ADVERTISEMENT

ಮತ್ತೆ ಟಿಸಿಲೊಡೆದ ‘ಗ್ರೀನ್‌ ಸಿಟಿ’ ಕನಸು!

ಕೆ.ನರಸಿಂಹ ಮೂರ್ತಿ
Published 21 ಮೇ 2018, 11:47 IST
Last Updated 21 ಮೇ 2018, 11:47 IST
ಬಳ್ಳಾರಿಯ ರೇಡಿಯೋ ಪಾರ್ಕ್‌ ಪ್ರದೇಶದ ಸರ್ಕಾರಿ ಆಸ್ಪತ್ರೆ ರಸ್ತೆಯ ಹಸಿರು
ಬಳ್ಳಾರಿಯ ರೇಡಿಯೋ ಪಾರ್ಕ್‌ ಪ್ರದೇಶದ ಸರ್ಕಾರಿ ಆಸ್ಪತ್ರೆ ರಸ್ತೆಯ ಹಸಿರು   

ಬಳ್ಳಾರಿ: ಚುನಾವಣೆ ಬಳಿಕ ನಗರದಲ್ಲಿ ಮತ್ತೆ ಗ್ರೀನ್‌ ಸಿಟಿಯ ಕನಸು ಟಿಸಿಲೊಡೆದಿದೆ. ನಗರದಲ್ಲಿ ಈಗ ನೆರಳಿಲ್ಲದ ರಸ್ತೆಗಳೇ ಹೆಚ್ಚು. ರಸ್ತೆ ವಿಸ್ತರಣೆಗಾಗಿ, ಜೋಡಿ ರಸ್ತೆ ನಿರ್ಮಾಣಕ್ಕಾಗಿ ದಶಕದ ಹಿಂದೆ ಬೃಹತ್‌ ಮರಗಳನ್ನು ಕಡಿದುರುಳಿಸಿದ ಬಳಿಕ ನೆರಳು–ನೆಮ್ಮದಿ ಎಂಬುದು ಕಾಣೆಯಾಗಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ, ಕೆಲವು ಪ್ರದೇಶಗಳು ಮಾತ್ರ ತಂಪು ಬದುಕಿನಡಿ ನೆಮ್ಮದಿಯಾಗಿವೆ.

ಪಾರ್ವತಿ ನಗರ, ಕಂಟೋನ್ಮೆಂಟ್‌ ಪ್ರದೇಶ, ರೇಡಿಯೋ ಪಾರ್ಕ್‌, ಸತ್ಯನಾ ರಾಯಣ ಪೇಟೆಯ ಕೆಲವು ರಸ್ತೆಗಳು, ಜಿಲ್ಲಾಧಿಕಾರಿ ಕಚೇರಿ ಆವರಣ, ಕನ್ನಡ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಚಯವೂ ಸೇರಿದಂತೆ ಕೆಲವೆಡೆ ಈಗಲೂ ಗ್ರೀನ್‌ ಸಿಟಿಯ ಲಕ್ಷಣಗಳು ಹಸಿರಾಗಿವೆ.

ಈ ಪ್ರದೇಶದಲ್ಲಿ ನಡೆದಾಡಿದರೆ, ಸುಮ್ಮನೇ ಸ್ಕೂಟರ್‌, ಬೈಕ್ ಅಥವಾ ಬೈಸಿಕಲ್‌ನಲ್ಲಿ ಸವಾರಿ ಮಾಡಿದರೆ ಆ ಆಹ್ಲಾದ, ತಂಪು ಗಾಳಿ, ಆತಂಕ, ಉದ್ವೇಗಗಳನ್ನು ಕಡಿಮೆ ಮಾಡುವ ಹಸಿರು ಚಾದರ ಅನುಭವಕ್ಕೆ ಬರುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವವರ ಖುಷಿಯೇ ಬೇರೆ. ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲೆಲ್ಲ ಹಸಿರು ಎಂಬುದು ರಸ್ತೆ ಬದಿಯ ಮರಗಳಿಂದ ಹಬ್ಬಿದ್ದಲ್ಲ. ಬದಲಿಗೆ ಬಹುತೇಕ ಸರ್ಕಾರಿ ಕಟ್ಟಡಗಳ ಆವರಣದಲ್ಲಿರುವ ಮರಗಳಿಂದ ಹಬ್ಬಿದ್ದು, ರಸ್ತೆ ಬದಿಯ ಮರಗಳು ನೆರಳು ಅಪರೂಪ.

ADVERTISEMENT

ಉಳಿದ ಬಹುತೇಕ ನಗರ ಮಾತ್ರ ಬಿಸಿಲನ್ನೇ ಹೊದ್ದು, ಬಿಸಿಲಲ್ಲೇ ಮಲಗಿದೆ. ಎಲ್ಲಿ ನೋಡಿದರೂ ಬಿಸಿಲು. ಎಲ್ಲಿಯೂ ನಿಂತು ಸುಧಾರಿಸಿಕೊಳ್ಳಲು ಆಗದ ಬಿಸಿ ನೆಲ. ಅಂಗಡಿ ಮಗ್ಗುಲಿಗೆ ನಿಂತರೆ ಮಾಲೀಕರ ಕೆಂಗಣ್ಣು. ಇದು ಮರ ಕಡಿದ ಪರಿಣಾಮ. ಇಲ್ಲಿ ಮತ್ತೆ ಹಸಿರು ಸ್ವರ್ಗವೊಂದನ್ನು ನಿರ್ಮಿಸಬೇಕು ಎಂಬ ಉಮ್ಮೇದು ಮಾತ್ರ ಯಾರಿಗೂ ಇದ್ದಂತಿಲ್ಲ.

