ADVERTISEMENT

ಮಕ್ಕಳ ಸುರಕ್ಷಿತ ಸಂಚಾರಕ್ಕೆ ಬೇಕಿದೆ ಕಾಯಕಲ್ಪ

ನಗರ ಸಂಚಾರ

ಸಿದ್ದಯ್ಯ ಹಿರೇಮಠ
Published 2 ಸೆಪ್ಟೆಂಬರ್ 2013, 5:43 IST
Last Updated 2 ಸೆಪ್ಟೆಂಬರ್ 2013, 5:43 IST

ಬಳ್ಳಾರಿ: ಬೆಳಿಗ್ಗೆ 8 ಗಂಟೆ ಆಗುತ್ತಿದ್ದಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಆಗಮಿಸುವ ಆಟೊಗಳು ಪಾಲಕರ ಮನದಲ್ಲಿ ದುಗುಡ ಹುಟ್ಟಿಸುತ್ತವೆ. ಚಾಲಕರು ತಮ್ಮ ಆಟೊಗಳಲ್ಲಿ ಸ್ಥಳಾವಕಾಶಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಅವರಲ್ಲಿ ಅಸುರಕ್ಷತೆಯ ಭಾವ ಉಂಟುಮಾಡುತ್ತಿದೆ.

ನಗರದಾದ್ಯಂತ ವಾಹನದಟ್ಟಣೆಯಲ್ಲಿ ಮಕ್ಕಳನ್ನು ತುಂಬಿಕೊಂಡು ವೇಗವಾಗಿ ಸಾಗುವ ಆ ಶಾಲಾ ವಾಹನ ಎಲ್ಲಿ ಅಪಘಾತಕ್ಕೆ ಈಡಾಗುವುದೋ ಎಂದು ನೋಡುಗರಲ್ಲಿ ಭೀತಿ ಮೂಡಿಸುತ್ತದೆ. ಕುರಿ-ಕೋಳಿ ತುಂಬಿಕೊಂಡು ಸಾಗುವ ವಾಹನಗಳಂತೆ ಮಕ್ಕಳನ್ನು ತುಂಬಿಕೊಂಡು ಶಾಲೆಗಳಿಗೆ ಕರೆದೊಯ್ಯುವ ಆಟೊಗಳು ನಗರದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಸಂಚರಿಸುವುದು ನಿತ್ಯ ಕಂಡು ಬರುವ ಸಾಮಾನ್ಯ ದೃಶ್ಯ.

ಶಾಲೆಗೆ ಹೊರಡುವ ಮಕ್ಕಳಿಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕಾಗಿ ಅಡುಗೆ ತಯಾರಿಸಿ, ಊಟದ ಡಬ್ಬಿಗಳಲ್ಲಿ ತುಂಬಿ ಕೊಡುವುದು ಒಂದು ರೀತಿಯ ಒತ್ತಡ. ಜೊತೆಗೆ ಮಕ್ಕಳ ಪಠ್ಯ ಪುಸ್ತಕ, ಸಾಮಗ್ರಿಗಳನ್ನು ಶಾಲಾ ಚೀಲದಲ್ಲಿ ಜೋಡಿಸಿಟ್ಟು, ಅವರನ್ನು ಅಣಿಗೊಳಿಸಿ, ಶಾಲೆಗೆ ಕಳುಹಿಸುವ ಪ್ರಯಾಸ ಮತ್ತೊಂದೆಡೆ. ಇವುಗಳ ನಡುವೆ ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಆತಂಕ ತಪ್ಪಿದ್ದಲ್ಲ.

ನಗರದ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಬಡಾವಣೆಗಳಿಂದ ಶಾಲೆಗೆ ಕರೆತರಲು, ಮನೆಗೆ ತಲುಪಿಸಲು ಬಸ್, ವ್ಯಾನ್‌ಗಳ ಸೌಲಭ್ಯವಿದೆ.

ನಗರದ ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ಆಟೊಗಳಲ್ಲಿ ಮಕ್ಕಳು ಕುಳಿತುಕೊಳ್ಳಲೂ ಅವಕಾಶವಿಲ್ಲದಂತೆ ಆಟೊದ ಕಂಬಿಗಳಿಗೆ  ಶಾಲಾ ಬ್ಯಾಗ್ ಮತ್ತು ಊಟದ ಚೀಲಗಳನ್ನು ನೇತು ಹಾಕಿಕೊಂಡು ಸಾಗುವುದರಿಂದ ಒಂದೆರಡು ಮಕ್ಕಳು ನಿಂತುಕೊಂಡು ಪ್ರಯಾಸದಿಂದ ಶಾಲೆಗೆ ಹೋಗಿ ಬರಬೇಕಾಗಿದೆ. ಮಕ್ಕಳ ಮುಖದಲ್ಲಿ ಶಾಲೆಯ ಆರಂಭದಲ್ಲಿಯೇ ಆಯಾಸ ಕಾಣಿಸುತ್ತದೆ. ಮಕ್ಕಳ ಸಹಜ ಲವಲವಿಕೆ ಇಲ್ಲವಾಗುತ್ತದೆ. 

ಇತ್ತೀಚೆಗೆ ತಾಲ್ಲೂಕಿನ ಕುಡತಿನಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯೊಂದರ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೊಕ್ಕೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿದಂತೆ 7 ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಪಾಲಕರನ್ನು ಆತಂಕಕ್ಕೀಡು ಮಾಡಿದೆ. ಆಗಾಗ ಇಂತಹ ಘಟನೆಗಳು ಸಂಭವಿಸಿ, ಸಾವು-ನೋವುಗಳು ಉಂಟಾಗುತ್ತಲೇ ಇವೆ. ಅಧಿಕಾರಿಗಳು, ಶಾಲೆಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಂಡಿಲ್ಲ ಎಂದೂ ಪಾಲಕರು ಆರೋಪಿಸುವರು.

ವಿದ್ಯಾಭ್ಯಾಸಕ್ಕೆ ಶಾಲೆಗೆ ವಿದ್ಯಾರ್ಥಿಗಳು ತೆರಳಲು ಶಾಲೆಯ ಬಸ್‌ಗಳ ಜೊತೆಗೆ ಖಾಸಗಿ ಆಟೊಗಳನ್ನು ಅವಲಂಬಿಸಬೇಕಾಗಿದೆ. ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ  ಮಕ್ಕಳನ್ನು ತುಂಬಿಕೊಂಡು ಸಾಗುವ ಆಟೊಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ. ಕುಡತಿನಿಯಂತಹ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳು ಮತ್ತು ಪೊಲೀಸರ ಮೇಲಿದೆ. ಆದರೆ ಯಾರೊಬ್ಬರೂ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದೆ. ಇನ್ನು ಯಾರ ಮೇಲೆ ನಂಬಿಕೆ ಇಡಬೇಕು ಎನ್ನುವುದು ಆತಂಕದ ಪ್ರಶ್ನೆ ಎಂದು ಪಾಲಕ ದುರ್ಗಪ್ಪ ಕೇಳುವರು.

ನಗರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಚಿಕ್ಕ ಖಾಸಗಿ ವಾಹನಗಳಲ್ಲಿ ಐದಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದೊಯ್ದಲ್ಲಿ ಅಂತಹ ವಾಹನಗಳ ಚಾಲಕರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್‌ಪಿ ರುದ್ರಮುನಿ ಹೇಳಿದ್ದಾರೆ. ಆದರೆ ಈಗಲೂ ಪ್ರತಿದಿನ ಶಾಲೆಗೆ ಆಟೊಗಳಲ್ಲಿ ನಿರ್ಭೀತಿಯಿಂದ, ಎಲ್ಲ ನಿಯಮಗಳನ್ನು ಮೀರಿ ಮಕ್ಕಳನ್ನು ತುಂಬಿಕೊಳ್ಳುವರು.

ಸಮಾಜದ ಅಮೂಲ್ಯ ಆಸ್ತಿಯಾಗಿರುವ ಅಮಾಯಕ ಮಕ್ಕಳ ಬದುಕಿಗೆ ಭದ್ರತೆ ನೀಡಬೇಕಿದೆ. ಪೋಷಕರ ಮನದಲ್ಲಿ ಮೂಡಿರುವ ಆತಂಕವಿದೆ. ಅದು ಸಮಾಧಾನಕರವಾಗಿ ನಡೆಯಲು ಸ್ವತಃ ಪಾಲಕರು ಜಾಗೃತರಾಗಬೇಕು. ಅಲ್ಲದೆ ಶಾಲೆಗಳ ಮುಖ್ಯಸ್ಥರು, ಪೊಲೀಸರು ಕಾನೂನು ನಿಯಮ ಪಾಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.