ಹೂವಿನಹಡಗಲಿ: ‘ಮದುವೆಯಾಗದ ಅವಿವಾಹಿತೆಯರು, ಪರಿತ್ಯಕ್ತರು, ವಿಧವೆಯರು ಸೇರಿದಂತೆ ಒಂಟಿತನದಿಂದ ಜೀವನ ನಡೆಸುವ ಮಹಿಳೆಯರ ಬದುಕು ಅಸಹನೀಯವಾಗಿದೆ. ಸರ್ಕಾರ ಅವರಿಗೆ ಮನೆ, ಮಾಸಾಶನ, ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಸಂಘಟನೆಯ ಮುಖಂಡ ಯು.ಬಸವರಾಜ ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಒಂಟಿ ಮಹಿಳೆಯರ ಸಂರಕ್ಷಣಾ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ‘ಒಂಟಿ ಮಹಿಳೆಯರು ಲಿಂಗ ತಾರತಮ್ಯದ ಜತೆಗೆ, ಸಾಮಾಜಿಕ ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕು’ ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ಒಂಟಿ ಮಹಿಳೆಯರ ಸಮೀಕ್ಷೆ ನಡೆಸಿ, ಅವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಚಾಲಕಿ ಪಾರ್ವತಿ, ವಿನೋದ, ಪ್ರೇಮಾ, ಗಂಗಮ್ಮ, ಅಕ್ಕಮ್ಮ, ರಾಧಮ್ಮ, ಹೊನ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.