ಕೆಲ ತಿಂಗಳ ಹಿಂದೆ ನಗರ ಬಸ್‌ ನಿಲ್ದಾಣ ನವೀಕರಣ ಸಂದರ್ಭದಲ್ಲಿ ರಸ್ತೆ ಬದಿಯಿದ್ದ ಮರಗಳನ್ನು ಕಡಿದು ಉರುಳಿಸಲಾಗಿತ್ತು. ರಾತ್ರೋ ರಾತ್ರಿ. ಬೆಳಿಗ್ಗೆ ಬಿಸಿಲೇರುವ ಹೊತ್ತಿಗೆ ಮರದ ತುಂಡುಗಳನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿತ್ತು. ಇಂಥ ರಾತ್ರಿ ಕಾರ್ಯಾಚರಣೆಗಳಿಗೆ ಅನುಮತಿ ನೀಡುವವರು ಯಾರು? ಅನುಮತಿ ಇಲ್ಲದೆಯೇ ಕಾರ್ಯಾಚರಣೆ ನಡೆಸ ಲಾಗುತ್ತದೆಯೇ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವವರೂ ಇಲ್ಲವಾಗಿದ್ದಾರೆ.

ಚುನಾವಣೆ ಕಣದಲ್ಲಿದ್ದ ಬಹುತೇಕರು ‘ಕ್ಲೀನ್‌ ಅಂಡ್‌ ಗ್ರೀನ್‌ ಸಿಟಿ’ಯ ಭರವಸೆ ಬಿತ್ತಿದರು. ಅಧಿಕಾರಕ್ಕೆ ಬಂದರೆ ನಗರವನ್ನು ಸ್ವಚ್ಛ, ಸುಂದರ ಬಳ್ಳಾರಿಯನ್ನಾಗಿ ಮಾಡುತ್ತೇವೆ ಎಂದು ಓಣಿಗಳಲ್ಲಿ ಹೇಳುತ್ತಾ ಸಾಗಿದರು. ಕುಡಿಯುವ ನೀರಿನ ಸಮಸ್ಯೆ ಇನ್ನೇನು ಬಗೆ ಹರಿಸಿಬಿಡುತ್ತೇವೆ ಎಂದೂ ಹೇಳಿದರು.

‘ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಪಾಲಿಕೆ ವತಿಯಿಂದ ಒಮ್ಮೆಯೂ ನಗರ ಹಸಿರೀಕರಣ ಯೋಜನೆ ಸಮರ್ಥ ವಾಗಿ ಮತ್ತು ಸಮರ್ಪಕವಾಗಿ ಜಾರಿ ಗೊಂಡಿದ್ದನ್ನು ಕಂಡಿದ್ದೇ ಇಲ್ಲ’ ಎಂಬುದು ನಗರದ ಪಾರ್ವತಿ ನಗರ ನಿವಾಸಿ ವೆಂಕಟರಮಣ ವಿಷಾದದಿಂದ ನುಡಿದರು.

‘ನಮ್ಮ ಮನೆಯ ಆಸುಪಾಸಿನಲ್ಲಿ ದೊಡ್ಡ ದೊಡ್ಡ ಮರಗಳಿವೆ. ರಸ್ತೆಯಲ್ಲಿ ಕಿಂಚಿತ್ತೂ ಬಿಸಿಲುಬೀಳದಂಥ ದಟ್ಟ ನೆರಳಿದೆ. ಆದರೆ ಪಾರ್ವತಿ ನಗರವನ್ನು ಬಿಟ್ಟು ಈಚೆ ಬಂದರೆ ಮಾತ್ರ ಬಿಸಿಲು ಕಣ್ಣು ಕುಕ್ಕುತ್ತದೆ. ಎಲ್ಲಿಯೂ ನೆರಳು ಕಾಣಿಸುವುದಿಲ್ಲ’ ಎಂಬುದು ಅದೇ ಪ್ರದೇಶದ ಬೀರೇಶ್‌ ಅವರ ನುಡಿ.

‘ನಗರ ಹಸಿರೀಕರಣ ಯೋಜನೆ ಅಡಿ ಪಾಲಿಕೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನೆಟ್ಟ ಗಿಡಗಳಿಗೆ ನೀರು ಹಾಕೋರು ಇಲ್ಲ. ಬಾಡುವ ಹಂತದಲ್ಲಿ ಟ್ಯಾಂಕರ್‌ನಲ್ಲಿ ನೀರು ಹಾಕುತ್ತಾರೆ. ಇಂಥ ಕಳಪೆ ಪೋಷಣೆಯಿಂದ ಗ್ರೀನ್‌ ಸಿಟಿ ನಿರ್ಮಿಸಲು ಸಾಧ್ಯವೇ?’ ಎಂಬುದು ಬೆಂಗಳೂರು ರಸ್ತೆ ನಿವಾಸಿ ಸುರೇಶ್‌ ಅವರ ಪ್ರಶ್ನೆ.

