತದ ಫಸಲಿಗೆ ಚರಗ ಚೆಲ್ಲಿದರು
ಸಿರುಗುಪ್ಪ ತಾಲ್ಲೂಕಿನ ಬಾಗವಾಡಿ ಗ್ರಾಮದಲ್ಲಿ ಎಳ್ಳಮಾವಾಸ್ಯೆಯ ಅಂಗವಾಗಿ ಬುಧವಾರ ರೈತ ಜೋಗಿನ ಅಯ್ಯನಗೌಡ ಭತ್ತದ ಫಸಲಿಗೆ ಚರಗ ಚೆಲ್ಲಿದರು   

ಸಿರುಗುಪ್ಪ : ಎಳ್ಳಮಾವಾಸ್ಯೆ ನಿಮಿತ್ತ ಬುಧವಾರ ತಾಲ್ಲೂಕಿನಾದ್ಯಾಂತ ರೈತರು ಭೂತಾಯಿಗೆ ಪೂಜಿಸಿ ಸುಗ್ಗಿಯ ಬೆಳೆಗೆ ಚರಗ ಚೆಲ್ಲಿ ವಿಶಿಷ್ಟ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಚರಗದ ಅಮಾವಾಸ್ಯೆ ಪ್ರಯುಕ್ತ ರೈತಾಪಿ ಕುಟುಂಬದವರು ಸೂರ್ಯೋ ದಯಕ್ಕೆ ಮುನ್ನವೇ ಮಡಿಯಿಂದ ತಯಾರು ಮಾಡಿದ ಎಳ್ಳು ಹೋಳಿಗೆ, ಸಜ್ಜೆಯ ಅಸಿಟ್ಟು, ಹುಗ್ಗಿ, ಕಡ್ಲೆ, ಹೆಸರು ಗುಗ್ಗರಿಗಳೊಂದಿಗೆ, ಕಳಸನ್ನ ಬಗೆ ಬಗೆಯ ಅಡಿಗೆಯನ್ನು ಮಾಡಿ ಬುತ್ತಿಕಟ್ಟಿಕೊಂಡು ಕುಟುಂಬ ಸಮೇತರಾಗಿ ತಮ್ಮ ಹೊಲಗಳಿಗೆ ತೆರಳಿದರು.

ಹೊಲದ ಮಧ್ಯದಲ್ಲಿರುವ ಶಮೀವೃಕ್ಷ ಅಥವಾ ಮಧ್ಯ ಭಾಗದಲ್ಲಿ ಸುಮಂಗಳಿಯರು ಐದು ಕಲ್ಲುಗಳನ್ನು ಪಾಂಡವರೆಂದು  ಸ್ಥಾಪಿಸಿ  ಪೂಜಿಸಿ, ಕಾಯಿ ಒಡೆದು ತಾವು ತಂದ ವಿವಿಧ ಅಡಿಗೆಗಳನ್ನು ನೈವೇದ್ಯ ಸಲ್ಲಿಸಿದರು. ನಂತರ ಅಡಿಗೆಯನ್ನೆಲ್ಲ ಮಿಶ್ರಣ ಮಾಡಿ ಅದನ್ನು ಕುಟುಂಬದ ಎಲ್ಲರು ತಮ್ಮ ಹೊಲದ ಸುತ್ತ ಇರುವ ನಾಲ್ಕು ಬದುವಿನ ದಿಕ್ಕುಗಳಿಗೆ ಒಬ್ಬರು, ಹುಲಿಗೋ ಹುಲಿಗೋ ಎನ್ನುತ್ತಾ ನೀರು ಸಿಂಪಡಿಸಿದರೆ ಅದರ ಹಿಂದೆ ಮತ್ತೊಬ್ಬರು ಮಿಶ್ರಣ ಮಾಡಿದ ಅಡಿಗೆಯನ್ನು ಎರಚುತ್ತಾ ‘ಸಲಾ ಪೊಲಿಗೋ’ ಎಂದು ಸಾರುತ್ತಾ ಹೊಲದ ಸುತ್ತಲೂ ಚರಗ ಚೆಲ್ಲಿದರು.

ಈ ಹಬ್ಬದ ವೈಶಿಷ್ಠ್ಯವೆಂದರೆ ರೈತ ತಾನು ಬೆಳೆದಿದ್ದನ್ನು ತಾನೇ ಉಪಯೋಗಿಸದೇ ಭೂತಾಯಿಗೂ ಸಮರ್ಪಿಸಿ, ಪ್ರಾಣಿ ಪಕ್ಷಿಗಳು ಅದನ್ನು ತಿಂದು ಸಂತೋಷ ಪಡಲಿ ಎಂಬ ಧ್ಯೇಯ ಅಡಗಿದೆ. ಹೊಲಗಳಿಗೆ ಚರಗ ಚೆಲ್ಲಿದ ನಂತರ ಕುಟುಂಬದ ಎಲ್ಲಾ ಸದಸ್ಯರು ಹೊಲದಲ್ಲಿಯೇ  ಊಟ ಸವಿದು ಸಂತೋಷ ಹಂಚಿಕೊಂಡರು. 

ದೇವಮಾಂಬ, ಆಂಜನೇಯಸ್ವಾಮಿ ಗಂಗೆಸ್ಥಳ ಮಹೋತ್ಸವ
ಕಂಪ್ಲಿ:
ಇಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮ ದೇವತೆ  ದೇವಮಾಂಬ ದೇವಿ ಮತ್ತು  ಆಂಜನೇಯಸ್ವಾಮಿ ಗಂಗೆ ಸ್ಥಳ ಮಹೋತ್ಸವ ಎಳ್ಳಮಾವಾಸ್ಯೆಯ ದಿನವಾದ ಬುಧವಾರ ಬೆಳಿಗ್ಗೆ ಭಕಿ್ತಭಾವದಿಂದ ಜರುಗಿದವು. ಭಕ್ತರೆಲ್ಲರೂ ಅರ್ಚಕರೊಂದಿಗೆ ಡೊಳ್ಳು, ಭಜನೆ ಇತ್ಯಾದಿ ಮಂಗಳವಾದ್ಯಗಳೊಂದಿಗೆ ಗೌರಮ್ಮ ಕೆರೆಗೆ ತೆರಳಿ, ಕೆರೆ ದಂಡೆಯಲ್ಲಿ  ದೇವಮಾಂಬ ದೇವಿ ಮತ್ತು ಆಂಜನೇಯಸ್ವಾಮಿ ಗಂಗೆ ಸ್ಥಳ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿ ಅಲ್ಲಿಂದ ಮರಳಿ ಗ್ರಾಮಕ್ಕೆ ಆಗಮಿಸಿ, ಆಯಾ ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಗಂಗೆ ಕೊಡವನ್ನು ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುತ್ತಲಿನ ಆನೇಕ ಗ್ರಾಮಗಳ ಸದ್ಭಕ್ತರು ಉತ್ಸವಕ್ಕೆ ಆಗಮಿಸಿ, ಗ್ರಾಮ ದೇವತೆ  ದೇವಮಾಂಬ ದೇವಿ ಮತ್ತು   ಆಂಜನೇಯಸ್ವಾಮಿ ದರ್ಶನವನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT