ADVERTISEMENT

ಮಲ್ಲಿಗೆ ಬೆಲೆ ಕುಸಿತ: ಬೆಳೆ ನಾಶಕ್ಕೆ ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:36 IST
Last Updated 9 ಜೂನ್ 2018, 9:36 IST
ಹೂವಿನಹಡಗಲಿ ತಾಲ್ಲೂಕು ಮಿರಾಕೊರನಹಳ್ಳಿಯಲ್ಲಿ ಕುರಿಗಳಿಗೆ ಆಹಾರವಾಗಿರುವ ಗೋನಾಳ ಮಹಾಂತೇಶ್ ಅವರ ಮಲ್ಲಿಗೆ ತೋಟ
ಹೂವಿನಹಡಗಲಿ ತಾಲ್ಲೂಕು ಮಿರಾಕೊರನಹಳ್ಳಿಯಲ್ಲಿ ಕುರಿಗಳಿಗೆ ಆಹಾರವಾಗಿರುವ ಗೋನಾಳ ಮಹಾಂತೇಶ್ ಅವರ ಮಲ್ಲಿಗೆ ತೋಟ   

ಹೂವಿನಹಡಗಲಿ: ಮಾರುಕಟ್ಟೆಯಲ್ಲಿ ಮಲ್ಲಿಗೆಯ ಬೆಲೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಿರಾಕೊರನಹಳ್ಳಿಯಲ್ಲಿ ರೈತರು ಮಲ್ಲಿಗೆ ಬೆಳೆಯನ್ನು ನಾಶಪಡಿಸಲು ಮುಂದಾಗಿದ್ದಾರೆ.

ಮಲ್ಲಿಗೆ ಕೃಷಿಗೆ ಮಾಡಿದ ಖರ್ಚು ಹಿಂತಿರುಗದೇ ಇರುವುದರಿಂದ ತಾಲ್ಲೂಕಿನ ಮಲ್ಲಿಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಕೂಲಿಕಾರರ ವೆಚ್ಚವೂ ಕೈಗೆಟುಕದ ಕಾರಣ ಕೆಲವರು ಮೊಗ್ಗು ಕೀಳದೇ ಹಾಗೇ ಬಿಟ್ಟಿದ್ದರೆ, ಇನ್ನು ಕೆಲವರು ಸ್ವತಃ ಬೆಳೆ ನಾಶಪಡಿಸುತ್ತಿದ್ದಾರೆ. ಮಿರಾಕೊರನಹಳ್ಳಿ ಗ್ರಾಮದ ರೈತ ಗೋನಾಳ ಮಹಾಂತೇಶ ಶುಕ್ರವಾರ ತಮ್ಮ ಒಂದು ಎಕರೆ ಮಲ್ಲಿಗೆ ತೋಟವನ್ನು ಕುರಿ ಮೇಯಿಸಲು ಬಿಟ್ಟುಕೊಟ್ಟಿದ್ದಾರೆ. ಒಂದು ವಾರ ಅವಧಿಯಲ್ಲಿ ಈ ಗ್ರಾಮದ ನಾಲ್ಕೈದು ಮಲ್ಲಿಗೆ ತೋಟಗಳು ಇದೇ ರೀತಿ ತೆರವಾಗಿವೆ.

ಈ ಭಾಗದ ಪರಿಮಳಯುಕ್ತ ಮಲ್ಲಿಗೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತಿತ್ತು. ಈ ವರ್ಷ ಮಲ್ಲಿಗೆ ಯತೇಚ್ಛವಾಗಿ ಅರಳಿದರೂ ಬೆಳೆಗಾರರ ಬದುಕು ಮಾತ್ರ ಅರಳದಂತಾಗಿದೆ. ಬೆಲೆ ಕುಸಿತದ ನಷ್ಟದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ರೈತರು ಮಲ್ಲಿಗೆಗೆ ವಿದಾಯ ಹೇಳುತ್ತಿದ್ದಾರೆ.

