ADVERTISEMENT

ಬಳ್ಳಾರಿ: ಬೀದಿ ನಾಯಿಗಳ ಉಪಟಳಕ್ಕೆ ಬೆಚ್ಚಿದ ಜನತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 5:31 IST
Last Updated 10 ಜುಲೈ 2023, 5:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹೊನಕೆರೆ ನಂಜುಂಡೇಗೌಡ

ಬಳ್ಳಾರಿ: ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಹುಚ್ಚು ನಾಯಿ ಕಡಿದು ಮಕ್ಕಳಿಬ್ಬರು ಮೃತಪಟ್ಟರು. ಕೆಲ ದಿನಗಳ ಬಳಿಕ ಬಳ್ಳಾರಿಯ ಬಂಡಿಮೋಟ್‌ ಪ್ರದೇಶದಲ್ಲಿ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಳು. ಅಷ್ಟೇ ಅಲ್ಲ, ಜಿಲ್ಲೆಯ ಅಲ್ಲಲ್ಲಿ ಹುಚ್ಚು ನಾಯಿ, ಬೀದಿ ನಾಯಿಗಳು ದಾರಿಹೋಕರ ಮೇಲೆ ಮಕ್ಕಳ ಮೇಲೆ ದಾಳಿ ನಡೆಸುವ ಪ್ರಕರಣಗಳೂ ನಡೆಯುತ್ತಲೇ ಇವೆ.  

ಬಾದನಹಟ್ಟಿಯಲ್ಲಿ ‘ಪ್ರಜಾವಾಣಿ’ ಐದು ತಿಂಗಳ ಹಿಂದೆ ಫ್ಯಾಕ್ಟ್‌ ಚೆಕ್‌ ನಡೆಸಿತು. ಬೀದಿ ನಾಯಿಗಳು 3 ತಿಂಗಳಲ್ಲಿ 25 ಮಂದಿಗೆ ಕಚ್ಚಿದ್ದವು. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಇತ್ತೀಚೆಗೆ ಕೌಲ್‌ಬಜಾರ್‌ ಪ್ರದೇಶದಲ್ಲಿ ನಾಯಿಯೊಂದು ಒಂದೇ ದಿನ 30 ಜನರಿಗೆ ಕಚ್ಚಿ ಆತಂಕ ಹುಟ್ಟಿಸಿತು. 

ADVERTISEMENT

ಬೀದಿ ನಾಯಿಗಳ ನಿಯಂತ್ರಣ ಮಹಾನಗರಪಾಲಿಕೆ ಹೊಣೆ. ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿಗಳ ಜವಾ ಬ್ದಾರಿ. ಈ ಘಟನೆಗಳ ಬಳಿಕ ಮಹಾ ನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಾಯಿಗಳ ನಿಯಂತ್ರಣ ಕುರಿತು ಚರ್ಚೆ ಆರಂಭಿಸಿದ್ದಾರೆ. 

 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭೆ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದರ ಹಿಂದೆಯೇ ತಾ.ಪಂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಗಳು ನಡೆದಿವೆ.

ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಮಾಡಿ, ರೇಬಿಸ್‌ ನಿರೋಧಕ ಲಸಿಕೆ ಹಾಕುವ ಪ್ರಕ್ರಿಯೆ ಅನುಷ್ಠಾನ ಆಗಬೇಕಿದೆ. ಈ ಸಂಬಂಧ  ಪಾಲಿಕೆ ಎರಡು ಸಲ ಟೆಂಡರ್‌ ಕರೆದಿದೆ. ಎರಡೂ ಸಲ ಒಂದೇ ಒಂದು ಏಜೆನ್ಸಿ ಅರ್ಜಿ ಹಾಕಿದೆ. ಪ್ರತಿ ನಾಯಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ರೇಬಿಸ್‌ ನಿರೋಧಕ ಲಸಿಕೆ ಹಾಕಲು ₹ 1,650 ನಿಗದಿಪಡಿಸಿದೆ. ಈ ಉದ್ದೇಶಕ್ಕಾಗಿ ₹ 3.07 ಕೋಟಿ ಇಡಲಾಗಿದೆ. 

2020ರಲ್ಲಿ ನಡೆಸಿರುವ ಜಾನುವಾರು ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 29 ಸಾವಿರ ಬೀದಿ ನಾಯಿಗಳಿವೆ. ಬಳ್ಳಾರಿ ನಗರದಲ್ಲಿ 18ರಿಂದ 20 ಸಾವಿರ ಇರಬಹುದು. ನಾಯಿಗಳು ಎರಡು ವರ್ಷಕ್ಕೆ ಮೂರು ಸಲ ಆರೇಳು ಮರಿಗಳನ್ನು ಹಾಕುತ್ತವೆ. ಇದರಲ್ಲಿ ಶೇ 50ರಷ್ಟು ಉಳಿಯುತ್ತವೆ. ಹೀಗಾಗಿ, ಬೀದಿ ನಾಯಿಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಸಂತಾನ ಹರಣ ಚಿಕಿತ್ಸೆಗೆ ನಾಯಿಗಳನ್ನು ಹಿಡಿಯಬೇಕು. ಶಸ್ತ್ರ ಚಿಕಿತ್ಸೆ ಬಳಿಕ ಕನಿಷ್ಠ ಮೂರು ದಿನ ಅವುಗಳಿಗೆ ಆರೈಕೆ ಮಾಡಬೇಕು. ಬಳಿಕ ಮೂಲ ಸ್ಥಾನಕ್ಕೆ ಬಿಡಬೇಕು. ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಹೀಗಿದ್ದಾಗ ಮಾತ್ರ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ವಿವಾದ

