ADVERTISEMENT

ಕೆಲಸ ಮಾಡಿದರೂ ಜನರ ವಿಶ್ವಾಸ ಗಳಿಸಲು ಆಗಲಿಲ್ಲ: ಉಗ್ರಪ್ಪ

ಕೆ.ನರಸಿಂಹ ಮೂರ್ತಿ
Published 24 ಮೇ 2019, 14:15 IST
Last Updated 24 ಮೇ 2019, 14:15 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಬಳ್ಳಾರಿ: 2018ರ ಉಪಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದ ವಿ.ಎಸ್‌.ಉಗ್ರಪ್ಪ ಅವರ ಆ ನಿರೀಕ್ಷೆ ಮತ್ತು ವಿಶ್ವಾಸಗಳನ್ನು ದೂರ ತಳ್ಳಿ ಕ್ಷೇತ್ರದ ಮತದಾರರು ಬಿಜೆಪಿಯ ವೈ.ದೇವೇಂದ್ರಪ್ಪ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆರು ತಿಂಗಳ ಕಡಿಮೆ ಅವಧಿಯಲ್ಲಿ ಉಗ್ರಪ್ಪ, ಅಭಿವೃದ್ಧಿ ಕೇಂದ್ರಿತ ಚಿಂತನೆ ಮತ್ತು ಕೆಲಸಗಳಿಂದ, ಜನಪರವಾದ ನಿಲುವುಗಳಿಂದಲೇ ಜನಪ್ರಿಯರಾಗಿದ್ದರು. ‘ಇಂಥ ಸಂಸದರೇ ನಮಗೆ ಬೇಕಾಗಿದ್ದರು’ ಎಂಬ ಮಾತುಗಳನ್ನೂ ಜನ ಆಡಿದ್ದರು. ಆದರೆ ಚುನಾವಣೆ ಎಲ್ಲವನ್ನೂ ಬದಲಾಯಿಸಿಬಿಟ್ಟಿದೆ. ಅರ್ಧಲಕ್ಷಕ್ಕೂ ಅಧಿಕ ಮತಗಳಿಂದ ಉಗ್ರಪ್ಪ ಸೋತರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಉಗ್ರಪ್ಪ, ಸೋಲು ಮೂಡಿಸಿದ ವ್ಯಥೆಯನ್ನೂ ಮೀರಿ ಮತದಾರರ ಕುರಿತು ಕಾಳಜಿ ವ್ಯಕ್ತಪಡಿಸಿದರು. ‘ಬಳ್ಳಾರಿಯ ಮತದಾರರು ಮುಗ್ದರು, ದೇವರಂಥವರು, ಬಹಳ ಒಳ್ಳೆಯವರು. ಆದರೆ ಸಾಕಷ್ಟು ಕೆಲಸ ಮಾಡಿದರೂ ಅವರ ವಿಶ್ವಾಸವನ್ನು ಗಳಿಸಲು ಆಗಲಿಲ್ಲ’ ಎಂದು ವಿಷಾದಿಸಿದರು.

ADVERTISEMENT

* ಸೋಲನ್ನು ಹೇಗೆ ವಿಶ್ಲೇಷಿಸುತ್ತೀರಿ? ಇದು ನಿಮ್ಮ ರಾಜಕೀಯ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು?

ಯಾಕೆ ಸೋತೆ ಎಂಬುದು ಸಾವಿರ ಡಾಲರ್‌ ಪ್ರಶ್ನೆ. ಉತ್ತರ ಸಿಕ್ಕಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ಜನರ ವಿಶ್ವಾಸ ಗಳಿಸಲು ಆಗಲಿಲ್ಲ ಎಂಬ ನೋವು ಇದೆ.

ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು. ನನಗೆ ಕಡಿಮೆ ಮತಗಳೇನೂ ದೊರಕಿಲ್ಲ. 5,60,681 ಮತಗಳು ದೊರಕಿವೆ. ನನ್ನನ್ನು ನಂಬಿದ ಆ ಮತದಾರರಷ್ಟೇ ಅಲ್ಲದೇ ಇಡೀ ಕ್ಷೇತ್ರದ ಮತದಾರರ ಹಿತ ಕಾಪಾಡಬೇಕು. ಸೋತೆನೆಂದು ಬೇರೆಲ್ಲಿಗೂ ಹೋಗುವುದಿಲ್ಲ. ನನ್ನ ಕರ್ಮ ಭೂಮಿ ಬಳ್ಳಾರಿಯೇ ಹೊರತು. ಬೆಂಗಳೂರೋ, ಪಾವಗಡವೋ, ತುಮಕೂರೋ ಖಂಡಿತಾ ಅಲ್ಲ.

