ADVERTISEMENT

ಪಾದಚಾರಿ ರಸ್ತೆ; ಎಲ್ಲಿದೆಯೋ ಕಾಣೆ !

ಜಿಲ್ಲೆಯ ಎಲ್ಲೆಡೆ ಒತ್ತುವರಿ ಕಾಟ, ಸ್ಪಂದಿಸದ ಸ್ಥಳೀಯ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 11:37 IST
Last Updated 26 ಡಿಸೆಂಬರ್ 2020, 11:37 IST
ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಪಾದಚಾರಿ ರಸ್ತೆ ಸಂಪೂರ್ಣ ಒತ್ತುವರಿಯಾಗಿರುವುದು
ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಪಾದಚಾರಿ ರಸ್ತೆ ಸಂಪೂರ್ಣ ಒತ್ತುವರಿಯಾಗಿರುವುದು   

ಬಳ್ಳಾರಿ: ಜಿಲ್ಲೆಯಲ್ಲಿ ಪಾದಚಾರಿ ರಸ್ತೆ ಎಲ್ಲಿದೆ ಎಂಬುದು ಪಾದಚಾರಿಗಳಿಗಿಂತಲೂ ಅಂಗಡಿ ಮಾಲೀಕರಿಗೆ ಚೆನ್ನಾಗಿ ಗೊತ್ತು. ರಸ್ತೆ ಬದಿ ವ್ಯಾಪಾರಿಗಳಿಗೂ ಗೊತ್ತು. ಹೀಗಾಗಿ ಅವರು ಅದನ್ನು ಪಾದಚಾರಿಗಳಿಗೆ ಕಾಣದಂತೆ ಮಾಡಿಬಿಟ್ಟಿದ್ದಾರೆ. ಈ ರಹಸ್ಯವನ್ನು ಬಲ್ಲವರು ಇನ್ನೂ ಇಬ್ಬರಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು!

ಪಾದಚಾರಿ ರಸ್ತೆ ಪಾದಚಾರಿಗಳಿಗೆ ಮೀಸಲೇ ಹೊರತು ವ್ಯಾಪಾರಿಗಳಿಗೆ ಅಲ್ಲ ಎಂಬುದು ನಿಯಮ. ಆದರೆ ಅದು ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿದೆ. ಹೀಗಾಗಿ ಪಾದಚಾರಿಗಳು ಮುಖ್ಯರಸ್ತೆಯಲ್ಲೇ ನಡೆಯಬೇಕು. ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ನಡೆಯಬೇಕು. ಎಳೆನೀರು, ಬಟ್ಟೆ, ಅಟಿಕೆ ಸೇರಿ ಮಾರಾಟ ವಸ್ತುಗಳ ತೆರೆದ ದಾಸ್ತಾನು ಕೊಠಡಿಯಾಗಿರಬೇಕು. ಚಹಾದಂಗಡಿ, ಚಾಟ್ಸ್‌ ಅಂಗಡಿಗಳಿರಬೇಕು. ಸ್ಕೂಟರ್‌, ಬೈಕ್‌ ಪಾರ್ಕಿಂಗ್‌ ಇರಬೇಕು..!! ರಸ್ತೆಗಳು ವಿಸ್ತರಣೆಯಾದರೂ ಈ ಸನ್ನಿವೇಶ ಬದಲಾಗಿಲ್ಲ ಎಂಬುದೇ ವಿಪರ್ಯಾಸ.

ಇದು ದಶಕಕ್ಕೂ ಮೀರಿದ ಕಾಲದಿಂದ ನಡೆದು ಬಂದಿರುವ ಪದ್ಧತಿ. ಪಾದಚಾರಿ ರಸ್ತೆಯನ್ನು ಬಿಡಿಸಿಕೊಡಿ ಎಂದರೆ ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ಪೊಲೀಸರತ್ತ ಬೆರಳು ಮಾಡುತ್ತಾರೆ. ಪೊಲೀಸರು ಅದೇ ಅಧಿಕಾರಿಗಳತ್ತ ತಿರುಗಿ ಬೆರಳು ತೋರಿಸುತ್ತಾರೆ. ಆದರೆ ವ್ಯಾಪಾರಿಗಳು ಬಹಿರಂಗವಾಗಿ ಹೆದರುವುದು ಪೊಲೀಸರಿಗೆ, ಕಾಣದೇ ಹೆದರುವುದು ಆಡಳಿತಾಧಿಕಾರಿಗಳಿಗೆ. ಅದರಿಂದ ಜನರಿಗಂತೂ ಯಾವ ಪ್ರಯೋಜನವೂ ಆಗಿಲ್ಲ.

