ADVERTISEMENT

‘ಚಿಲವಾರು ಬಂಡಿ ಯೋಜನೆಗೆ ಭೂಮಿ ಪೂಜೆ ಸುಳ್ಳು’

ಶಾಸಕ ಎಸ್‌.ಭೀಮಾನಾಯ್ಕ ಆರೋಪ, ಟೆಂಡರ್‌ ನೀಡಿಕೆ ಸಾಬೀತುಪಡಿಸಲು ಸವಾಲು

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 11:48 IST
Last Updated 4 ಜನವರಿ 2018, 11:48 IST

ಹಗರಿಬೊಮ್ಮನಹಳ್ಳಿ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿಲವಾರು ಬಂಡಿ ಏತ ನೀರಾವರಿ ಯೋಜನೆಗೆ ತರಾತುರಿಯಲ್ಲಿ ಸುಳ್ಳು ಭೂಮಿ ಪೂಜೆ ಮಾಡುವ ಮೂಲಕ ಹಿಂದಿನ ಶಾಸಕ ಕೆ.ನೇಮಿರಾಜ ನಾಯ್ಕ, ಆ ಭಾಗದ ಜನರನ್ನು ವಂಚಿಸಿದ್ದಾರೆ ಎಂದು ಶಾಸಕ ಎಸ್‌.ಭೀಮಾನಾಯ್ಕ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಲವಾರು ಬಂಡಿ ಏತ ನೀರಾವರಿಗೆ 2013ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ₹ 20 ಕೋಟಿ ಅನುದಾನ ಬಂದಿದೆ ಎಂದು ಸುಳ್ಳು ಹೇಳಿ ವಿವಿಧ ಮಠಾಧೀಶರನ್ನು ಆಹ್ವಾನಿಸಿ ಭೂಮಿ ಪೂಜೆ ಮಾಡಿಸಿದ್ದರು. ಅಂದು ಚಿಲವಾರು ಬಂಡಿ ಯೋಜನೆಯ ಟೆಂಡರ್ ಯಾವ ಗುತ್ತಿಗೆದಾರರಿಗೆ ನೀಡಲಾಗಿತ್ತು ಎನ್ನುವುದನ್ನು ಮಾಜಿ ಶಾಸಕರು ಬಹಿರಂಗ ಪಡಿಸಿದರೆ ₹10 ಲಕ್ಷ ಬಹುಮಾನ ನೀಡಲಾಗುವುದು. ಜತೆಗೆ ಮಠಾಧೀಶರನ್ನು ಕರೆದುಕೊಂಡು ಹೋಗಿ ಭೂಮಿ ಪೂಜೆ ಮಾಡಿಸಿದ್ದು ತಪ್ಪಾಗಿದೆ ಎಂದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಡಿಸೆಂಬರ್‌ 18ರಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರಿ ನೀರಾವರಿ ಇಲಾಖೆಯಿಂದ ನೀಡಿದ ₹60ಕೋಟಿ ಅಂದಾಜು ಮೊತ್ತದ ಅನುದಾನದಲ್ಲಿ ಭೂಮಿಪೂಜೆ ಮಾಡಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಹೊರತು ಬಿಜೆಪಿಯದ್ದಲ್ಲ. ಮಾಲವಿ ಜಲಾಶಯಕ್ಕೆ ಕುಡಿಯುವ ನೀರಿಗಾಗಿ ಅನುದಾನ ಒದಗಿಸಿದ್ದಾರೆ ರೈತರಿಗಲ್ಲ ಎಂದು ನೇಮಿರಾಜನಾಯ್ಕ ರೈತ ವಿರೋಧಿ ಹೇಳಿಕೆ ನೀಡಿದ್ದಾರೆ. ಜಲಾಶಯದ ಶಾಶ್ವತ ನೀರಾವರಿಗಾಗಿ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿ ಸಿಎಂ ಭೂಮಿ ಪೂಜೆ ನೆರವೇರಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಬಜೆಟ್ ಪುಸ್ತಕ ಪ್ರದರ್ಶಿಸಿದರು.

ADVERTISEMENT

ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ಮುಖಂಡರಾದ ಅಕ್ಕಿ ತೋಟೇಶ್‌, ಬಿ.ದೇವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.