* ಪಶ್ಚಿಮ ತಾಲ್ಲೂಕುಗಳಲ್ಲಿ ಗಳಿಸಿದ ಮತ ಕಡಿಮೆಯಾಗಿದ್ದು ಸೋಲಿಗೆ ಕಾರಣವೇ?

ನಿರೀಕ್ಷಿಸಿರದಿದ್ದರೂ ನಗರ, ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಮತ ಗಳಿಸಿದೆ. ಬಿಜೆಪಿ ಪ್ರಭಾವವುಳ್ಳ ಕಂಪ್ಲಿಯಲ್ಲೂ ಹೆಚ್ಚಿನ ಮತ ದೊರಕಿತು. ಆದರೆ ಜಿಲ್ಲಾ ಕೇಂದ್ರದಿಂದ ದೂರವಿರುವ ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ವಿಜಯನಗರ ಕ್ಷೇತ್ರಗಳಲ್ಲಿ ಮತ ಹೆಚ್ಚು ದೊರಕಿಲ್ಲ. ಅಲ್ಲಿನ ಮತದಾರರು ಹೆಚ್ಚು ಒಳ್ಳೆಯವರು. ಆದರೆ ಹಣವಿದ್ದರಷ್ಟೇ ಮತ ಗಳಿಸಬಹುದು ಎಂಬ ನಂಬಿಕೆಯನ್ನು ಅವರು ದೂರ ಮಾಡಬೇಕು, ಸೋಲಿಗಾಗಿ ಪಕ್ಷದ ಯಾರನ್ನೂ ನಾನು ಯಾರನ್ನೂ ದೂರಲಾರೆ.

* ಸೋಲಿನ ಕುರಿತು ಮೈತ್ರಿ ಮುಖಂಡರು ಚರ್ಚಿಸಿದ್ದಾರೆಯೇ?

ಸೋಲಿನ ಕುರಿತು ಚರ್ಚಿಸಿ ಏನು ಪ್ರಯೋಜನ? ಸಾಕಷ್ಟು ನೀರು ಹರಿದು ಹೋಗಿದೆ. ವಾಪಸು ಬರುವುದಿಲ್ಲ. ಜನರ ವಿಶ್ವಾಸ ಏಕೆ ದೊರಕಲಿಲ್ಲ ಎಂಬುದೇ ನನ್ನನ್ನು ಕಾಡುತ್ತಿದೆ.

* ಚುನಾವಣೋತ್ತರ ಕಾಲಘಟ್ಟದಲ್ಲಿ ನಿಮ್ಮ ರಾಜಕೀಯ ಗುರಿಗಳೇನು?

ಪಕ್ಷ ಹೇಳಿದಂತೆ ಸ್ಪರ್ಧಿಸಿದ್ದೆ. ಪಕ್ಷವು ಮನೆಗೆ ಹೋಗು ಎಂದರೆ ಹೋಗುವೆ. ಕೆಲಸ ಮಾಡು ಎಂದರೆ ಮಾಡುವೆ. ಸದ್ಯಕ್ಷೆ ಕ್ಷೇತ್ರದಲ್ಲಿದ್ದುಕೊಂಡೇ ರಾಜಕಾರಣ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ.

* ಉಪಚುನಾವಣೆಯಲ್ಲಿ ದೊರಕಿದ್ದ ಗೆಲುವು ಸರ್ವಾಧಿಕಾರದ ವಿರುದ್ಧದ ಗೆಲುವು ಎಂದು ಬಣ್ಣಿಸಿದ್ದಿರಿ. ಈಗ ಅದೇ ಸರ್ವಾಧಿಕಾರದ ವಿರುದ್ಧ ಸೋತೆನೆಂದೆನಿಸುತ್ತದೆಯೇ?

ಸರಿಯೋ, ತಪ್ಪೋ, ಸರ್ವಾಧಿಕಾರದ ಮೋದಿಗೆ ಇಡೀ ದೇಶವೇ ಬೆಂಬಲ ನೀಡಿದೆ. ಜನ ಅವರನ್ನು ಮೆಚ್ಚಿದ್ದಾರೋ, ಬೇರೆ ರೀತಿಯಲ್ಲೀ ಮತ ಗಳಿಸಿದ್ದಾರೋ ಗೊತ್ತಿಲ್ಲ. ಅವರ ಪಕ್ಷದ ಮುಖಂಡರೇ ಅವರನ್ನು ಟೀಕಿಸಿದ್ದರು. ಜನಾದೇಶವನ್ನು ಎಲ್ಲರೂ ಗೌರವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.