ADVERTISEMENT

ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ಇಂದು

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 8:59 IST
Last Updated 5 ಜನವರಿ 2018, 8:59 IST

ಬಳ್ಳಾರಿ: ಜಿಲ್ಲೆಯಲ್ಲಿ ಬುಧವಾರ ಹಡಗಲಿಯಿಂದ ಆರಂಭವಾಗಿರುವ ಬಿಜೆಪಿ ಪರಿವರ್ತನಾ ಯಾತ್ರೆ ಎರಡನೇ ದಿನ ನಗರದಲ್ಲಿ ನಡೆಯಲಿದ್ದು ಬೃಹತ್‌ ಸಮಾವೇಶಕ್ಕೆ ಸಾಕ್ಷಿಯಾಗಲಿದೆ.

ಸಮಾವೇಶ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅಲ್ಲಿ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು ಮತ್ತು ಮುಖಂಡರ ಕಟೌಟ್‌ಗಳಿಂದ ರಾರಾಜಿಸುತ್ತಿವೆ. ಎಲ್ಲ ದಾರಿಯೂ ಬಿಜೆಪಿ ಸಮಾವೇಶದೆಡೆಗೆ ಎಂಬ ಸನ್ನಿವೇಶ ನಿರ್ಮಾಣಗೊಂಡಿದೆ.

ವಾಗ್ದಾಳಿ ಮುಂದುವರಿಕೆ: ‘ಯಾತ್ರೆಯ ಮೊದಲ ದಿನದಿಂದಲೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ನಗರದ ಸಮಾವೇಶದಲ್ಲೂ ಕಾಂಗ್ರೆಸ್‌ ವಿರುದ್ಧ ತೊಡೆ ತಟ್ಟಲಿದ್ದಾರೆ. ಕಾಂಗ್ರೆಸ್‌ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವುದೇ ನಮ್ಮ ಗುರಿ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ ತಿಳಿಸಿದರು.

ADVERTISEMENT

ಮೂರು ಕಡೆ ಯಾತ್ರೆ: ಬೆಳಿಗ್ಗೆ ಸಮಾವೇಶಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ಜಾಥಾ ನಡೆಯಲಿದೆ. ಸಮಾವೇಶದ ಬಳಿಕ ಯಾತ್ರೆ ಸಿರುಗುಪ್ಪಕ್ಕೆ ಅಲ್ಲಿಂದ ಕಂಪ್ಲಿಗೆ ತೆರಳಲಿದೆ. ಮೂರೂ ಕಡೆ ಯಾತ್ರೆ ಮುಗಿದ ಬಳಿಕ ಮುಖಂಡರು ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಅನಧಿಕೃತ ಬ್ಯಾನರ್ ತೆರವು: ದಿವ್ಯ ಪ್ರಭು
ಬಳ್ಳಾರಿ: ‘ಬಿಜೆಪಿ ಸಮಾವೇಶದ ಸಲುವಾಗಿ ಅನಧಿಕೃತವಾಗಿ ಹಲವೆಡೆ ಅಳವಡಿಸಿರುವ ಬ್ಯಾನರ್‌ಗಳನ್ನು ತೆರವುಗೊಳಿಸಲಾಗುವುದು’ ಎಂದು ಪಾಲಿಕೆ ಆಯುಕ್ತೆ ಜೆ.ಆರ್‌.ಜೆ. ದಿವ್ಯಪ್ರಭು ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಬ್ಯಾನರ್‌ಗಳನ್ನು ಅಳವಡಿಸಲು ಅನುಮತಿ ನೀಡದೇ ಇರುವ ಸ್ಥಳಗಳಲ್ಲೂ ಅಳವಡಿಸಿರುವುದನ್ನು ನಮ್ಮ ಸಿಬ್ಬಂದಿ ಗುರುತಿಸಿದ್ದಾರೆ. ಅವುಗಳನ್ನು ತೆರವುಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.