ADVERTISEMENT

‘25ರೊಳಗೆ ಎಲ್ಲ ಮನೆಗೂ ಶೌಚಾಲಯ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:51 IST
Last Updated 6 ಜನವರಿ 2018, 6:51 IST

ಸಂಡೂರು: ‘ಗಣರಾಜ್ಯೋತ್ಸವದೊಳಗೆ ತಾಲ್ಲೂಕಿನ ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸಲು ಎಲ್ಲ ಅಧಿಕಾರಿಗಳೂ ಶ್ರಮಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆ.ಎಂ. ಅನ್ನದಾನಸ್ವಾಮಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘2012ರ ಸಮೀಕ್ಷೆಯಲ್ಲಿ ಗುರುತಿಸಲಾದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಿಸುವಲ್ಲಿ ಗುರಿ ಮುಟ್ಟಿರುವ ಭುಜಂಗನಗರ, ದೇವಗಿರಿ, ತೋರಣಗಲ್‌, ವಡ್ಡು ಹಾಗೂ ಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ತಲಾ ₹25 ಲಕ್ಷ ವಿಶೇಷ ಅನುದಾನ ನೀಡಲಿದೆ. ಹೀಗಾಗಿ ಇನ್ನಿತರ ಪಂಚಾಯಿತಿಗಳೂ ಗುರಿ ಮುಟ್ಟಲು ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದರು.

‘ನೋಡಲ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದು ಜನರಲ್ಲಿ ಜಾಗೃತಿ ಮೂಡಿಸಿ ಗುರಿ ಸಾಧನೆಗೆ ಶ್ರಮಿಸಬೇಕು. ನಿರ್ಲಕ್ಷ್ಯ ತೋರಿಸಿದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ‘ಮುಂಗಾರು ಕೃಷಿ ಚಟುವಟಿಕೆಗಳು ಬಹುತೇಕ ಮುಕ್ತಾಯವಾಗಿರುವುದರಿಂದ, ನರೇಗಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಆಸ್ತಿ ಸೃಜನೆಗೆ ಒತ್ತು ಕೊಡಬೇಕು’ ಎಂದರು.

ADVERTISEMENT

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗೌರಾ ಮುಕುಂದರಾವ್, ‘ಸಮಗ್ರ ಕೃಷಿ ಪದ್ಧತಿ ಯೋಜನೆ ಅಡಿಯಲ್ಲಿ ರೈತರಿಗೆ ₹1 ಲಕ್ಷದವರೆಗೆ ಅನುದಾನ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಿಂದ 10 ರೈತರನ್ನು ಆಯ್ಕೆ ಮಾಡಿ, ಗ್ರಾಮ ಸಭೆಯ ಅನುಮೋದನೆಯೊಂದಿಗೆ ಕಳುಹಿಸಬೇಕು. ಇದುವರೆಗೆ ಕೇವಲ 13 ಪಂಚಾಯಿತಿಗಳಿಂದ ಪಟ್ಟಿ ಬಂದಿದೆ’ ಎಂದು ಗಮನ ಸೆಳೆದರು.

‘ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 4,215 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಎರೆ ಹುಳು ತೊಟ್ಟಿ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ನೀಡಬೇಕು’ ಎಂದರು.

ಕೂಡಲೇ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಕಾರ್ಯನಿರ್ವಹಣಾಧಿಕಾರಿಯು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯಿತಿ ಅಧ್ಯಕ್ಷೆ ಡಿ. ಫರ್ಜಾನಾ ಗೌಸ್ ಅಜಂ, ‘ಕೃಷಿ ಉಪಕರಣಗಳ ಸಹಾಯ ಧನ ಪಡೆದವರ ಪಟ್ಟಿಯನ್ನು ನೀಡಿ’ ಎಂದು ಅಧಿಕಾರಿಗೆ ಸೂಚಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಗಂಗೂಬಾಯಿ ಇದ್ದರು.

₹5,000 ಧನ ಸಹಾಯ

‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಮೊದಲ ಹೆರಿಗೆಗೆ ಮೂರು ಕಂತುಗಳಲ್ಲಿ ಒಟ್ಟು ₹ 5000 ಧನ ಸಹಾಯವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಅಂಗನವಾಡಿಗಳಲ್ಲಿ ಅರ್ಜಿಗಳು ಲಭ್ಯ’ ಎಂದು ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸೋಮಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.