ADVERTISEMENT

ಮುಂದಿನ ಬಾರಿ ಮುಖ್ಯ ಮಂತ್ರಿ: ಸಿದ್ದರಾಮಯ್ಯ.

​ಪ್ರಜಾವಾಣಿ ವಾರ್ತೆ
Published 4 ಮೇ 2018, 7:00 IST
Last Updated 4 ಮೇ 2018, 7:00 IST

ಕೂಡ್ಲಿಗಿ: ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿಯಾಗಲಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಘು ಗುಜ್ಜಲ್ ಅವರನ್ನು ಗೆಲ್ಲಿಸಿದರೆ ಕೂಡ್ಲಿಗಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಗುರುವಾರ ರಾತ್ರಿ ತಾಲ್ಲೂಕಿನ ಕಾನಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗಿಳಿಸಲಾಗಿದೆ. ಕೂಡ್ಲಿಗಿ ತಾಲ್ಲೂಕು ಸೇರಿದಂತೆ ಬಯಲು ಸೀಮೆಯ ನಾಲ್ಕು ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಐದು ವರ್ಷ ಆಡಳಿತ ಮಾಡಿದ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೈಗೊಳ್ಳದೆ ಮೂರು ಜನ ಮುಖ್ಯ ಮಂತ್ರಿಗಳನ್ನು ನೀಡಿದರು. ಚೀಕ್ ಮೂಲಕ ಲಂಚ ಪಡೆದ ಯಡಿಯೂರಪ್ಪ ಜೈಲು ಸೇರಿ ಬಂದರು. ಅವರ ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ರಾಜ್ಯ 15 ವರ್ಷ ಹಿಂದೆ ಹೋಗಿತ್ತು ಎಂದರು.

ಶಾಸಕ ಬಿ. ನಾಗೇಂದ್ರ ಮಾತನಾಡಿ, ಕ್ಷೇತ್ರದಲ್ಲಿ ತಾನು ಮೊದಲ ಬಾರಿ ಶಾಸಕನಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆದ್ದರೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನ ನನ್ನನ್ನು ಶಾಸಕನ್ನಾಗಿ ಆಯ್ಕೆ ಮಾಡಿದ್ದರು ಎಂದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಹಾಗೂ ಜನ ಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಆರ್. ಮಂಜುನಾಥ ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆಶಾ, ಎಸ್. ವೆಂಕಟೇಶ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗುಂಡುಮುಣುಗು ತಿಪ್ಪೇಸ್ವಾಮಿ, ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಳಿಗಿ ವೀರೇಂದ್ರ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ವೀರೇಶ್ ಬಾಬು, ಕುರಿ ಉಣ್ಣೆ ನಿಗಮದ ಅಧ್ಯಕ್ಷ ಕೃಷ್ಣ, ಜಿಲ್ಲಾ ಎಸ್ಟಿ ಮಹಿಳಾ ಘಟಕದ ಅಧ್ಯಕ್ಷೆ ಜಿ. ನಾಗಮಣಿ  ಇದ್ದರು.

ಎತ್ತಿನ ಗಾಡಿ ಮೆರವಣಿಗೆ: ಕಾರ್ಯಕ್ರಮ ಆರಂಭಕ್ಕೂ ಮುನ್ನ ಗ್ರಾಮದ ನೂತನ ಬಸ್ ನಿಲ್ದಾಣದಿಂದ ಎತ್ತಿನ ಗಾಡಿಗಳ ಮೆರವಣಿಗೆಯನ್ನು ಆರಂಭಿಸಲಾಯಿತು. 50ಕ್ಕೂ ಹೆಚ್ಚು ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಗ್ರಾಮದ ಹಳೆ ಬಸ್ ನಿಲ್ದಾಣ ಹಾದು ಗ್ರಾಮ ದೇವತೆ ಮಾರಮ್ಮ ದೇವಿ ದೇವಸ್ಥಾನದ ಮುಂದಿನಿಂದ ಹಾದು ಮುಖ್ಯ ರಸ್ತೆಯ ಮೂಲಕ ವೇದಿಕೆಗೆ ಬರಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ರಘು ಗುಜ್ಜಲ್ ಕಾನಹೊಸಹಳ್ಳಿ ಗ್ರಾಮ ದೇವತೆಯಾದ ಮಾರಮ್ಮ ದೇವಿಯ ದರ್ಶನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಜಿಲ್ಲಾ ಮುಖಂಡರು ಮಾತನಾಡುವಾಗ ಜನರ ಮಧ್ಯದಲ್ಲಿ ಎದ್ದ ವ್ಯಕ್ತಿಯೊಬ್ಬ ನೀವು ಮಾತನಾಡುವುದನ್ನು ನಿಲ್ಲಿಸಿ, ಮುಖ್ಯ ಮಂತ್ರಿ ಯಾವಗ ಬರುತ್ತಾರೆ ಹೇಳಿ ಎಂದು ಜೋರಾಗಿ ಕೂಗಿದರು. ಕೆಲ ಕಾರ್ಯಕರ್ತರು ಅವರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.