ADVERTISEMENT

ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೇ ಹೆಚ್ಚು!

ಕೆ.ನರಸಿಂಹ ಮೂರ್ತಿ
Published 17 ಜನವರಿ 2018, 7:12 IST
Last Updated 17 ಜನವರಿ 2018, 7:12 IST
ಬಳ್ಳಾರಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಜನರಿಂದ ಅರ್ಜಿ ಪಡೆಯಲು ಸಿಬ್ಬಂದಿ ಕಾಯುತ್ತಾ ಕುಳಿತಿದ್ದರು.
ಬಳ್ಳಾರಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಜನರಿಂದ ಅರ್ಜಿ ಪಡೆಯಲು ಸಿಬ್ಬಂದಿ ಕಾಯುತ್ತಾ ಕುಳಿತಿದ್ದರು.   

ಬಳ್ಳಾರಿ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತವು ಪ್ರತಿ ಮಂಗಳವಾರ ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರಕಿಲ್ಲ. ಪರಿಣಾಮವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮ್ಮನೆ ಕಾಯುತ್ತಾ ಕುಳಿತುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.

ಡಿ.26ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊದಲ ಬಾರಿಗೆ ಜನಸ್ಪಂದನ ನಡೆದ ಸಂದರ್ಭದಲ್ಲಿ ನೂರಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ನಂತರದ ಮೂರು ಸಭೆಗಳು ತಾಲ್ಲೂಕು ಮಟ್ಟದಲ್ಲಿ ನಡೆದ ವೇಳೆ ಸಲ್ಲಿಕೆಯಾದ ಅರ್ಜಿಗಳು ಬೆರಳೆಣಿಕೆಯಷ್ಟು ಮಾತ್ರ. ವಾರದಿಂದ ವಾರಕ್ಕೆ ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ.

ಅಮಾವಾಸ್ಯೆ ಕಾರಣ: ಈ ಹಿಂದಿನ ಸಭೆಗಳಿಗಿಂತಲೂ, ಈ ಮಂಗಳವಾರ ನಡೆದ ಸಭೆಯ ಕುರಿತು ಕೆಲವು ಅಧಿಕಾರಿಗಳು, ಸಿಬ್ಬಂದಿ ಬೇಸರವನ್ನೂ ವ್ಯಕ್ತಪಡಿಸಿದರು.

ADVERTISEMENT

‘ಈ ಭಾಗದಲ್ಲಿ ಪ್ರತಿ ಅಮಾವಾಸ್ಯೆಯಂದು ಜನ ಮನೆಗಳಲ್ಲಿ ಮತ್ತು ವಾಹನಗಳಿಗೆ ವಿಶೇಷ ಪೂಜೆ ಮಾಡುತ್ತಾರೆ. ಯಾವುದೇ ಶುಭ ಕಾರ್ಯವನ್ನೂ ಮಾಡುವುದಿಲ್ಲ. ಮನೆಯಿಂದ ಹೊರಕ್ಕೂ ಬರುವುದಿಲ್ಲ. ಹೀಗಾಗಿ ನಮ್ಮ ಸಭೆಗೂ ಹೆಚ್ಚು ಮಂದಿ ಬಂದಿಲ್ಲ’ ಎಂದು ಗ್ರೇಡ್‌ 2 ತಹಶೀಲ್ದಾರ್‌ ಹೊನ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಯುತ್ತೇವೆ: ‘ಜನ ಬರಲಿಲ್ಲ ಎಂದು ನಾವು ಎದ್ದುಹೋಗುವುದಿಲ್ಲ. ನಿಗದಿಯಾದಂತೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅವರಿಗಾಗಿ ಕಾಯುತ್ತೇವೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಸಾಧ್ಯವಾದರೆ ಸ್ಥಳದಲ್ಲೇ ಇತ್ಯರ್ಥ ಪಡಿಸುತ್ತೇವೆ. ಆಗದಿದ್ದರೆ ಸಮಯ ನಿಗದಿ ಮಾಡಿ ಹೇಳುತ್ತೇವೆ. ಈ ಹಿಂದಿನ ಸಭೆಗಳಲ್ಲಿ ಹೆಚ್ಚು ಜನ ಪಾಲ್ಗೊಂಡಿದ್ದರು’ ಎಂದರು.

ಸಭೆಯ ವೇದಿಕೆಯಲ್ಲಿ ಹೊನ್ನಮ್ಮ ಅವರೊಂದಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ, ಅಕ್ಷರ ದಾಸೋಹ ಅಧಿಕಾರಿ ಸಣ್ಣಗಂಗಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹುಸೇನ್‌ಸಾಬ್‌ ಮತ್ತು ಕುರುಗೋಡು ವಿಶೇಷ ತಹಶೀಲ್ದಾರ್‌ ಎಂ,ಬಸವರಾಜ್ ಅವರೂ ಕಾಯುತ್ತಿದ್ದರು. ವೇದಿಕೆಯ ಮತ್ತೊಂದು ಬದಿಯಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಕುಳಿತಿದ್ದರು. ಮುಂಭಾಗದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಇದ್ದರು. ಜನರಿಗಾಗಿ ಜೋಡಿಸಿದ್ದ ಕುರ್ಚಿಗಳಲ್ಲಿ ಈ ಸಿಬ್ಬಂದಿ ಕುಳಿತಿದ್ದರು.

ಕಾದು ಕುಳಿತರು 50 ಸಿಬ್ಬಂದಿ!
ಬಳ್ಳಾರಿ: ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೇವಲ ಆರು ಅರ್ಜಿಗಳು ಸಲ್ಲಿಕೆಯಾದರೆ, ವಿವಿಧ ಇಲಾಖೆಗಳ ಸುಮಾರು 50 ಸಿಬ್ಬಂದಿ ಜನರಿಗಾಗಿ ಕಾಯುತ್ತಿದ್ದರು. ಬೇರೆ ಯಾವುದೇ ಕೆಲಸವೂ ಇಲ್ಲದಿದ್ದುದರಿಂದ ಲೋಕಾಭಿರಾಮವಾಗಿ ಮಾತನಾಡುತ್ತಿದ್ದುದು ಕಂಡುಬಂತು.

* * 

ರಾಜ್ಯ ಸರ್ಕಾರದ ಸೂಚನೆ ಇರುವುದರಿಂದ ಅಮಾವಾಸ್ಯೆಯ ಕಾರಣಕ್ಕೆ ಸಭೆಯನ್ನು ಮುಂದೂಡಲು ಆಗುವುದಿಲ್ಲ.
ಹೊನ್ನಮ್ಮ
ಗ್ರೇಡ್‌ 2 ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.