‘ಹೈದರಾಬಾದ್‌ ಕರ್ನಾಟಕದ ನಗರ ಕೇಂದ್ರಗಳ ಪೈಕಿ ಬಳ್ಳಾರಿಯ ಪರಿಸರವೇ ಉತ್ತಮ ಎನ್ನಿಸುವಂತಿದೆ. ಆದರೆ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರ ನಾಗರಿಕರಲ್ಲೂ ಹಸಿರು ಕಾಳಜಿ ಮೂಡಬೇಕು’ ಎನ್ನುತ್ತಾರೆ ವೃಕ್ಷಮಿತ್ರ ಆಂದೋಲನದ ಮುಖಂಡ ಡಾ.ಅನೀಶ್‌.

ಅರಣ್ಯ ಇಲಾಖೆಯ ಸ್ವಾರ್ಥ

ಬಳ್ಳಾರಿ: ನಗರದ ರೇಡಿಯೋ ಪಾರ್ಕ್‌ ಪ್ರದೇಶದಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹ ಸಮುಚ್ಛಯದ ರಸ್ತೆಯಲ್ಲಿ ಸಾಗಿದರೆ ಕಾಣುವ ದೃಶ್ಯವೇ ಬೇರೆ. ಇಲ್ಲಿ ಹಸಿರು ದಟ್ಟವಾಗಿದೆ. ರಸ್ತೆ ಬದಿ ಮರಗಳು ಪ್ರಫುಲ್ಲವಾಗಿವೆ. ಇಲಾಖೆಯು ಅಲ್ಲಿ ಹಸಿರು ಸ್ವರ್ಗವನ್ನು ಸೃಷ್ಟಿಸಿಕೊಂಡಿದೆ. ಆದರೆ ನಗರದ ಇತರೆಡೆ ಮಾತ್ರ ಹಸಿರು ಅಪರೂಪವಾಗಿದೆ. ಇಲಾಖೆಯು ‘ತನ್ನಂತೆ ಪರರ ಬಗೆದೊಡೆ’ ಎಂಬ ಸರ್ವಜ್ಞನ ಸಾಲನ್ನು ಪ್ರಜ್ಞಾಪೂರ್ವಕವಾಗಿ ಮರೆತಂತಿದೆ.

‘ಸ್ವಂತ ರೊಕ್ಕದಲ್ಲಿ ಮನೆಗೊಂದು ಸಸಿ’

ಬಳ್ಳಾರಿ: ‘ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದಂತೆ, ಬಳ್ಳಾರಿಯನ್ನು ಗ್ರೀನ್‌ ಸಿಟಿ ಮಾಡಲು ಸಿದ್ಧತೆ ನಡೆದಿದೆ. ಸ್ವತ ಹಣದಲ್ಲೇ ಸಸಿಗಳನ್ನು ಖರೀದಿಸಿ ಪ್ರತಿ ಮನೆಗೂ ವಿತರಿಸಲಾಗುವುದು’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.

‘ಪಕ್ಷದ ಕಾರ್ಯಕರ್ತರಿಗೆ ಬೂತ್‌ವಾಡು ಸಸಿಗಳನ್ನು ಒಟ್ಟಿಗೇ ವಿತರಿಸಲಾಗುವುದು. ಅವರು ಎಲ್ಲ ಮನೆಗಳಿಗೂ ವಿತರಿಸುತ್ತಾರೆ. ಆ ಬಳಿಕ ಆ ಸಸಿಗಳ ಪೋಷಣೆಯನ್ನು ಮನೆಯ ಸದಸ್ಯರೇ ನಿರ್ವಹಿಸಬೇಕು ಎಂದು ಮನವಿ ಮಾಡುತ್ತೇವೆ’ ಎಂದು ಹೇಳಿದರು.

**
ಹೆಚ್ಚು ಸಸಿಗಳನ್ನು ನೆಟ್ಟು ಸುಮ್ಮನಾದರೆ ಸಾಲದು, ಕಡಿಮೆ ಸಸಿ ನೆಟ್ಟರೂ ಎಲ್ಲವನ್ನೂ ರಕ್ಷಿಸಬೇಕು
ಡಾ.ಅನೀಶ್‌, ವೃಕ್ಷಮಿತ್ರ ಆಂದೋಲನದ ಮುಖಂಡ 

**
ಗ್ರೀನ್‌ ಸಿಟಿ ನಿರ್ಮಾಣ ಎಲ್ಲರ ಹೊಣೆ. ಅದಕ್ಕಾಗಿ ಎಲ್ಲರೂ ಒಂದೊಂದು ಸಸಿಯನ್ನು ಪೋಷಿಸಬೇಕು
ಜಿ.ಸೋಮಶೇಖರರೆಡ್ಡಿ, ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.