ADVERTISEMENT

ಮೆಕ್ಕೆಜೋಳ ಬಂಪರ್ ಬೆಳೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 8:59 IST
Last Updated 14 ಡಿಸೆಂಬರ್ 2012, 8:59 IST

ಕಂಪ್ಲಿ: ಇಲ್ಲಿಗೆ ಸಮೀಪದ ಹೊಸದರೋಜಿ ಗ್ರಾಮದ ನೂರಾರು ಎಕರೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಬೆಳೆದಿರುವ ಮೆಕ್ಕೆಜೋಳ ಉತ್ತಮ ಇಳುವರಿ ಜೊತೆಗೆ ಮಾರುಕಟ್ಟೆಯಲ್ಲಿ ಶ್ರೇಷ್ಠ ಧಾರಣೆಯೂ ದೊರೆತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಮೆಣಸಿನಕಾಯಿ, ಬತ್ತ, ಹತ್ತಿ ಬೆಳೆದು ನಷ್ಟ ಅನುಭವಿಸಿದ್ದು, ಈ ಬಾರಿ ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳ ಕೈಹಿಡಿದಿರುವುದರಿಂದ ಬಹುತೇಕ ರೈತರು ನಗೆಬೀರಿದ್ದಾರೆ. ಎಕರೆಗೆ ಸುಮಾರು ರೂ. 15ಸಾವಿರ ಖರ್ಚು ಮಾಡಿದ್ದು, 30ರಿಂದ 34ಕ್ವಿಂಟಾಲ್ ಇಳುವರಿ ಲಭಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ರೂ. 1300 ಮಾರಾಟವಾಗುತ್ತಿದೆ ಎಂದು ರೈತ ಯು. ಹಂಪಯ್ಯ ತಿಳಿಸುತ್ತಾರೆ.

ಕೆಲ ರೈತರು ಗುತ್ತಿಗೆಗೆ ಭೂಮಿ ಪಡೆದು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಇಂಥ ರೈತರಿಗೆ ಈಗಿರುವ ಮಾರುಕಟ್ಟೆ ಧಾರಣೆಯಲ್ಲಿ ಖರ್ಚು ಮತ್ತು ಗುತ್ತಿಗೆಗೆ ಸರಿ ಹೊಂದುತ್ತದೆ. ಈ ಕಾರಣದಿಂದ ಕೆಲ ರೈತರು ಮೆಕ್ಕೆಜೋಳ ಕೊಯ್ಲು ಪಕ್ಕದಲ್ಲಿಯೇ ಸೂರ್ಯಕಾಂತಿ, ಹಸಿಕಡ್ಲೆ ಬಿತ್ತನೆ ಮಾಡಿದ್ದಾರೆ. ಹೇಗೋ ಜನವರಿ ಕೊನೆವರೆಗೆ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಉಪ ಕಾಲುವೆಗೆ ನೀರು ಲಭ್ಯವಾಗುವುದರಿಂದ ಈ ಬೆಳೆಗಳು ನಮ್ಮಗೆ ಸ್ವಲ್ಪ ಲಾಭ ತರಲಿವೆ ಎಂದು ರೈತ ವೀರೇಶ್ ವಿವರಿಸುತ್ತಾರೆ.

ಆದರೆ ಇದೇ ಪ್ರದೇಶದಲ್ಲಿ ಬೆಳೆದ ಹತ್ತಿ, ಬತ್ತ, ಮೆಣಸಿಕಾಯಿ ಬೆಳೆಗಳಿಗೆ ಹಲ ದಿನಗಳ ಹಿಂದೆ ಸುರಿದ ನಿಲಂ ಮಳೆ ಪರಿಣಾಮ ಹಾನಿಯಾಗಿತ್ತು. ಇದಾದ ನಂತರವೂ ಹವಮಾನ ವೈಪರೀತ್ಯದಿಂದಲೂ ಈ ಬೆಳೆಗಳಿಗೆ ರೋಗರುಜಿನಗಳ ಕಾಟ ಮುಂದುವರಿದ ಕಾರಣ ಕೀಟನಾಶಕ ಇಂದಿಗೂ ಸಿಂಪಡಿಸುತ್ತಿದ್ದು, ನಷ್ಟ ಅನುಭವಿಸುತ್ತಿರುವುದಾಗಿ ಅನೇಕ ರೈತರು ತಿಳಿಸುತ್ತಾರೆ. ಎಲ್ಲರಂತೆ ನಾವೂ ಮೆಕ್ಕೆಜೋಳ ಬೆಳೆದಿದ್ದರೆ ನಾಲ್ಕು ಕಾಸು ಕೈಗೆ ಬರುತ್ತಿತ್ತು ಎಂದು ಇದೀಗ ಆಲೋಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.