ADVERTISEMENT

`ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 5:33 IST
Last Updated 25 ಡಿಸೆಂಬರ್ 2012, 5:33 IST

ಸಂಡೂರು :  `ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವರಿಗೆ ಸ್ವಾತಂತ್ರ್ಯ ಇಲ್ಲವಾಗಿದೆ.  ಪ್ರತಿನಿತ್ಯ ಸಾರ್ವಜನಿಕರಿಂದ  ನಡೆಯುವ ಹೋರಾಟ, ಪ್ರತಿಭಟನೆಗಳಿಂದ  ನ್ಯಾಯ ಸಿಗದೇ ಜನರು ಹಿಂಸೆ ಗೀಡಾಗುತ್ತಿದ್ದಾರೆ. ಸಮಾಜದ ಆರೋಗ್ಯ ಕಾಪಾಡಬೇಕಾದ ಕೇಂದ್ರ ಸರ್ಕಾರದ ಆಡಳಿತ ಯಂತ್ರ ಕೆಟ್ಟಿದೆ' ಎಂದು ಭಾರತ ಕಮ್ಯನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಅಭಿಪ್ರಾಯ ಪಟ್ಟರು. ಅವರು ಪಟ್ಟಣದಲ್ಲಿ ಸೋಮವಾರ  ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದ 22ರಾಷ್ಟ್ರೀಯ ಪಕ್ಷಗಳ ಪೈಕಿ 17ಪಕ್ಷಗಳು ಕೇಂದ್ರದ ಸಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದು ತಾತ್ವಿಕ ವಿರೋಧವಾಗಿದೆ ಎಂದರು.

ಭ್ರಷ್ಟಾಚಾರ ಮಿತಿಮೀರಿದ್ದು ಇದನ್ನು ಹತ್ತಿಕ್ಕುವಲ್ಲಿ ಯುವ ಸಮೂಹ ಮುಂದೆ ಬರಬೇಕಿದೆ, ಸಿಪಿಐ, ಸಿಪಿಎಂ, ಪಾರ್ವಡ್ ಬ್ಲಾಕ್ ಪಕ್ಷಗಳು ಸರ್ಕಾರದ ಆಡಳಿತ ನೀತಿ ಖಂಡಿಸಿ 5 ಕೋಟಿ ಜನರ ಸಹಿ ಸಂಗ್ರಹ ಕಾರ್ಯಕ್ರಮವನ್ನು ಜನವರಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು. ಾಜ್ಯ ಸರ್ಕಾರ ಜನರ ದುಡ್ಡಿನಲ್ಲಿ ಮೋಜು ಮಾಡುತ್ತಿದೆ, ಬಿಜೆಪಿ ಮತ್ತು ಕೆಜೆಪಿ ಜಗಳದಲ್ಲಿ ಮುಖ್ಯಮಂತ್ರಿ ಅನಾಥರಾಗಿದ್ದಾರೆ. ಸಚಿವರು, ಶಾಸಕರು ತಮ್ಮ ಪಕ್ಷದ ಸಭೆಗಳಿಗೆ ಮಾತ್ರ ಹಾಜರಾಗಿ ಪಕ್ಷಕಟ್ಟುವ ಕೆಲಸದಲ್ಲಿ ನಿರತರಾಗಿ, ಅಭಿವೃದ್ಧಿ ಕೆಲಸಗಳನ್ನು ಮರೆತಿದ್ದಾರೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಯನ್ನು ಕಡೆಗಾಣಿಸಿದಲ್ಲಿ ಮತ್ತೊಂದು ತೆಲಂಗಾಣ ವನ್ನು ಕೇಂದ್ರ ಸರ್ಕಾರ ನೋಡಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದರು.

`ಬಳ್ಳಾರಿ ರಿಪಬ್ಲಿಕ್'  ಹಾಗೆಯೇ ಇದೆ.   ಮುಂದಿನ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದಿಂದ ಅಧಿಕಾರ ಹಿಡಿಯಲು ಅವರಿಗೆ ಜನರು ಅವಕಾಶ ನೀಡದೆ, `ರಾಜಕೀಯ ಬದಲಿಸಿ ಬಳ್ಳಾರಿ ಉಳಿಸಿ' ಎಂಬುದು ನಮ್ಮ ಪಕ್ಷದ ಘೋಷಣೆ ಯಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಕಾರ್ಯದರ್ಶಿ ಆರ್.ಸ್ವಾಮಿ, ಚಂದಾಹುಸೇನ್, ಅಬ್ದುಲ್‌ಬಾಕೈ, ವೇಣು ಗೋಪಾಲ್, ವಿರೇಶಪ್ಪ,  ತಿಪ್ಪು ನಾಯ್ಕ, ಸೇರಿಂದತೆ ವಿವಿಧ ತಾಲ್ಲೂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.