ADVERTISEMENT

ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ

₹243.35 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 9:53 IST
Last Updated 9 ನವೆಂಬರ್ 2019, 9:53 IST

ಹೊಸಪೇಟೆ: ತಾಲ್ಲೂಕಿನ ಪಾಪಿನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಏತ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗೆ ಜಲಸಂಪನ್ಮೂಲ ಇಲಾಖೆ ಅನುಮೋದನೆ ನೀಡಿದೆ.

ಒಟ್ಟು ₹243.35 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ಮೊದಲ ಹಂತದಲ್ಲಿ ₹75 ಕೋಟಿ ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ನದಿಯಿಂದ ನೀರನ್ನೆತ್ತಿ 18 ಕೆರೆ ಹಾಗೂ ನಾಲ್ಕು ಚೆಕ್‌ ಡ್ಯಾಂಗಳನ್ನು ತುಂಬಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ.

ತಾಲ್ಲೂಕಿನ ಕಾರಿಗನೂರಿನಿಂದ ಭುವನಹಳ್ಳಿ ವರೆಗೆ ಮಳೆಯಾಶ್ರಿತ ಪ್ರದೇಶವಿದ್ದು, ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಮಣಿದಿರುವ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ADVERTISEMENT

‘ಸರ್ಕಾರ ರೈತರ ಹೋರಾಟಕ್ಕೆ ಮಣಿದು ಯೋಜನೆ ಜಾರಿಗೆ ತರಲು ಮುಂದಾಗಿರುವುದು ಖುಷಿ ತಂದಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್‌ ಪ್ರತಿಕ್ರಿಯಿಸಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿಅನರ್ಹ ಶಾಸಕ ಆನಂದ್‌ ಸಿಂಗ್‌ ಸದ್ದಿಲ್ಲದೇ ಈ ಕೆಲಸ ಮಾಡಿಸಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಹೋದ ವಿಧಾನಸಭೆ ಚುನಾವಣೆಯಲ್ಲಿ ಸಿಂಗ್‌ ನೀರಾವರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.