2021– 22ರಲ್ಲಿ ಪಂಜಾಬ್ ಮೂಲದ ‘ಕಾವ’ ಸಂಸ್ಥೆ  4222 ನಾಯಿಗಳಿಗೆ ತಲಾ ₹ 1,500ರಂತೆ ಶುಲ್ಕ ಪಡೆದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ, ರೇಬಿಸ್‌ ರೋಗ ನಿರೋಧಕ ಲಸಿಕೆ ಹಾಕಿದೆ. ಈ ವಿಷಯದಲ್ಲಿ ಪಾಲಿಕೆ ಮತ್ತು ಪಂಜಾಬ್‌ ಸಂಸ್ಥೆ ನಡುವೆ ವಿವಾದ ಸೃಷ್ಟಿಯಾಗಿತ್ತು.

ಪ್ರತಿ ದಿನ 200 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್‌ ನಿರೋಧಕ ಲಸಿಕೆ ಹಾಕಬೇಕು ಎಂಬ ಷರತ್ತನ್ನು ಪಾಲಿಕೆ ಹಾಕಿತ್ತು. ಆದರೆ, ಈ  ಸಂಸ್ಥೆ ದಿನಕ್ಕೆ 300 ರಿಂದ 400 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾಗಿ ಪ್ರತಿಪಾದಿಸಿತ್ತು. ಇದಕ್ಕೆ ಸರಿಯಾದ ಪುರಾವೆ ಒದಗಿಸಲಿಲ್ಲ ಎಂದು ಪಾಲಿಕೆ ಅಧಿಕಾರಿಗಳು ದೂರಿದ್ದರು.

‘4222 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಒಪ್ಪಂದದ ಪ್ರಕಾರವೇ ಮೂರನೇ ವ್ಯಕ್ತಿ (ಪಶುಸಂಗೋಪನಾ ಇಲಾಖೆ ವೈದ್ಯರು) ಪರಿಶೀಲಿಸಿದ್ದಾರೆ’ ಎಂಬುದು ಸಂಸ್ಥೆ ವಾದಿಸಿತ್ತು. 

ಈಗ ಇದೇ ಸಂಸ್ಥೆ ಅರ್ಜಿ ಹಾಕಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ನಾಯಿಗಳ ನಿಯಂತ್ರಣಕ್ಕೆ  ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಯನ ಮಾಡುವ ಗೋಜಿಗೆ ಜಿಲ್ಲಾ ಆಡಳಿತವಾಗಲೀ, ಪಾಲಿಕೆ ಅಧಿಕಾರಿಗಳಾಗಲೀ ಹೋದಂತಿಲ್ಲ. ‘ಊರಿಗೊಬ್ಬಳೇ ಪದ್ಮಾವತಿ’ ಎಂಬ ಗಾದೆ ಮಾತಿಗೆ ಜೋತು ಬಿದ್ದಂತಿದೆ.

ಮನೇಕಾ ಗಾಂಧಿ ಭಯ!

‘ಬೀದಿ ನಾಯಿಗಳಿಗೆ ಏನಾದರೂ ತೊಂದರೆಯಾದರೆ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ಅವರಿಂದ ನೇರವಾಗಿ ಫೋನ್‌ ಬರುತ್ತದೆ’ ಎಂಬ ಭಯ ಅಧಿಕಾರಿಗಳನ್ನು ಕಾಡುತ್ತಿದೆ.

‘ಇದರಿಂದ ನಾಯಿ ಗಳ ತಂಟೆಗೆ ಹೋಗಲು ಅಧಿಕಾರಿಗಳು ಹಿಂಜರಿಯು ತ್ತಾರೆ’ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ಗುತ್ತಿಗೆದಾರ ಏಜೆನ್ಸಿಗೆ ಷರತ್ತು

ಬೀದಿ ನಾಯಿಗಳ ನಿಯಂತ್ರಣದ ಸಂಬಂಧ ಕರೆಯಲಾಗಿರುವ ಟೆಂಡರ್‌ಗೆ ಒಂದು ಅರ್ಜಿ ಮಾತ್ರ ಬಂದಿದೆ ಎಂದು ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಹೇಳಿದ್ದಾರೆ.

ಮುಂದೇನು ಎಂಬ ಕುರಿತು ತೀರ್ಮಾನಿಸಲಾಗುವುದು. ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್‌ ನಿರೋಧಕ ಲಸಿಕೆ ಹಾಕುವ ಗುತ್ತಿಗೆ ಪಡೆವ ಸಂಸ್ಥೆಗೆ ಕೆಲವು ಷರತ್ತು ಹಾಕಲಾಗುವುದು. ಈ ಪ್ರಕ್ರಿಯೆ ಮೇಲ್ವಿಚಾರಣೆಗೆ ಸಮಿತಿ ರಚಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.