ADVERTISEMENT

‘ಮಲ್ಲಿಗೆ ಮೊಗ್ಗು ಕೀಳಲು ಕೂಲಿಕಾರರಿಗೆ ಕೆಜಿಯೊಂದಕ್ಕೆ ₹ 60–70 ನೀಡುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ಮಲ್ಲಿಗೆಯ ಬೆಲೆ ಕೆಜಿಗೆ ₹ 60ಕ್ಕೆ ಕುಸಿದಿದೆ. ಈ ದರದಲ್ಲಿ ಸಾಗಣೆ ವೆಚ್ಚ, ದಲ್ಲಾಳಿಗಳ ಕಮಿಷನ್‌ ಹಣ ತೆಗೆದರೆ ಕೆಜಿ ಮಲ್ಲಿಗೆಗೆ ಸರಾಸರಿ ₹ 36 ಮಾತ್ರ ಕೈಗೆ ಸಿಗುತ್ತದೆ. ಮಲ್ಲಿಗೆ ಕೀಳುವ ಕೂಲಿಕಾರರ ಹಣ ಭರಿಸಲು ಕೂಡ ಆಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ಆ ಕಾರಣದಿಂದ ಮಲ್ಲಿಗೆ ತೋಟವನ್ನು ಕುರಿ ಮೇಯಿಸಲು ಬಿಟ್ಟುಕೊಟ್ಟಿದ್ದೇನೆ’ ಎಂದು ಮಲ್ಲಿಗೆ ಬೆಳೆಗಾರ ಗೋನಾಳ ಮಹಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲ್ಲಿಗೆ ಹೂ ಕೀಳದೇ ಹಾಗೇ ಬಿಡುವುದರಿಂದ ಕೀಟಬಾಧೆ ಹೆಚ್ಚುತ್ತದೆ. ಮಲ್ಲಿಗೆಯ ಚಿಗುರು, ಹಸಿರೆಲೆಗಳನ್ನು ಕುರಿಗಳು ತಿನ್ನುವುದರಿಂದ ಸದ್ಯಕ್ಕೆ ಮೊಗ್ಗು ಬಿಡುವ ಪ್ರಕ್ರಿಯೆ ಸ್ಥಗಿತವಾಗುತ್ತದೆ. ಮಡಿಗಳನ್ನು ಸ್ವಚ್ಛ ಮಾಡಿಕೊಂಡು, ಗಿಡಕ್ಕೆ ಗೊಬ್ಬರ ಹಾಕಿದರೆ ಮುಂದಿನ ಮಲ್ಲಿಗೆ ಋತುವಿಗೆ ತೋಟ ಸಿದ್ಧವಾಗುತ್ತದೆ’ ಎಂಬುದು ಅವರ ಅನಿಸಿಕೆ.

ಪ್ರತಿ ವರ್ಷ ಆಷಾಢದಲ್ಲಿ ಮಾತ್ರ ಮಲ್ಲಿಗೆ ಹೂವಿನ ಬೆಲೆ ಕಡಿಮೆ ಇರುತಿತ್ತು. ಆದರೆ, ಈ ವರ್ಷ ಮಲ್ಲಿಗೆ ಋತು ಆರಂಭವಾದಾಗಿನಿಂದಲೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲೇ ಇಲ್ಲ. ಒಂದು ಕಾಲಕ್ಕೆ ಮಲ್ಲಿಗೆ ಬೆಳೆದು ಆರ್ಥಿಕ ಪ್ರಗತಿ ಸಾಧಿಸಿದವರು ಇಂದು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

‘ಸಮೀಪ ನಗರಗಳ ಮಲ್ಲಿಗೆ ಮಾರುಕಟ್ಟೆಯನ್ನು ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ. ಮಲ್ಲಿಗೆ ಮೊಗ್ಗು 3–4 ಗಂಟೆ ಅವಧಿಯಲ್ಲೇ ಹೂವಾಗಿ ಅರಳುವುದರಿಂದ ಸಮೀಪದ ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಹುಬ್ಬಳಿಗೆ ಮಾತ್ರ ರವಾನೆ ಮಾಡಲು ಸಾಧ್ಯ. ದೂರದ ಬೆಂಗಳೂರು ಹಾಗೂ ನೆರೆಯ ರಾಜ್ಯಗಳ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಉತ್ತಮ ಬೆಲೆ ಸಿಗುತ್ತದೆ. ಆದರೆ, ದೂರದ ನಗರಗಳಿಗೆ ಮಲ್ಲಿಗೆ ಕಳಿಸಿಕೊಡಲು ಶೀತಲೀಕರಣ ವ್ಯವಸ್ಥೆಯ ವಾಹನಗಳ ಅವಶ್ಯಕತೆ ಇದೆ. ತೋಟಗಾರಿಕೆ ಇಲಾಖೆ ರೆಪ್ರಿಜರೇಟರ್ ವಾಹನ ವ್ಯವಸ್ಥೆಯನ್ನು ಮಾಡಿ ಇಲ್ಲಿನ ಪಾರಂಪರಿಕ ಮಲ್ಲಿಗೆ ಬೆಳೆಯನ್ನು ಉಳಿಸಬೇಕು’ ಎಂದು ಮಲ್ಲಿಗೆ ಬೆಳೆಗಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.