ADVERTISEMENT

ತಮಗೆ ಮೀಸಲಿಟ್ಟ ಜಾಗದಲ್ಲಿ ನಡೆದು ಹೋಗಲು, ಕನಿಷ್ಠ ಪಕ್ಷ ಕೆಲ ನಿಮಿಷ ನಿಂತುಕೊಳ್ಳಲೂ ಜನರಿಗೆ ಅವಕಾಶವಿಲ್ಲ. ಆದರೆ ಅದೇ ರಸ್ತೆಗಳ ಅಭಿವೃದ್ಧಿಗೆ ಮಾತ್ರ ಪ್ರತಿ ವರ್ಷವೂ ಅನುದಾನ ಬಿಡುಗಡೆಯಾಗುತ್ತದೆ. ಅಭಿವೃದ್ದಿ ಕಾರ್ಯವೂ ನಡೆಯುತ್ತದೆ. ಹಳೇ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ಗಳನ್ನು ಹಾಕುವುದು. ಕಾಂಕ್ರಿಟ್‌ ಹಾಕುವುದು, ಸೂಚನಾ ಫಲಕಗಳನ್ನು ಹಾಕುವುದು ನಡೆಯುತ್ತಲೇ ಇರುತ್ತದೆ.

ಆದರೆ ಜನ ಮಾತ್ರ ರಸ್ತೆ ಮಧ್ಯದಲ್ಲೇ ನಡೆಯಬೇಕು. ಈ ಪರಿಸ್ಥಿತಿಯಿಂದ ನೇರ ಸಂಕಷ್ಟಕ್ಕೆ ಒಳಗಾಗುವವರು ವಾಹನ ಸವಾರರು. ಬೈಕ್‌ ಸವಾರರು ಹೇಗೋ ಸಾವರಿಸಿಕೊಂಡು ಸಾಗುತ್ತಾರೆ. ಕಾರು, ವ್ಯಾನ್‌ಗಳ ಚಾಲಕರಿಗೆ ಇಂಥ ರಸ್ತೆಗಳಲ್ಲಿ ಪರಮ ಸಂಕಟ. ಮತ್ತೆ ವಾಹನ ದಟ್ಟಣೆಯ ಸಮಸ್ಯೆ ಪಾದಚಾರಿಗಳಿಗೆ ಸಂಕಟ ತರುತ್ತಿರುತ್ತದೆ. ಅಪಘಾತಗಳೂ ನಡೆಯುತ್ತಿರುತ್ತವೆ. ಗಾಯಗೊಳ್ಳುವುದು ಅದೇ ಜನರೇ.

ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಯ ಪ್ರಮುಖ ಬೆಂಗಳೂರು ರಸ್ತೆಯು ಇಂಥ ಸನ್ನಿವೇಶದ ತೀವ್ರತೆಗೆ ದಿನವೂ ಸಾಕ್ಷಿ. ಉಳಿದಂತೆ ಪಾಲಿಕೆ ಮುಂಭಾಗದ ರಸ್ತೆ, ಕಪ್ಪಗಲ್ಲು ರಸ್ತೆ, ತೇರು ಬೀದಿ, ಹೊಸ ಬಸ್‌ ನಿಲ್ದಾಣ ರಸ್ತೆ, ಎಪಿಎಂಸಿ ರಸ್ತೆ, ಕೌಲ್‌ಬಜಾರ್‌ ಮುಖ್ಯ ರಸ್ತೆಗಳಲ್ಲಿ ಪಾದಚಾರಿಗಳು ಅನಾಥರಾಗಿ ಕಾಣುತ್ತಾರೆ. ಬಡಾವಣೆಗಳಲ್ಲಿ ಪರಿಸ್ಥಿತಿ ವಾಹನಗಳ ನಿಲುಗಡೆಗೆ ಪಾದಚಾರಿ ಮಾರ್ಗವಿದೆ!

