ಬೆಂಗಳೂರು: `ಸಮೃದ್ಧ ಮಳೆ- ಬೆಳೆ ಆಗಲಿ~ ಎಂದು ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಹೋಮ- ಹವನ ಮತ್ತು ವಿಶೇಷ ಪೂಜೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಪೂಜಾ ಕೈಂಕರ್ಯಗಳಿಗೆ ಆಯಾ ದೇವಸ್ಥಾನಗಳ ನಿಧಿಯಿಂದ ಐದು ಸಾವಿರ ರೂಪಾಯಿವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಈ ಸುತ್ತೋಲೆ ಕುರಿತು ವಿಧಾನಸಭೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, `ಪೂಜೆ- ಪುನಸ್ಕಾರಕ್ಕೆ ಸರ್ಕಾರದ ಹಣ ಏಕೆ? ಹೇಗಿದ್ದರೂ ಸರ್ಕಾರದಲ್ಲಿ ಹಣ ಇಲ್ಲ. ಶಾಸಕರ ಒಂದು ತಿಂಗಳ ವೇತನ ಕೊಡುತ್ತೇವೆ. ಆ ಹಣದಲ್ಲೇ ಪೂಜೆ ಮಾಡಿಸಿ~ ಎಂದು ವ್ಯಂಗ್ಯವಾಡಿದರು.
`ಅರ್ಚಕರಿಗೆ ಸರಿಯಾಗಿ ವೇತನ ನೀಡದ ಈ ಸರ್ಕಾರ ಪೂಜೆಗಾಗಿ ಐದು ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ. ಅರ್ಚಕರ ವೇತನ ಕೂಡ ಹೆಚ್ಚು ಮಾಡಬೇಕು~ ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಎಚ್.ಎಸ್.ಮಹದೇವ ಪ್ರಸಾದ್ ಮತ್ತು ಜೆಡಿಎಸ್‌ನ ಸಿ.ಎಸ್.ಪುಟ್ಟೇಗೌಡ ಅವರು `ಮಳೆ ಬರಲಿ ಎಂಬ ಕಾರಣಕ್ಕೆ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಆದೇಶಿಸಿರು ವುದು ಸರಿಯಲ್ಲ. ಇದು ಒಂದು ರೀತಿ ಸರ್ಕಾರವೇ ಮೂಢನಂಬಿಕೆ ಪ್ರೋತ್ಸಾಹಿಸಿದಂತೆ~ ಎಂದು ಟೀಕಿಸಿದರು.
`ರಾಜ್ಯದಲ್ಲಿ ಸುಮಾರು 34 ಸಾವಿರ ಮುಜರಾಯಿ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನದಲ್ಲಿನ ಪೂಜೆಗೆ ಐದು ಸಾವಿರ ರೂಪಾಯಿ ಅಂತ ಲೆಕ್ಕ ಹಾಕಿದರೆ ಸುಮಾರು 17 ಕೋಟಿ ರೂಪಾಯಿ ಬೇಕಾಗುತ್ತದೆ. ಈ ಹಣವನ್ನು ಜಾನುವಾರುಗಳಿಗೆ ಮೇವು ಖರೀದಿಸಲು ಬಳಸಿದರೆ ಉಪಕಾರ ಮಾಡಿದಂತಾಗುತ್ತದೆ~ ಎಂದು ಮಹದೇವ ಪ್ರಸಾದ್ ಸಲಹೆ ನೀಡಿದರು.
ಸುತ್ತೋಲೆಯಲ್ಲಿ ಏನಿದೆ?: ಸಮೃದ್ಧ ಮಳೆ- ಬೆಳೆಗಾಗಿ ಎಲ್ಲ ದೇವಸ್ಥಾನಗಳಲ್ಲೂ ವರುಣ ಮಂತ್ರ, ಜಲಾಭಿಷೇಕ ಅಗತ್ಯ. ಹೀಗಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನದಿ ತೀರ, ಕಲ್ಯಾಣಿ, ಪುಷ್ಕರಣಿಗಳನ್ನು ಹೊಂದಿರುವ ಪ್ರಮುಖ ದೇವಾಲಯಗಳಲ್ಲಿ (ಕೊಲ್ಲೂರು ಮೂಕಾಂಬಿಕಾ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಮತ್ತು ಶ್ರೀಕಂಠೇಶ್ವರಸ್ವಾಮಿ) ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಪರ್ಜನ್ಯಜಪ, ಹೋಮ, ವಿಶೇಷ ಪೂಜೆಗಳನ್ನು ಮಾಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಈ ದೇವಸ್ಥಾನಗಳಲ್ಲದೆ, ಮುಜರಾಯಿ ಇಲಾಖೆಯ ಎ, ಬಿ ಮತ್ತು ಸಿ ವರ್ಗದ ದೇವಾಲಯಗಳಲ್ಲಿ `ಜಲಾಭಿಷೇಕ~ ಪೂಜೆಗಳನ್ನು ಮಾಡುವುದಕ್ಕೂ ಆದೇಶಿಸಲಾಗಿದೆ. ಜು.27 ಮತ್ತು ಆಗಸ್ಟ್ 2ರಂದು ವಿಶೇಷ ಪೂಜೆಗಳನ್ನು ಮಾಡಬೇಕು. ಇದಕ್ಕೆ ತಗಲುವ ವೆಚ್ಚವನ್ನು ಗರಿಷ್ಠ ರೂ 5000 ಮೀರದಂತೆ ಆಯಾಯ ದೇವಸ್ಥಾನ ಗಳ ನಿಧಿಯಿಂದ ಭರಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬರಗಾಲದ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ, ಮಳೆಗಾಗಿ ಪ್ರಾರ್ಥಿಸಿ ದೇವಾಲಯಗಳಲ್ಲಿ ಪೂಜೆ ಮಾಡುವ ವಿಷಯವನ್ನು ರೇವಣ್ಣ ಪ್ರಸ್ತಾಪಿಸಿದರು. ಆಗ ಬಿಜೆಪಿಯ ಕೆ.ಜಿ.ಕುಮಾರಸ್ವಾಮಿ ಅವರು, ರೇವಣ್ಣ ಅವರು ಸದಾ ನಿಂಬೆಹಣ್ಣು ಇಟ್ಟುಕೊಂಡಿರುತ್ತಾರೆ. ಇದರ ಗುಟ್ಟು ಏನು ಎಂದು ಕೆಣಕಿದರು. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, `ಬಿಜೆಪಿ ಸರ್ಕಾರ ಚೆನ್ನಾಗಿ ನಡೆಯಲು ನಿಂಬೆಹಣ್ಣು ಕೊಡುತ್ತೇನೆ~ ಎಂದು ಚುಚ್ಚಿದರು.
`ಹೋಮ, ಹವನದ ಬಗ್ಗೆ ರೇವಣ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಯಾವ ರೀತಿಯ ಹೋಮ, ಹವನ ಮಾಡಿಸಿದರೆ ಮಳೆಯಾಗುತ್ತದೆ ಎಂಬು ದನ್ನು ಅವರೇ ಹೇಳಲಿ~ ಎಂದು ಕೃಷಿ ಸಚಿವ ಉಮೇಶ ಕತ್ತಿ ಛೇಡಿಸಿದರು.
ಕತ್ತಿ ಅವರು ಮುಜರಾಯಿ ಖಾತೆ ವಹಿಸಿ ಕೊಂಡರೆ ಮಳೆ ಬರಬಹುದು ಎಂದು ರೇವಣ್ಣ ಕೆಣಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.