ADVERTISEMENT

ಹೂವಿನಹಡಗಲಿ: ಶಿಥಿಲಾವಸ್ಥೆಯಲ್ಲಿ ಬ್ರಿಟಿಷ್ ಕಾಲದ ಕಟ್ಟಡ

ನಿರ್ವಹಣೆ ನಿರ್ಲಕ್ಷ್ಯ: ಹಾಳು ಕೊಂಪೆಯಾದ ಹಳೇ ಆಡಳಿತಸೌಧ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 5:07 IST
Last Updated 10 ಜೂನ್ 2025, 5:07 IST
ಹೂವಿನಹಡಗಲಿಯಲ್ಲಿರುವ ಬ್ರಿಟಿಷ್ ಕಟ್ಟಡದ ಒಳಾಂಗಣ ವಿನ್ಯಾಸ
ಹೂವಿನಹಡಗಲಿಯಲ್ಲಿರುವ ಬ್ರಿಟಿಷ್ ಕಟ್ಟಡದ ಒಳಾಂಗಣ ವಿನ್ಯಾಸ   

ಹೂವಿನಹಡಗಲಿ: ಪಟ್ಟಣದಲ್ಲಿ ಬ್ರಿಟಿಷ್ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ಹಳೇ ತಾಲ್ಲೂಕು ಕಚೇರಿ (ಹಳೇ ಪೊಲೀಸ್ ಠಾಣೆ) ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿದೆ.

ಕಂದಾಯ ಇಲಾಖೆ ಅಧೀನದಲ್ಲಿರುವ ಈ ಕಟ್ಟಡ ಸುಭದ್ರವಾಗಿದ್ದರೂ ನಿರ್ವಹಣೆ ಇಲ್ಲದೇ ಹಾಳು ಕೊಂಪೆಯಾಗಿದೆ. ಐತಿಹಾಸಿಕ ಕಟ್ಟಡ ಕಾಣಿಸದಂತೆ ಗೂಡಂಗಡಿ, ಶೆಡ್ ಗಳು ಆಕ್ರಮಿಸಿಕೊಂಡಿವೆ. ಗೋಡೆಯಲ್ಲೇ ಆಲದ ಮರ ಬೆಳೆದಿದೆ. ಚಾವಣಿಯ ಮೇಲೆ ಗಿಡಗಂಟೆ ಬೆಳೆದು ಸೋರಲಾರಂಭಿಸಿದೆ. ಕಸ, ಕೊಳಕು ತುಂಬಿರುವ ಆವರಣ ಅಳಿದುಳಿದ ಸಾಮಗ್ರಿ ಎಸೆಯುವ ಗುಜರಿಯಂತಾಗಿದೆ.

1901ರಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಚೌಕಾಕೃತಿಯ ಬೃಹತ್ ಕಟ್ಟಡದಲ್ಲಿ ಆಡಳಿತ ಕಚೇರಿಗಳಿಗೆ ಬೇಕಾದಂತೆ ಕೋಣೆಗಳನ್ನು ನಿರ್ಮಿಸಲಾಗಿದೆ. ದೊಡ್ಡ ಗಾತ್ರದ ಗೋಡೆಗಳು, ಚಾವಣಿಯ ಭಾರ ಹೊತ್ತಿರುವ ದುಂಡಾಕೃತಿಯ ಪಿಲ್ಲರ್ ಗಳು ಗಟ್ಟಿಮುಟ್ಟಾಗಿವೆ. ಕಬ್ಬಿಣದ ಕಂಬಿಗಳ ಮೇಲೆ ಕಡಪ ಕಲ್ಲು ಹೊದಿಸಿ ಗಾರೆ ಗಚ್ಚಿನಿಂದ ಚಾವಣಿ ಹಾಕಲಾಗಿದೆ. ಗಾಳಿ, ಬೆಳಕಿಗಾಗಿ ಕಮಾನು ಆಕೃತಿಯ ವಿಶಾಲವಾದ ಕಿಟಕಿ, ಬಾಗಿಲು ಅಳವಡಿಸಲಾಗಿದೆ. ಕೋಣೆಗಳಿಗೆ ಮಳೆ ನೀರು ಸೋಂಕದಂತೆ ಹೆಂಚು ಹೊದಿಸಲಾಗಿದೆ.

