ADVERTISEMENT

ರೈತರಿಗೆ ಬೆರಳ ತುದಿಯಲ್ಲೇ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 10:16 IST
Last Updated 12 ಜೂನ್ 2017, 10:16 IST
ಕೊಟ್ಟೂರು ಎಪಿಎಂಸಿ ಕಚೇರಿಯಲ್ಲಿ ಅಳವಡಿಸಿರುವ ಕಿಯೋಸ್ಕ್‌ ಯಂತ್ರದಲ್ಲಿ ಮಾಹಿತಿ ಪರಿಶೀಲಿಸುತ್ತಿರುವ ಸದಸ್ಯ ಬೂದಿ ಶಿವಕುಮಾರ್ ಹಾಗೂ ಕಾರ್ಯದರ್ಶಿ ಗೋಪಾಲರೆಡ್ಡಿ
ಕೊಟ್ಟೂರು ಎಪಿಎಂಸಿ ಕಚೇರಿಯಲ್ಲಿ ಅಳವಡಿಸಿರುವ ಕಿಯೋಸ್ಕ್‌ ಯಂತ್ರದಲ್ಲಿ ಮಾಹಿತಿ ಪರಿಶೀಲಿಸುತ್ತಿರುವ ಸದಸ್ಯ ಬೂದಿ ಶಿವಕುಮಾರ್ ಹಾಗೂ ಕಾರ್ಯದರ್ಶಿ ಗೋಪಾಲರೆಡ್ಡಿ   

ಕೊಟ್ಟೂರು: ರೈತರು ಮತ್ತು ವರ್ತಕರ ಹಿತದೃಷ್ಠಿಯಿಂದ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕಿಯೋಸ್ಕ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಗೆ ಸಂಬಂಧಿಸಿದ 18ಕ್ಕೂ ಹೆಚ್ಚು ಮಾಹಿತಿ ಗಳನ್ನು ಬೆರಳಚ್ಚು ಸ್ಪರ್ಶದ ಮೂಲಕ ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ.

ಎಪಿಎಂಸಿಗಳಲ್ಲಿ ಹಾಲಿ ಇರುವ ಎಲ್‌ಸಿಡಿ ಸ್ಕ್ರೀನ್‌ಗಳಲ್ಲಿ ರಾಜ್ಯದ ವಿವಿಧ ಮಾರುಕಟ್ಟೆಗಳ ಉತ್ಪನ್ನಗಳ ಧಾರಣೆಗಳು ಮಾತ್ರ ಪ್ರದರ್ಶಿತವಾಗುತ್ತಿವೆ. ಆದರೆ, ಈಗ ಅಳವಡಿಸಿರುವ ಕಿಯೋಸ್ಕ್‌ ಯಂತ್ರಗಳಲ್ಲಿ ಉತ್ಪನ್ನಗಳ ಧಾರಣೆ ಅಲ್ಲದೇ ಮಾರುಕಟ್ಟೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ನೀಡಲಿವೆ. ದೇಶದ ಯಾವುದೇ ಮಾರುಕಟ್ಟೆ ಯಲ್ಲಿನ ಉತ್ಪನ್ನಗಳ ಧಾರಣೆಯನ್ನು ರೈತರು ಪಡೆದುಕೊಳ್ಳಬಹುದಾಗಿದೆ.

ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ತರುವ ರೈತರಿಗೆ ಅಲ್ಲಿ ಲಭ್ಯವಾಗುವ ಧಾರಣೆ ಮಾತ್ರ ತಿಳಿಯುತ್ತಿತ್ತು.  ಅದೇ ಉತ್ಪನ್ನಕ್ಕೆ ಬೇರೆ ಮಾರುಕಟ್ಟೆಗಳಲ್ಲಿ ಲಭ್ಯವಾಗಿರುವ ಧಾರಣೆ ಕುರಿತು ಕನಿಷ್ಠ ಮಾಹಿತಿ ಸಿಗುತ್ತಿರಲಿಲ್ಲ. ಇದರಿಂದಾಗಿ ವರ್ತಕರು ನಿಗದಿ ಮಾಡುತ್ತಿದ್ದ ಧಾರಣೆಗೆ ಉತ್ಪನ್ನ ಮಾರಾಟ ಮಾಡುವುದು ಅನಿವಾರ್ಯವಾಗಿತ್ತು.
ಸದ್ಯ ರಾಜ್ಯದ ಆಯ್ದ ಕೃಷಿ ಮಾರುಕಟ್ಟೆಗಳನ್ನು ಸರ್ಕಾರ ಆನ್ ಲೈನ್ ವ್ಯವಸ್ಥೆಗೆ ಒಳಪಡಿಸಿದೆ.

