ADVERTISEMENT

14 ಕಾಲೇಜು ಪ್ರವೇಶ ಸ್ಥಗಿತಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 12:29 IST
Last Updated 12 ಜುಲೈ 2013, 12:29 IST

ಬಳ್ಳಾರಿ: ಮೂಲ ಸೌಲಭ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಒಟ್ಟು 14 ಪದವಿ ಮತ್ತು  ಸ್ನಾತಕೋತ್ತರ ಪದವಿ ಕಾಲೇಜುಗಳ ಪ್ರಸಕ್ತ ಸಾಲಿನ ಪ್ರವೇಶಾವಕಾಶವನ್ನು ಸ್ಥಗಿತಗೊಳಿಸುವಂತೆ ವಿಶ್ವವಿದ್ಯಾಲಯವು ಬುಧವಾರ ಆದೇಶ ಹೊರಡಿಸಿದೆ.

ಏಳು ಬಿ.ಇಡಿ, ಮೂರು ಎಂ.ಇಡಿ, ಎರಡು ಎಂ.ಕಾಂ, ಎರಡು ಎಂ.ಎಸ್.ಡಬ್ಲ್ಯೂ ಕಾಲೇಜುಗಳ ಪ್ರವೇಶವನ್ನು ರದ್ದುಪಡಿಸಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜಪ್ಪ ಹೊಸಮನೆ ಆದೇಶಿಸಿದ್ದಾರೆ.

ಸ್ಥಳೀಯ ಪರಿಶೀಲನಾ ಸಮಿತಿ ಹಾಗೂ ಏಕ ಸದಸ್ಯ ಸಮಿತಿಗಳು ಪರಿಶೀಲನೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿನ ಶಿಫಾರಸಿನ ಮೇರೆಗೆ ಜುಲೈ 9ರಂದು ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಕೂಡ್ಲಿಗಿಯ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯ, ಲಕ್ಷ್ಮಿ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ, ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಎಸ್.ಎ. ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯ, ಕೊಪ್ಪಳದ ರಾಜೀವ್‌ಗಾಂಧಿ ರೂರಲ್ ಕಾಲೇಜ್ ಆಫ್ ಎಜುಕೇಷನ್, ಬಳ್ಳಾರಿಯ ರಾಯಲ್ ಮಹಾವಿದ್ಯಾಲಯ, ಕುಷ್ಟಗಿಯ ಜೆ.ಚಂದ್ರಶೇಖರ್ ಶಿಕ್ಷಣ ಮಹಾವಿದ್ಯಾಲಯ, ಕೊಟ್ಟೂರಿನ ತುಂಗಾಭದ್ರಾ ಬಿ.ಇಡಿ ಕಾಲೇಜು, ಕೊಪ್ಪಳದ ಆರ್‌ಡಿಟಿಇ ಸಂಸ್ಥೆಯ ಗುಳಗಣ್ಣವರ್ ಇನ್ಸ್‌ಟಿಟ್ಯೂಟ್ ಆಫ್ ಎಂ.ಕಾಂ, ಬಳ್ಳಾರಿಯ ಜ್ಞಾನಜ್ಯೋತಿ ಎಂ.ಎಸ್.ಡಬ್ಲ್ಯೂ ಕಾಲೇಜು, ಶಶಾಂಕ ಇನ್ಸ್‌ಟಿಟ್ಯೂಟ್ ಆಫ್ ಎಂಎಸ್‌ಡಬ್ಲ್ಯೂ, ಕೊಪ್ಪಳದ ಆರ್‌ಡಿಟಿಇ ಸಂಸ್ಥೆಯ ಎಂಎಸ್‌ಡಬ್ಲ್ಯೂ ಕಾಲೇಜು ಹಾಗೂ ರಾಜೀವ್‌ಗಾಂಧಿ ಎಂ.ಇಡಿ ಪಿಜಿ ಸೆಂಟರ್ ಹಾಗೂ ಇನ್ನೂ ಎರಡು ಕಾಲೇಜುಗಳ ಪ್ರಸಕ್ತ ಸಾಲಿನ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ನಿಯಮಗಳ ಅನುಸಾರ ಅಗತ್ಯ ಕ್ರಮ ಕೈಗೊಳ್ಳದ ಈ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ ಎಂದು ಸಮಿತಿಗಳು ವರದಿ ಸಲ್ಲಿಸಿದ್ದವು.

ಈ ಕಾಲೇಜುಗಳಲ್ಲಿ ಅಗತ್ಯ ಪಾಠೋಪಕರಣ, ಪೀಠೋಪಕರಣ, ಗ್ರಂಥಾಲಯ,  ಅರ್ಹ ಉಪನ್ಯಾಸಕರು ಇರಲಿಲ್ಲ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ಇರಲಿಲ್ಲ. ಹಾಗೂ ಇನ್ನೂ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದರೂ ತರಗತಿಗಳೇ ನಡೆಯುತ್ತಿರಲಿಲ್ಲ ಎಂಬ ಕಾರಣದಿಂದ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ಈಗಾಗಲೇ ನೀಡಲಾದ ಪ್ರವೇಶವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.