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದರೆ ಜನರ ಪ್ರತಿರೋಧ ಮಾತ್ರ ಕಾಣುತ್ತಿಲ್ಲ. ಕೆಲವು ವರ್ಷಗಳ ಹಿಂದೆ ತೆರವು ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಈಗ ಸುಮ್ಮನಿದ್ದಾರೆ. ‘ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೊಟ್‌ ತಿಳಿಸಿದ್ದಾರೆ.

ಕುರುಗೋಡು ಪಟ್ಟಣದ ಮುಖ್ಯವೃತ್ತದ ಸುತ್ತಮುತ್ತ ಪಾದಚಾರಿ ರಸ್ತೆಯು ದ್ವಿಚಕ್ರ ವಾಹನಗಳ ನಿಲುಗಡೆಗೆ ಮೀಸಲಾಗಿದೆ. ತಳ್ಳು ಗಾಡಿ ವ್ಯಾಪಾರಿಗಳೂ ಇಲ್ಲೇ ನಿಲ್ಲುತ್ತಾರೆ. ಬಾದನಹಟ್ಟಿ ಮತ್ತು ಗೆಣಿಕೆಹಾಳು ರಸ್ತೆಯಲ್ಲೂ ಇದೇ ಪರಿಸ್ಥಿತಿ. ಮುಖ್ಯವೃತ್ತದಲ್ಲಿ ಭಾರಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವಾಗಲೇ ದ್ವಿಚಕ್ರ ವಾಹನಗಳು ಪಾದಚಾರಿ ರಸ್ತೆಯಲ್ಲಿಯೇ ನಿಲ್ಲುತ್ತವೆ.

ಮರಿಯಮ್ಮನಹಳ್ಳಿ ಪಟ್ಟಣದ ನಡುವೆ ಹೊಸಪೇಟೆ-ಶಿವಮೊಗ್ಗ ದ್ವಿಪಥ ರಾಜ್ಯ ಹೆದ್ದಾರಿ-25ರ ಎರಡು ಬದಿಯಲ್ಲಿ ಸರಿಯಾದ ಪಾದಚಾರಿ ರಸ್ತೆ ಇಲ್ಲದೆ ಎಲ್ಲ ಅಂಗಡಿ, ಹೋಟೆಲ್‌ಗಳೆ ಆವರಿಸಿಕೊಂಡಿವೆ. ಬಸ್ ನಿಲ್ದಾಣ, ಮುಖ್ಯವೃತ್ತದಲ್ಲೂ ಅಂಗಡಿಗಳೇ ಇವೆ.

ಸಂಡೂರಿನ ಬಸ್ ನಿಲ್ದಾಣದ ಪಾದಚಾರಿ ರಸ್ತೆಯಲ್ಲೇ ಹೋಟೆಲ್‌, ಎಳೆನೀರು, ಹಣ್ಣು ಮಾರಾಟಗಾರರಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಕರವೇ ಅಧ್ಯಕ್ಷ ಪಿ. ರಾಜು ಹಾಗೂ ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ಅವರ ಆಗ್ರಹ.

ಸಿರುಗುಪ್ಪ ನಗರದಲ್ಲಿರುವ ಎರಡು ಮುಖ್ಯ ರಸ್ತೆಗಳ ಚರಂಡಿ ಮೇಲೆ ನಿರ್ಮಿಸಿದ ಪಾದಚಾರಿ ರಸ್ತೆಯನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿದ್ದಾರೆ.

ಪ್ರಜಾವಾಣಿ ತಂಡ: ಕೆ.ನರಸಿಂಹಮೂರ್ತಿ, ಶಶಿಕಾಂತ ಎಸ್‌.ಶೆಂಬೆಳ್ಳಿ, ಎಚ್‌.ಎಂ.ಪಂಡಿತಾರಾಧ್ಯ, ಎಂ.ಬಸವರಾಜಯ್ಯ, ಸಿ.ಶಿವಾನಂದ, ಕೆ.ಸೋಮಶೇಖರ, ಎ.ಎಂ.ಸೋಮಶೇಖರಯ್ಯ, ಎ.ವಾಗೀಶ. ಎಚ್‌.ಎಸ್‌.ಶ್ರೀಹರಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.