ADVERTISEMENT

ರೈತರಿಗೆ ಸುಲಭವಾಗಿ ಮಾಹಿತಿ ಸಿಗುವಂತಾಗಲು ನವೀನ ತಂತ್ರಜ್ಞಾನವನ್ನು ಮಂಡಳಿ ಅಳವಡಿಸಿಕೊಂಡಿದೆ. ಕೃಷಿ ಮಾರಾಟ ವಾಹಿನಿಯಿಂದ ರೈತರು ಮಾತ್ರವಲ್ಲದೇ ವರ್ತಕರು, ಸಾರ್ವಜನಿಕರು ಸಹ ಮಾಹಿತಿ ಪಡೆಯಬಹುದಾಗಿದೆ. ಕಿಯೋಸ್ಕ್‌ ಯಂತ್ರದಲ್ಲಿ ಕೃಷಿ ಮಾರಾಟ ವಾಹಿನಿ ಎಂಬ ಮುಖ ಪುಟ ಸದಾ ತೆರೆದುಕೊಂಡಿರುತ್ತದೆ.
ಮೌಸ್ ಹಾಗೂ ಬೆರಳಚ್ಚು ಸ್ಪರ್ಶ ದಿಂದ ಬಳಸಲು ಅವಕಾಶವಿದೆ. ಮುಖ ಪುಟದಲ್ಲಿ 18 ವಿಧದ ಮಾಹಿತಿಗಳನ್ನು ಅಳವಡಿಸಿದೆ.

ಕೊಟ್ಟೂರು ಎಪಿಎಂಸಿಗೆ 4 ಕಿಯೋಸ್ಕ್‌ ಯಂತ್ರಗಳು ಬಂದಿವೆ. ಇವು ಗಳಲ್ಲಿ ಒಂದನ್ನು ಕಚೇರಿ, ಮಾರುಕಟ್ಟೆ ಯ ಎರಡು ದ್ವಾರ ಬಾಗಿಲಿನ ಚೆಕ್ ಪೋಸ್ಟಗಳಲ್ಲಿ ತಲಾ ಒಂದು, ಕೂಡ್ಲಿಗಿ ಉಪ ಮಾರುಕಟ್ಟೆಯಲ್ಲಿ ಒಂದು ಯಂತ್ರವನ್ನು ಅಳವಡಿಸಲಾಗಿದೆ. ಕಿಯೋಸ್ಕ್‌ ಯಂತ್ರಗಳಿಗೆ ನೆಟ್ ವರ್ಕ್‌ ಸಂಪರ್ಕ ನೀಡಿ ಅವುಗಳು ಕಾರ್ಯನಿರ್ವಹಿಸುವಂತಾಗಲು  ಸಿಬ್ಬಂದಿ ವ್ಯವಸ್ಥೆ ಮಾಡಲಾಗುತ್ತಿದೆ.

ಶೀಘ್ರ ಕಾರ್ಯ ನಿರ್ವಹಣೆ
ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯವರೇ ಕಿಯೋಸ್ಕ್‌ ಯಂತ್ರಗಳನ್ನು ಸರಬರಾಜು ಮಾಡಿದ್ದಾರೆ. ಕೊಟ್ಟೂರು ಎಪಿಎಂಸಿಗೆ 4 ಯಂತ್ರಗಳು ಬಂದಿದ್ದು, 3 ಕೊಟ್ಟೂರಿನಲ್ಲಿ, 1 ಕೂಡ್ಲಿಗಿಯಲ್ಲಿ ಅಳವಡಿಸುತ್ತೇವೆ. ಅವುಗಳಿಗೆ ನೆಟ್‌ವರ್ಕ್ ಸಂಪರ್ಕ ನೀಡಿ ಪರಿಶೀಲನೆ ನಡೆಸಿ ಪರೀಕ್ಷೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಕಿಯೋಸ್ಕ್‌ ಕಾರ್ಯ ನಿರ್ವಹಿಸಲಿವೆ ಎಂದು ಕಾರ್ಯದರ್ಶಿ ಗೋಪಾಲರೆಡ್ಡಿ ತಿಳಿಸಿದರು.

ರೈತರಿಗೆ ಅನುಕೂಲ
ರೈತರಿಗಾಗಿ ಕಿಯೋಸ್ಕ್‌ಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಗೆ ಸಂಬಂಧಿಸಿದ 18ಕ್ಕೂ ಹೆಚ್ಚು ಅಂಶಗಳ ಬಗ್ಗೆ ವಿವರವಾದ ಮಾಹಿತಿ ಇದೆ. ಕೈಗೊಂಡಿರುವ ಕಾಮಗಾರಿಗಳ ಟೆಂಡರ್, ಮಾರುಕಟ್ಟೆ ಸುಧಾರಣೆ, ಪ್ರಕಟಣೆಗಳ ಬಗ್ಗೆಯೂ ಈ ಮೂಲಕ ತಿಳಿಯಬಹುದು. ರೈತರು ಹಾಗೂ ವರ್ತಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.