ADVERTISEMENT

ಬೇಸಿಗೆಯಲ್ಲಿ ತಂಪು ಸೂಸುವ, ಚಳಿಗಾಲದಲ್ಲಿ ಬೆಚ್ಚಗಿರುವ ಈ ಕಟ್ಟಡವು ಅಲ್ಲಿರುವವರಿಗೆ ಹಿತಾನುಭವ ನೀಡುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಟ್ಟಡ ಬ್ರಿಟಿಷ್ ಸರ್ಕಾರದ ಆಡಳಿತ ಸೌಧವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರನ್ನು, ಕೈದಿಗಳನ್ನು ಬಂಧಿಸಿಡುವ ಜೈಲು ಆಗಿಯೂ ರೂಪಿಸಲಾಗಿತ್ತು. ಸ್ವಾತಂತ್ರ್ಯ ನಂತರ ಈ ಕಟ್ಟಡವು ತಹಶೀಲ್ದಾರ್ ಕಚೇರಿ, ಉಪ ಖಜಾನೆ, ಪೊಲೀಸ್ ಠಾಣೆಯಾಗಿ ಬಳಕೆಯಾಗಿದೆ. 15 ವರ್ಷಗಳ ಹಿಂದೆ ಪೊಲೀಸ್ ಠಾಣೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ನಿರ್ವಹಣೆ ಇಲ್ಲದೇ ದೈನೇಸಿ ಸ್ಥಿತಿ ತಲುಪಿದೆ.

ಸದ್ಯ ಈ ಕಟ್ಟಡವು ಗ್ರಾಮ ಆಡಳಿತಾಧಿಕಾರಿಗಳ ಸಂಘ, ನಿವೃತ್ತ ನೌಕರರ ಸಂಘ, ಗೃಹ ರಕ್ಷಕ ದಳದ ಕಚೇರಿಗಳಿಗೆ ಆಸರೆಯಾಗಿದೆ. ಐತಿಹಾಸಿಕ ಮಹತ್ವದ ಈ ಕಟ್ಟಡ ಸಂರಕ್ಷಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸದೇ ಇರುವುದರಿಂದ ಪಟ್ಟಣದ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಪಾರಂಪರಿಕ ಕಟ್ಟಡ ಮಾನ್ಯತೆ ನೀಡಿ’

ಸ್ವಾತಂತ್ರ್ಯ ಪೂರ್ವ ನಂತರದ ರೋಚಕ ಕಥೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಹೂವಿನಹಡಗಲಿಯ ಬ್ರಿಟಿಷ್ ಕಟ್ಟಡವನ್ನು ಸಂರಕ್ಷಣೆ ಮಾಡಿ ಪಾರಂಪರಿಕ ಕಟ್ಟಡದ ಮಾನ್ಯತೆ ನೀಡಬೇಕು ಎಂದು ಜಿಬಿಆರ್ ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಪಟ್ಟಣ ಹೃದಯ ಭಾಗದಲ್ಲಿರುವ ಈ ಕಟ್ಟಡ ನವೀಕರಣಗೊಳಿಸಿ ಡಿಜಿಟಲ್ ಲೈಬ್ರರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ತೆರೆದರೆ ವಿದ್ಯಾರ್ಥಿಗಳಿಗೆ ಯುವಜನರಿಗೆ ಅನುಕೂಲವಾಗುತ್ತದೆ. ಜಿಲ್ಲಾಡಳಿತ ಈ ಕುರಿತು ಚಿಂತನೆ ಮಾಡಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಅನುದಾನದ ಕೊರತೆಯಿಂದ ನಿರ್ವಹಣೆ ಸಾಧ್ಯವಾಗಿಲ್ಲ. ಕಟ್ಟಡ ನವೀಕರಣಕ್ಕೆ ಅನುದಾನ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಜಿ. ಸಂತೋಷಕುಮಾರ್, ತಹಶೀಲ್ದಾರ್ ಹಡಗಲಿ
ಕಟ್ಟಡದ ಗೋಡೆಯಲ್ಲಿ ಆಲದ ಮರ ಬೆಳೆದಿರುವುದು
ಹೂವಿನಹಡಗಲಿ ಹಳೇ ಪೊಲೀಸ್ ಠಾಣೆ ಹಾಳು ಕೊಂಪೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.